ಸಾವಯವ ಕೃಷಿಯಲ್ಲಿ ಸಮೃದ್ಧ ಬಾಳೆ

7

ಸಾವಯವ ಕೃಷಿಯಲ್ಲಿ ಸಮೃದ್ಧ ಬಾಳೆ

Published:
Updated:

ಹೊಳಲ್ಕೆರೆ ತಾಲ್ಲೂಕಿನ ಚಿಕ್ಕ ಗ್ರಾಮ ಕಾಮನಹಳ್ಳಿ ಸಾವಯವ ಕೃಷಿಯಲ್ಲಿ ಸಾಧನೆಯ ಶಿಖರದತ್ತ ದಾಪುಗಾಲು ಹಾಕುತ್ತಿದೆ.ಚಿಕ್ಕಜಾಜೂರಿನಿಂದ 13 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಬಹುತೇಕ ರೈತರು ಸಾವಯವ ಕೃಷಿಯನ್ನು ಅವಲಂಬಿಸಿದ್ದಾರೆ. ಇದು ಕೃಷಿ ಅಧಿಕಾರಿಗಳಲ್ಲಿ ಆಶ್ಚರ್ಯ ಮತ್ತು ಸಂತೋಷ ಮೂಡಿಸಿದೆ. ಗ್ರಾಮದ ರೈತರು ಕೃಷಿ ಇಲಾಖೆಯೊಂದಿಗೆ ನಿಖಟ ಸಂಪರ್ಕ ಹೊಂದಿದ್ದು, ಪ್ರತಿ ಬೆಳೆಗೂ ಅಧಿಕಾರಿಗಳ ಸಲಹೆ ಸಹಕಾರ ಪಡೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.ರೈತರ ಕೋರಿಕೆ ಮೇರೆಗೆ ಪ್ರತಿ ವರ್ಷ ಕೃಷಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ಗ್ರಾಮಸ್ಥರು ಕೇವಲ ತಮ್ಮ ಜಮೀನಿನಲ್ಲಿ ಬೆಳೆಯುವ ರಾಗಿ, ಜೋಳ, ಹತ್ತಿಗಳಿಗೆ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಬಾಳೆಗೂ ಸಾವಯವ ಗೊಬ್ಬರ ಬಳಸುತ್ತಿದ್ದಾರೆ.ಗ್ರಾಮದ ರೈತ ಜಿ.ಎಸ್. ಚಂದ್ರಶೇಖರಪ್ಪ ತಮ್ಮ ತೋಟಕ್ಕೆ ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ. ಮೂರು ಎಕರೆ ಜಮೀನಿಗೆ ಸುಮಾರು 2,500 ಬಾಳೆ ಸಸಿಗಳನ್ನು ಹಾಕಿದ್ದು, ಆರಂಭದಿಂದಲೂ ಸಾವಯವ ಗೊಬ್ಬರ ಮತ್ತು ಔಷಧೋಪಚಾರ ಮಾಡುತ್ತಿದ್ದಾರೆ. ಇವರ ಆರೈಕೆಯಿಂದ ಬಾಳೆ ಸಮೃದ್ಧವಾಗಿ ಬೆಳೆದು ನಿಂತಿದೆ.ಸಾವಯವ ಗೊಬ್ಬರದ ಜತೆಗೆ `ಪಂಚಗವ್ಯ~ (ಮಜ್ಜಿಗೆ, ಹಾಲು, ತುಪ್ಪ ಅಥವಾ ಹರಳೆಣ್ಣೆ, ದ್ವಿದಳಧಾನ್ಯಗಳ ನುಚ್ಚು ಮತ್ತು ಬೆಲ್ಲ ಇವುಗಳೆಲ್ಲವನ್ನು ನಿಯಮಿತ ಪ್ರಮಾಣದಲ್ಲಿ ಸೇರಿಸಿ ರುಬ್ಬಬೇಕು) ವಸ್ತುಗಳನ್ನು ಸಗಣಿ ಮತ್ತು ನಾಟಿ ಹಸುವಿನ ಗೋಮೂತ್ರದೊಂದಿಗೆ ಬೆರೆಸಿ ಸೋಸಬೇಕು. ನಂತರ ಅದನ್ನು ಬಾಳೆ ಗಿಡಗಳಿಗೆ ಸಿಂಪಡಿಸಿದರೆ ರೋಗ ನಿಯಂತ್ರಣದ ಜತೆ ಉತ್ತಮ ಫಸಲನ್ನು ಪಡೆಯಬಹುದು ಎಂಬುದು ಚಂದ್ರಶೇಖರಪ್ಪ ಅವರ ಅನುಭವದ ಮಾತು.ಗ್ರಾಮದಲ್ಲಿನ ರೈತರ ಸಾಧನೆಯನ್ನು ಖುದ್ದು ನೋಡಲು ಬಂದ ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು ಚಂದ್ರಶೇಖರಪ್ಪ ಅವರ ಕೃಷಿ ಪದ್ಧತಿಯನ್ನು ಮೆಚ್ಚಿಕೊಂಡಿದ್ದಾರೆ. ಇತರ ರೈತರಿಗೂ ಇದು ಮಾದರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಕಳೆದ ತಿಂಗಳು ಗ್ರಾಮದಲ್ಲಿ ಆಯೋಜಿಸಿದ್ದ ಸಾವಯವ ಬಾಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬಾಳೆ ವಿಷಯ ತಜ್ಞ ಎನ್.ಎಂ. ಗಿರೀಶ್, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕರಾದ ವೀರಮ್ಮ, ವಿಶ್ವ ಕೃಷಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಟಿ. ಕೃಪಾ, ಕೃಷಿ ಸಹಾಯಕ ಜಯಪ್ಪ ಮೊದಲಾದವರು ಭಾಗವಹಿಸಿದ್ದರು.ಸಿರಿಧಾನ್ಯಗಳಲ್ಲಿ ಅಕ್ಕಡಿ ಹಾಕಬೇಕು, ಜಿಪ್ಸಂ, ಎರೆಹುಳು ಗೊಬ್ಬರವನ್ನು ಬಳಸಬೇಕು. ಎಲೆ ರೋಗ, ಬುಡಕೊಳೆರೋಗ ನಿಯಂತ್ರಣ ಮತ್ತು ಎರೆಹುಳು ಗೊಬ್ಬರ ಬೂಸ್ಟ್ ಬಾರದಂತೆ ಇಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ರೈತರು ತಾವು ಬೆಳೆದ ಬೆಳೆಯ ಬಗ್ಗೆ ಇಲಾಖೆಯಿಂದ ದೃಢೀಕರಣಪತ್ರ ಪಡೆಯುವುದರಿಂದ ಆಗುವ ಲಾಭವೇನು ಎಂಬ ಬಗ್ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry