ಭಾನುವಾರ, ಮೇ 9, 2021
25 °C

ಸಾಲ ವಸೂಲಾತಿ ಸ್ಥಗೀತಗೊಳಿಸಲು ಸೂಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕ್‌ಗಳ ಮೂಲಕ ಕೃಷಿಕರಿಗೆ ನೀಡಲಾದ ಸಾಲಗಳನ್ನು ವಸೂಲಿ ಮಾಡಬಾರದು. ಮತ್ತು ಅಲ್ಪಾವಧಿ ಸಾಲವನ್ನು ಮಧ್ಯಮಾವಧಿ ಹಾಗೂ ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ತಕ್ಷಣಕ್ಕೆ ಸಾಲ ವಸೂಲಾತಿ ಸ್ಥಗಿತಗೊಳಿಸಲು ಸೂಚಿಸಿ ಸರ್ಕಾರ ಸುತ್ತೋಲೆಯನ್ನು ಬ್ಯಾಂಕ್‌ಗಳಿಗೆ ಹೊರಡಿಸಿದೆ ಎಂದು ತಿಳಿಸಿದರು.ಔರಾದ್ ತಾಲ್ಲೂಕಿನ ವಿವಿಧೆಡೆ ಬರ ಪರಿಸ್ಥಿತಿ ಪರಿಶೀಲನೆ ನಂತರ ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ಸಮಸ್ಯೆ ಇರುವುದು ಕಂಡು ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 2.65 ಕೋಟಿ ಹಣ ಲಭ್ಯವಿದೆ. ಅಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 33 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದನ್ನು ಬಳಸಿ ಕುಡಿಯುವ ನೀರು ಯೋಜನೆಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದು ಸೂಚಿಸಿದರು.ಇದರಂತೆ ರಾಜ್ಯದಲ್ಲಿ ಒಟ್ಟಾರೆ ಬರ ಪರಿಸ್ಥಿತಿ ನಿರ್ವಹಣೆಗಾಗಿಯೇ 194 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಜಾನುವಾರುಗಳ ಮೇವು ಸಮಸ್ಯೆಯನ್ನು ಬಗೆಹರಿಸಲು ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಶೇ. 50 ರ ರಿಯಾಯಿತಿ ದರದಲ್ಲಿ ಮೇವು ಒದಗಿಸಬೇಕು ಎಂದು ಆದೇಶಿಸಲಾಗಿದೆ ಎಂದು ಹೇಳಿದರು.ಶಾಸಕರಾದ ಈಶ್ವರ ಖಂಡ್ರೆ ಮತ್ತು ಬಂಡೆಪ್ಪ ಕಾಶೆಂಪೂರ್ ಅವರು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಜಾಸ್ತಿ ಇದೆ. ಇದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಡ್ಡಿಯಾಗಿದೆ ಎಂದು ದೂರಿದರು.  ಇದಕ್ಕೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮಾಹಿತಿ ನೀಡಿದ ವಿದ್ಯುತ್ ನಿಗಮದ ಅಧಿಕಾರಿಗಳು, ಆರ್‌ಟಿಪಿಎಸ್‌ನಲ್ಲಿ ಉಂಟಾದ ದೋಷದಿಂದಾಗಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಈಗ ಅಲ್ಲಿ ಸಮಸ್ಯೆ ಬಗೆಹರಿದಿರುವುದರಿಂದ ಜಿಲ್ಲೆಯಲ್ಲಿಯು ಶುಕ್ರವಾರದಿಂದ ವಿದ್ಯುತ್ ಪೂರೈಕೆ ಕೊರತೆ ಬಗೆಹರಿಯಲಿದೆ ಎಂದು ಹೇಳಿದರು. ರೈತರ ಸಾಲ ಮತ್ತು ಬಡ್ಡಿ ಮನ್ನಾ ಮಾಡುವಂತೆ ಕೆಲ ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಹಂತದಲ್ಲಿ ಅದನ್ನು ಹೇಳಲು ಬರುವುದಿಲ್ಲ.  ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಕೇಂದ್ರದ ತಂಡ ಏನು ವರದಿ ನೀಡಿದೆ ಎಂಬುದರ ಅರಿವು ನನಗಿಲ್ಲ.ಶೀಘ್ರದಲ್ಲಿಯೇ ದೆಹಲಿಗೆ ನಿಯೋಗ ಹೋಗಲಿದ್ದು, ಕೇಂದ್ರದ ನಿಲುವನ್ನು ಆಧರಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಈ ಹಂತದಲ್ಲಿ ಪ್ರತಿಕ್ರಿಯೆ ನೀಡಲಾಗುವುದಿಲ್ಲ ಎಂದು ತಳ್ಳಿ ಹಾಕಿದರು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ, ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ, ಶಾಸಕರಾದಬಸವರಾಜ ಪಾಟೀಲ್ ಅಟ್ಟೂರು, ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಾಜಶೇಖರ ಪಾಟೀಲ್, ರಹೀಮ್‌ಖಾನ್, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಹುಮನಾಬಾದ್, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿ ಎಸ್.ಎಂ. ಜಾಮದಾರ್, ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೀರ್ ಅನೀಸ್ ಅಹ್ಮದ್ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.