ಸಾವನದುರ್ಗ ಅಭಯಾರಣ್ಯ ಸಂರಕ್ಷಣೆಗೆ ಕರೆ

ಶುಕ್ರವಾರ, ಜೂಲೈ 19, 2019
26 °C

ಸಾವನದುರ್ಗ ಅಭಯಾರಣ್ಯ ಸಂರಕ್ಷಣೆಗೆ ಕರೆ

Published:
Updated:

ಮಾಗಡಿ: `ಸಾವನದುರ್ಗ ಅಭಯಾರಣ್ಯದಲ್ಲಿ ಕಣ್ಮರೆಯಾಗುತ್ತಿರುವ ಅಮೂಲ್ಯ ಗಿಡಮೂಲಿಕಾ ಸಸ್ಯ ಸಂಪತ್ತು, ಪ್ರಾಣಿ ಮತ್ತು ಪಕ್ಷಿ ಸಂಕುಲವನ್ನು ಸಂರಕ್ಷಿಸಲು ಎಲ್ಲರೂ ಶಾಂತಿಯುತ ಹೋರಾಟ ಮಾಡಬೇಕಿದೆ' ಎಂದು ಪವಿತ್ರಭೂಮಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಗಾಯಕ ಕನ್ನಡ ಕುಮಾರ್ ತಿಳಿಸಿದರು.ತಾಲ್ಲೂಕಿನ ಪರಂಗಿ ಚಿಕ್ಕನಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚೈತನ್ಯ ಪುರೋಭಿವೃದ್ಧಿ ಸಂಘ ಮಾಡಬಾಳ್ ವತಿಯಿಂದ ಸೋಮವಾರ ನಡೆದ ಜೀವ ವೈವಿಧ್ಯ ಸಂರಕ್ಷಣೆ ಮತ್ತು ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ಅಂಗವಾಗಿ ಸಸಿನೆಟ್ಟು ನೀರೆರೆದು ಅವರು ಮಾತನಾಡಿದರು.`ಅಭಿವೃದ್ಧಿಯ ಹೆಸರಿನಲ್ಲಿ ಸಿರಿವಂತರೇ ಮುಂದಾಗಿ ಕೆರೆಕಟ್ಟೆಗಳನ್ನು ಮುಚ್ಚಿ ಮತ್ತು ಸಾವನದುರ್ಗದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಮರಳು ಮತ್ತು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ನಮ್ಮನ್ನು ರಕ್ಷಿಸುತ್ತಿರುವ ಭೂಮಿತಾಯಿ ಬಂಜೆ ಆಗುತ್ತಿದ್ದಾಳೆ' ಎಂದು ಆತಂಕ ವ್ಯಕ್ತಪಡಿಸಿದರು.`ನಮ್ಮೆಲ್ಲರ ವಿಪರೀತ ದಾಹ ನೀಗಿಸಿಕೊಳ್ಳುವ ನೆಪದಲ್ಲಿ ಪರಿಸರವನ್ನು ನಾವು ನಿರಂತರವಾಗಿ ನಾಶ ಮಾಡುತ್ತಿದ್ದೇವೆ. ಇಳುವರಿ ಹೆಚ್ಚಿಸುವ ನೆಪದಲ್ಲಿ ರಸಗೊಬ್ಬರ ಬಳಸಿ, ಭೂಮಿಯ ಸಾರವನ್ನು ಕಳೆಯುತ್ತಿದ್ದೇವೆ. ಆದ್ದರಿಂದ ರೈತರು ಕೊಟ್ಟಿಗೆ ಗೊಬ್ಬರ, ಎರೆಹುಳು, ಹಸಿರೆಲೆ ಗೊಬ್ಬರ ಬಳಸುವುದನ್ನು ರೂಢಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವುದಾಗಿ' ಅವರು ತಿಳಿಸಿದರು.

ಪರಿಸರ ಉಳಿಸುವಂತೆ ಸ್ವರಚಿತ ಲಾವಣಿ ಹಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೇತೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ದಶರಥ ಅವರು, `ಪರಿಸರ ಸಂರಕ್ಷಣೆ ಎಂಬುದು ಕೇವಲ, ವೇದಿಕೆಯ ಮೇಲಿನ ಭಾಷಣಕ್ಕೆ ಸೀಮಿತವಾಗದಿರಲಿ. ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ಒಂದೊಂದಾದರು ಸಸಿ ನೆಟ್ಟು ಅದನ್ನು ಪೋಷಿಸಲು ಮುಂದಾಗಬೇಕು' ಎಂದರು.ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಸಿ ನೆಡುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಉಚಿತವಾಗಿ ಸಸಿಗಳನ್ನು ನೀಡುವುದಾಗಿಯೂ ಅವರು ತಿಳಿಸಿದರು.ರಾಮನಗರದ ಅಲರ್ಟ್ ಫೌಂಡೇಷನ್‌ನ ಮಹಮದ್ ಅಲಿ ಮಾತನಾಡಿ, `ಜಿಲ್ಲೆಯಲ್ಲಿನ ಅರಣ್ಯಭೂಮಿ ಪ್ರತಿನಿತ್ಯವೂ ಒತ್ತುವರಿಯಾಗುತ್ತಿದೆ. ಆದ್ದರಿಂದ ಎಲ್ಲರೂ ಈ ದಿಸೆಯಲ್ಲಿ ಜಾಗೃತರಾಗಬೇಕು' ಎಂದರು.ಚೈತನ್ಯ ಪುರೋಭಿವೃದ್ಧಿ ಸಂಘ ಮಾಡಬಾಳ್ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಜೀವಿಕಾ ಸಂಚಾಲಕ ಗಂಗಹನುಮಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಮಯ್ಯ, ಸ್ತ್ರೀಶಕ್ತಿ ಸಂಘದ ಮಂಜಮ್ಮ, ಜಯಮ್ಮ, ಸಿಆರ್‌ಪಿ ತಿಮ್ಮೇಗೌಡ, ಶಿವಣ್ಣ, ಮುಖ್ಯಶಿಕ್ಷಕ ಗೋಪಾಲ್ ಮಾತನಾಡಿದರು.ಲಕ್ಷ್ಮೀನರಸಿಂಹಯ್ಯ, ಅಸ್ಲಂ ಪಾಷಾ, ಚಿಕ್ಕನರಸಿಂಹಯ್ಯ, ಶಾಲಾ ಶಿಕ್ಷಕರು, ಗ್ರಾಮಸ್ಥರು ಸೇರಿದಂತೆ ಮೊದಲಾದ ವರು  ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಪರಿಸರ ನಾಶದ ಪರಿಣಾಮ ಪ್ರತಿಬಿಂಬಿಸುವ ರೂಪಕವನ್ನು ಶಾಲಾ ಮಕ್ಕಳು ಪ್ರದರ್ಶಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry