ಬುಧವಾರ, ಜನವರಿ 29, 2020
24 °C

ಸಾಲ ವಿತರಣೆ ವಿಳಂಬ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ ಪಟ್ಟಣ ಶಾಖೆಯಲ್ಲಿ ಬೆಳೆ ಸಾಲ ನೀಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ವ್ಯವಸ್ಥಾಪಕರ ಜತೆ ತೀವ್ರ ವಾಗ್ವಾದ ನಡೆಸಿದ ಘಟನೆ ಮಂಗಳವಾರ ನಡೆದಿದೆ.ಬೆಳೆ ಸಾಲ ಮರುಪಾವತಿ ಮಾಡಿ ಅಗತ್ಯ ದಾಖಲೆ ಒದಗಿಸಿ ಸಾಲ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಮೀನುಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಪ್ರತಿದಿನ ಬ್ಯಾಂಕ್‌ಗೆ ಅಲೆಯುವಂಥ ಸ್ಥಿತಿ ಬಂದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದು ಬ್ಯಾಂಕ್‌ನಿಂದ ಪಡೆದಿದ್ದ ಅಂದಾಜು ₨ 54  ಸಾವಿರ ಬೆಳೆ ಸಾಲ ಮರುಪಾವತಿ ಮಾಡಿದ್ದೇನೆ. ಕಳೆದ ಒಂದು ತಿಂಗಳಿಂದ ಸಾಲ ನೀಡುವಂತೆ ಮನವಿ ಮಾಡುತ್ತಿದ್ದೆನೆ. ಆದರೂ ಸಾಲ ನೀಡುತ್ತಿಲ್ಲ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅಮೀನಗಡ ಗ್ರಾಮದ ಇಮಾಮ್ ಸಾಬ್ ಬ್ಯಾಂಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆರ್.ವೈ.ಎಫ್.ಐ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಕವಿತಾಳ ಮಾತನಾಡಿ, ಬ್ಯಾಂಕ್‌ನಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನೇರವಾಗಿ ಸಾಲ ಕೇಳುವ ರೈತರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.ಟಿಪ್ಪು ಸುಲ್ತಾನ ಸಂಘದ ಉಪಾಧ್ಯಕ್ಷ ರಫಿ, ಪರಮಾನಂದ ಯತಗಲ್, ಆದಪ್ಪ ಇರಕಲ್, ಅಮರೇಶ ವಟಗಲ್, ಬಸವರಾಜ, ಈರಣ್ಣ ಕೆಳಗೇರಿ ಇತರರು ಇದ್ದರು.ಸಾಲ ವಿತರಣೆಗೆ ಅನಗತ್ಯ ವಿಳಂಬ ಮಾಡುತ್ತಿಲ್ಲ. ಸಾಲ ಮಂಜೂರಾತಿಗೆ ಆದೇಶ ಸಿಕ್ಕ ತಕ್ಷಣವೇ ವಿತರಣೆ ಮಾಡಲಾಗುತ್ತದೆ. ಇಲ್ಲಿನ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ರೈತರಿಗೆ ಒಂದು ವಾರದೊಳಗೆ ಸಾಲ ನೀಡುವುದಾಗಿ ವ್ಯವಸ್ಥಾಪಕ ಕನಕರಾಜು ರೈತರಿಗೆ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)