ಸಾವಯವ ಕೃಷಿ ಜಾತ್ರೆ

7

ಸಾವಯವ ಕೃಷಿ ಜಾತ್ರೆ

Published:
Updated:
ಸಾವಯವ ಕೃಷಿ ಜಾತ್ರೆ

ಬೆಂಗಳೂರಿನ ಅರಮನೆ ಮೈದಾನದ ಶ್ರೀಕೃಷ್ಣ ವಿಹಾರದಲ್ಲಿ ನಾಳೆಯಿಂದ (ನ. 10ರಿಂದ) ಬೃಹತ್ ಸಾವಯವ ಮೇಳ `ಬಯೋಪ್ಯಾಕ್~ ನಡೆಯಲಿದೆ.  ಮೂರು ದಿನಗಳ  ಈ ಮೇಳವು ರಾಜಧಾನಿಯಲ್ಲಿ ಮೊದಲ ಬಾರಿಗೆ ನಡೆಯಲಿದೆ.ಅಂತರರಾಷ್ಟ್ರೀಯ ಸಾವಯವ ಉತ್ಪನ್ನ ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆಗೊಳ್ಳುತ್ತಿದ್ದು ದೇಶಿ ಸಂಸ್ಥೆಗಳಿಗೆ ಇರುವ  ವಿಪುಲ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಮೇಳವು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. 

                                        ======

ಅದು ಧಾರವಾಡದ ಕೃಷಿ ಮೇಳ. ಮಳಿಗೆಯೊಂದರಲ್ಲಿ ಸೂರಶೆಟ್ಟಿಕೊಪ್ಪದ ಮಹಿಳೆಯೊಬ್ಬರು ಪ್ಲಾಸ್ಟಿಕ್ ಕವರ್‌ನಲ್ಲಿ ಸಾವಯವದಲ್ಲಿ ಬೆಳೆದ ರಾಗಿ, ಸಜ್ಜೆ, ನವಣೆಯ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದ್ದರು. ಭರ್ಜರಿ ವ್ಯಾಪಾರವೂ ಆಯಿತು.ಈ ನಡುವೆ ಕಾಲೇಜೊಂದರ ಪ್ರಾಧ್ಯಾಪಕರ ತಂಡ ಈ ತಿನಿಸುಗಳ ಪೊಟ್ಟಣ ಕಂಡು `ಏನ್ರಿ, ಇದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಡೇಟ್, ಎಕ್ಸ್‌ಪೈರಿ ಡೇಟ್ ಇಲ್ಲ. ಇದು ಸಾವಯವ ಉತ್ಪನ್ನ ಎನ್ನುವುದಕ್ಕೆ ಏನು ಗ್ಯಾರಂಟಿ~ ಅಂತೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು. ತಬ್ಬಿಬ್ಬಾದ ಮಹಿಳೆ, ಉತ್ತರಕ್ಕಾಗಿ ತಡಕಾಡಿದರು!ಹದಿನೈದು ವರ್ಷಗಳ ಹಿಂದೆ ಸಾವಯವ ಉತ್ಪನ್ನಗಳ ಮಾರಾಟ ಮಾಡುವಾಗ ಇಂಥದ್ದೇ ಸಮಸ್ಯೆಗಳು ಎದುರಾಗುತ್ತಿದ್ದವು. ಅದಕ್ಕೆ ಕಾರಣವೂ ಇತ್ತು. ಆ ಉತ್ಪನ್ನಗಳಿಗೆ ಆರೋಗ್ಯಪೂರ್ಣ ಪ್ಯಾಕಿಂಗ್, ಲೇಬಲ್ ಇರುತ್ತಿರಲಿಲ್ಲ. ಸಾವಯವದಲ್ಲೇ ಬೆಳೆದದ್ದು ಎನ್ನುವ ಖಾತರಿಗೆ ದಾಖಲೆಗಳಿರುತ್ತಿರಲಿಲ್ಲ.

 

ಅದರ ನಡುವೆ ಬೆಲೆ ಕೂಡ ದುಬಾರಿ. ಹೀಗಾಗಿ ಕಂಪೆನಿಗಳ `ಪಕ್ಕಾ~ ಪ್ಯಾಕಿಂಗ್ ಪದಾರ್ಥಗಳ ಸ್ಪರ್ಧೆಯಲ್ಲಿ `ಕಚ್ಚಾ~ ಪೊಟ್ಟಣದ ಸಾವಯವ ಉತ್ಪನ್ನಗಳು ಸೋಲುತ್ತಿದ್ದವು! ಪ್ರಾಮಾಣಿಕವಾಗಿ ಸಾವಯವದಲ್ಲಿ ಬೆಳೆದಿದ್ದರೂ, ಅವುಗಳನ್ನು ಗ್ರಾಹಕರಿಗೆ ತಲುಪಿಸಬೇಕಾದರೆ, ತಮ್ಮ `ಸಾಚಾತನವನ್ನೆಲ್ಲ~ ಒರೆಗೆ ಹಚ್ಚಿ ತೋರಿಸಬೇಕಿತ್ತು!  ದೃಢೀಕರಣದ ರಕ್ಷೆ


ದಶಕದಿಂದೀಚೆಗೆ ಸಾವಯವ ದೃಢೀಕರಣ ಸಂಸ್ಥೆಗಳ ಪರ್ವ ಆರಂಭವಾದ ನಂತರ ಇಂಥ ಎಲ್ಲ `ಪ್ರಹಸನಗಳಿಗೆ~ ತೆರೆ ಬಿತ್ತು. `ದೃಢೀಕರಣ ಪ್ರಮಾಣ ಪತ್ರ~ ವಿತರಣಾ ವ್ಯವಸ್ಥೆ ಶುರುವಾದ ಮೇಲೆ ಸಾವಯವ ಉತ್ಪನ್ನಗಳ ವಹಿವಾಟು ಕೂಡ ಹೆಚ್ಚಾಯಿತು. ಅಷ್ಟೇ ಅಲ್ಲ, ತಾಲ್ಲೂಕು ಮಟ್ಟದಲ್ಲೂ ಸಾವಯವ ಮಳಿಗೆಗಳೂ ಆರಂಭವಾದವು.ಸಾವಯವ ಕೃಷಿ, ಮಾರುಕಟ್ಟೆ, ವ್ಯಾಪಾರ-ವಹಿವಾಟು ವಿಸ್ತಾರಗೊಂಡಿತು. ಪ್ರಸ್ತುತ ಆಹಾರ ಮೇಳ, ಸಂಚಾರಿ ಮಾರುಕಟ್ಟೆ, ಮನೆಗೆ ಪೂರೈಕೆ ವ್ಯವಸ್ಥೆ, ಆನ್‌ಲೈನ್ ಮಾರಾಟ, ರೈತರೇ ಉತ್ಪಾದಕ ಕಂಪೆನಿಗಳನ್ನು (ಪ್ರೊಡ್ಯೂಸರ್ಸ್‌ ಕಂಪೆನಿ) ಸ್ಥಾಪಿಸಿಕೊಂಡು ಸಗಟು ರೂಪದಲ್ಲಿ ವ್ಯಾಪಾರ ಮಾಡುವುದು...ಹೀಗೆ ವಿವಿಧ ರೂಪಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಯಶಸ್ಸಿನಿಂದಾಗಿ ಸಾವಯವ ಕೃಷಿ ಪ್ರದೇಶವೂ ವಿಸ್ತರಣೆಯಾಗಿದೆ. `ಸದ್ಯ ಭಾರತದಲ್ಲಿ 1.5 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. 2012ರ ಹೊತ್ತಿಗೆ ಇದು 2 ದಶಲಕ್ಷ ಹೆಕ್ಟೇರ್ ದಾಟುವ ಸಾಧ್ಯತೆ ಇದೆ~ ಎನ್ನುತ್ತದೆ ಇಕೋವಾ - ಸ್ವಯಂ ಸೇವಾ ಸಂಸ್ಥೆಯ ಮೂಲಗಳು.ಸಮೀಕ್ಷೆಯೊಂದರ ಪ್ರಕಾರ ಮುಂದಿನ 6-7 ವರ್ಷಗಳಲ್ಲಿ ದೇಶದಲ್ಲಿ 5 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ಮೂಲಕ ವಿಶ್ವದಲ್ಲೇ ಸಾವಯವ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತ ನಂ.1 ಸ್ಥಾನ ತಲುಪಲಿದೆ. ಆ ಹಂತದಲ್ಲಿ ವಾರ್ಷಿಕ ್ಙ 30,000 ಕೋಟಿಗಳಷ್ಟು ವಹಿವಾಟು ನಡೆಯಬಹುದೆಂದು ಅಂದಾಜಿಸಲಾಗಿದೆ.ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸುಮಾರು 100 ರಾಷ್ಟ್ರಗಳು ದೃಢೀಕೃತ ಸಾವಯವ ಪದಾರ್ಥಗಳ ರಫ್ತು,

ಆಮದು, ಸಗಟು, ಚಿಲ್ಲರೆ ವಹಿವಾಟು ನಡೆಸುತ್ತಿವೆ.  ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಪ್ರತಿ ವರ್ಷ ಶೇ 10 ರಿಂದ 20ರಷ್ಟು ಹೆಚ್ಚಾಗುತ್ತಿದೆ. 400ಕ್ಕೂ ಹೆಚ್ಚು ಸರ್ಟಿಫಿಕೇಷನ್ ಏಜೆನ್ಸಿಗಳು ರೈತರು-ರಫ್ತುದಾರರು-ಗ್ರಾಹಕರ ಕೆಲಸ ಮಾಡುತ್ತಿವೆ.ಭಾರತವೊಂದರಲ್ಲೇ 16 ಸರ್ಕಾರಿ ಏಜೆನ್ಸಿಗಳಿವೆ. ಕರ್ನಾಟಕದಲ್ಲಿ ಮೂರು ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿವೆ. ಇಂಥ ಧನಾತ್ಮಕ ಬೆಳವಣಿಗೆಗಳ ನಡುವೆ ದೇಶದ 12 ರಾಜ್ಯಗಳಲ್ಲಿ `ಸಾವಯವ ಕೃಷಿ ನೀತಿ~ ಜಾರಿಗೆ ಬಂದಿದೆ. ಅದರಲ್ಲಿ ಕರ್ನಾಟಕ ಮೊದಲ ಸಾಲಿನಲ್ಲಿದೆ ಎಂಬುದೇ ವಿಶೇಷ.

  ಯಶಸ್ಸಿನ ಮೆಟ್ಟಿಲು

ಸ್ಥಳೀಯ ಮಾರುಕಟ್ಟೆ ಯಶಸ್ವಿನಿಂದ ಪ್ರಮಾಣ ಪತ್ರ ನೀಡುವ ಸಂಸ್ಥೆಗಳು ಸಾವಯವ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆ ರಫ್ತು ಉದ್ಯಮಕ್ಕೆ ಪರಿಚಯಿಸಲು ಮುಂದಾದವು.

 

ಇದಕ್ಕೆ ತಕ್ಕ ಮಟ್ಟಿಗೆ ಸರ್ಕಾರದ ನೆರವು, ಸ್ವಯಂ ಸೇವಾ ಸಂಘಟನೆಗಳ ಆಸಕ್ತಿಯೂ ಕೈ ಜೋಡಿಸಿತು. ಕೇಂದ್ರ ಸರ್ಕಾರದ ಏಜೆನ್ಸಿ ಕೃಷಿ ಮತ್ತು ಆಹಾರ ಸಂಸ್ಕರಣಾ ರಫ್ತು ಅಭಿವೃದ್ಧಿ ಸಂಸ್ಥೆ (ಅಪೆಡಾ-ಎಪಿಇಡಿಎ), ಇಕೋವಾ (ಐಸಿಸಿಒಎ), ಅಂತರರಾಷ್ಟ್ರೀಯ ಸಾವಯವ ಕೃಷಿ ಚಳವಳಿ ಒಕ್ಕೂಟ (ಐಎಫ್‌ಒಎಂ) ಸೇರಿದಂತೆ ವಿವಿಧ ಸಂಸ್ಥೆಗಳು  ಆಹಾರ ಮೇಳ  ಸೇರಿದಂತೆ ಸಾಲು ಸಾಲು ಮೇಳಗಳನ್ನು ಸಂಘಟಿಸುತ್ತಿವೆ. `ಸಂಸ್ಥೆಗಳ ಆಸಕ್ತಿಯಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ.

 

ಪ್ರಮಾಣೀಕೃತ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ವೆಚ್ಚದಲ್ಲಿ ಕಡಿತವಾಗಿದೆ~ ಎನ್ನುವ `ಅಪೆಡಾ~ದ ನಿರ್ದೇಶಕ ರವೀಂದ್ರ, ರಫ್ತು ಮಾರಾಟದ ವ್ಯವಸ್ಥೆಗಾಗಿ ಸಾವಯವ ಕೃಷಿಕರಿಗೆ ನಮ್ಮ ಸಂಸ್ಥೆ ಹಣಕಾಸಿನ ನೆರವು ನೀಡುತ್ತಿದೆ. ಈ ನೆರವಿನಿಂದ ಕೆಲವು ರೈತರು ಉತ್ಪನ್ನಗಳನ್ನು ರಫ್ತು ಮಾಡುವ ಹಂತಕ್ಕೆ ಬೆಳೆಯಲು ಸಾಧ್ಯವಾ  ಗಿದೆ~ ಎನ್ನುತ್ತಾರೆ.ಹೀಗೆ ಮಾರುಕಟ್ಟೆಗೆ ಉತ್ತೇಜನ ನೀಡುವುದಕ್ಕಾಗಿ ಜರ್ಮನಿಯ ನುರೆನ್‌ಬರ್ಗ್‌ನಲ್ಲಿ ಪ್ರತಿವರ್ಷ `ಬಯೊಪ್ಯಾಕ್~ ಎಂಬ ಅಂತರರಾಷ್ಟ್ರೀಯ ಸಾವಯವ ಮೇಳ ಆಯೋಜಿಸಲಾಗುತ್ತಿದೆ. 1992ರಿಂದ ನಡೆಯುತ್ತಿರುವ ಈ `ಕೃಷಿ ಜಾತ್ರೆ~ಯಲ್ಲಿ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳು, ಸುಮಾರು ಎರಡೂವರೆ ಸಾವಿರ ಪ್ರದರ್ಶಕರು, ಲಕ್ಷಾಂತರ ಗ್ರಾಹಕರು ಪಾಲ್ಗೊಳ್ಳುತ್ತಾರೆ. ಭಾರತದಿಂದಲೂ ನೂರಾರು ಸಾವಯವ ಕೃಷಿಕರು, ಅಧಿಕಾರಿಗಳು, ಸರ್ಟಿಫಿಕೇಟ್ ಏಜೆನ್ಸಿ ಪ್ರತಿನಿಧಿಗಳು ಈ ಮೇಳಕ್ಕೆ ಭೇಟಿ ನೀಡುತ್ತಾರೆ.ಮೇಳದಲ್ಲಿ ಭಾಗವಹಿಸಿರುವ ಬೆಂಗಳೂರಿನ ಗ್ರೀನ್‌ಪಾತ್-ಆರ್ಗಾನಿಕ್ ಅಪಾರ್ಟ್‌ಮೆಂಟ್‌ನ ಜಯರಾಮ್, `ನುರೆನ್‌ಬರ್ಗ್ - ಬಯೋಪ್ಯಾಕ್ ಮೇಳವನ್ನು ಸಾವಯವ ಕೃಷಿಕರಿಗೆ ಕಾಶಿ~ ಎಂದು ಬಣ್ಣಿಸುತ್ತಾರೆ.ಒಂದು ಪುಟ್ಟ ಪಟ್ಟಣದಷ್ಟು ವಿಸ್ತಾರದಲ್ಲಿ ನಡೆಯುವ ಮೇಳದಲ್ಲಿ ಸಾವಯವ ಕೃಷಿಕರ ಹೋಟೆಲ್‌ಗಳು, ಮಳಿಗೆಗಳು, ಆಮದು - ರಫ್ತುದಾರರು.. ಅಬ್ಬಾ, ಅದೊಂದು `ಊರ ಹಬ್ಬ~. ಮೇಳ ನೋಡಿದ ಮೇಲೆ ಸಾವಯವ ಮಳಿಗೆ ಹಾಗೂ ಪರಿಸರ ಸ್ನೇಹಿ ಅಪಾರ್ಟ್‌ಮೆಂಟ್~ ನಿರ್ಮಿಸಲು ಸಾಧ್ಯವಾಯಿತು ಎನ್ನುತ್ತಾರೆ ಅವರು.ಜಯರಾಮ್ ಅವರಂತೆಯೇ, ಸಾವಯವ ಕೃಷಿಕ ಭರಮಗೌಡ್ರು, ಐಎಂಒ ಕಂಟ್ರೋಲ್ ಸರ್ಟಿಫಿಕೇಟ್ ಏಜೆನ್ಸಿಯ ವಾಸುದೇವ ಅದಮಾರು ಸೇರಿದಂತೆ ಹಲವು ಕನ್ನಡಿಗರು ಬಯೋಫ್ಯಾಕ್ ಮೇಳಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಅವರೆಲ್ಲರ ಅಭಿಪ್ರಾಯ ಒಂದೇ `ವಿಶ್ವದ ಸಾವಯವ ರಂಗದ ದಿಗ್ಗಜರು ಭೇಟಿಯಾಗುವ ತಾಣ ಬಯೋಪ್ಯಾಕ್ ಮೇಳ. ಇಲ್ಲಿ ಉಷ್ಣವಲಯದ ರಾಷ್ಟ್ರಗಳವರೇ ಅಗ್ರಗಣ್ಯರು. ಸಾವಯವ ಕೃಷಿ ರಂಗದ ಆಳ, ಅಗಲಗಳನ್ನು ನೋಡಿ ತಿಳಿದುಕೊಳ್ಳುವವರು ಈ ಬಯೋಪ್ಯಾಕ್‌ಗೆ ಒಮ್ಮೆ ಭೇಟಿ ನೀಡಬೇಕು~ ಎನ್ನುತ್ತಾರೆ ಬೆಂಗಳೂರಿನಲ್ಲಿ `ಬಯೊಪ್ಯಾಕ್~

ಇಷ್ಟೆಲ್ಲ ಸಾವಯವ ಮಾರುಕಟ್ಟೆಯ ಕಥನ, ಅನುಭವಗಳ ಸಾರ  ಕೇಳಿದ ಮೇಲೆ `ನಮ್ಮ ರಾಜ್ಯದಲ್ಲೂ ಇಂಥ ಮೇಳ ನಡೆದಿದ್ದರೆ..~ ಎನಿಸುತ್ತಿದೆ ಅಲ್ಲವೇ ? ಹೌದು, ನಿಮ್ಮ ಅನಿಸಿಕೆಯನ್ನು ನಿಜವಾಗಿಸುವ ಸಲುವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀಕೃಷ್ಣ ವಿಹಾರದಲ್ಲಿ ನಾಳೆಯಿಂದ `ಬಯೊಪ್ಯಾಕ್- ಬೃಹತ್ ಸಾವಯವ ಮೇಳ~ ಆಯೋಜಿಸಲಾಗಿದೆ.ಇಂಡಿಯಾ ಆರ್ಗಾನಿಕ್, ಕೇಂದ್ರ ಕೃಷಿ ಸಚಿವಾಲಯ, ಇಕೋವಾ ಸ್ವಯಂ ಸೇವಾ ಸಂಸ್ಥೆ, ರಾಜ್ಯ ಸರ್ಕಾರದ ಕೃಷಿ ಇಲಾಖೆ, ಅಂತರರಾಷ್ಟ್ರೀಯ ಸಾವಯವ ಕೃಷಿ ಚಳವಳಿಯ ಒಕ್ಕೂಟ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಮೇಳ ನಡೆಯಲಿದೆ.ಇದರಲ್ಲಿ 15 ರಾಜ್ಯಗಳು ಹಾಗೂ 20 ರಾಷ್ಟ್ರಗಳ ರೈತರು, ಸರ್ಕಾರದ ಪ್ರತಿನಿಧಿಗಳು, ಗ್ರಾಹಕರು, ಉದ್ದಿಮೆದಾರರು, ರೆಸ್ಟೊರೆಂಟ್, ಬಯೊ  ಹೋಟೆಲ್‌ಗಳ ಮಾಲೀಕರು ಪಾಲ್ಗೊಳ್ಳುತ್ತಾರೆ.ಮೇಳದಲ್ಲಿ ಕಾಫಿ, ಟೀ, ಸಂಬಾರ ಪದಾರ್ಥಗಳು, ಸಸ್ಯೌಷಧಗಳು, ಆಹಾರ ಧಾನ್ಯಗಳು, ಚೀಸ್, ಪನೀರ್‌ನಂತಹ ಹೈನೋತ್ಪನ್ನ... ಹಣ್ಣು- ಹಂಪಲು, ಮೌಲ್ಯವರ್ಧಿತ ಉತ್ಪನಗಳ ಪ್ರದರ್ಶನ ಮತ್ತು ಮಾರಾಟವಿದೆ. ನೀವು ಕೃಷಿಕರಾದರೆ, ಸಾವಯವ ಕೃಷಿ ಮಾರುಕಟ್ಟೆಯ `ವ್ಯಾಪ್ತಿ~ ನೋಡಬಹುದು. ಉದ್ದಿಮೆದಾರರಾದರೆ, ಜಾಗತಿಕ ಮಟ್ಟದ ಸಾವಯವ ಕೃಷಿ ಉತ್ಪನ್ನಗಳ ವ್ಯಾಪಾರಸ್ಥರನ್ನು ಪರಿಚಯಿಸಿಕೊಳ್ಳಬಹುದು. ವ್ಯಾಪಾರ ಕುದುರಿಸಬಹುದು !ವೈವಿಧ್ಯಮಯ...

ಬೆಂಗಳೂರಿನಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ   `ಬಯೋಪ್ಯಾಕ್~ ಮೇಳದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೃಷಿಕರು, ಖರೀದಿದಾರರು ರಫ್ತುದಾರರು, ಅಂತರರಾಷ್ಟ್ರೀಯ ಮಟ್ಟದ ಉದ್ದಿಮೆದಾರರು, ಸಾವಯವ ಹೋಟೆಲ್   ಮಾಲೀಕರು ಪಾಲ್ಗೊಳ್ಳುತ್ತಾರೆ.ಮನೋಜ್‌ಕುಮಾರ್ ಮೆನನ್

-ಸಂದರ್ಶನ

ಮನೋಜ್‌ಕುಮಾರ್ ಮೆನನ್

ಮೇಳದ ಸಂಪೂರ್ಣ ವ್ಯವಸ್ಥೆ, ವಿಶೇಷತೆಗಳನ್ನು ಇಕೋವಾ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್‌ಕುಮಾರ್ ಮೆನನ್ ಅವರು `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಬಯೋಪ್ಯಾಕ್ -2011, ಭಾರತದ ಪಾಲಿಗೆ ಬೃಹತ್ ಸಾವಯವ ಮೇಳ.ಈ ಮೇಳಕ್ಕೆ ಜಾಗತಿಕ ಮಟ್ಟದ ಪ್ರಮುಖ ಕೊಳ್ಳುಗರ (ಖರೀದಿದಾರರ) ನಿಯೋಗವನ್ನು ಆಹ್ವಾನಿಸುತ್ತಿದ್ದೇವೆ. ಸಾವಯವ ಕಾಫಿ, ಸಂಬಾರ ಪದಾರ್ಥಗಳು, ಸಾವಯದಲ್ಲಿ ಬೆಳೆದ ಹತ್ತಿ, ಅದರಿಂದ ತಯಾರಿಸಿದ ಬಟ್ಟೆಗಳು, ಹಣ್ಣು/ತರಕಾರಿ (ತಾಜಾ ಅಥವಾ ಸಂಸ್ಕರಿತ)ಯಂತಹ ವಿವಿಧ ಉತ್ಪನ್ನಗಳನ್ನು ಖರೀದಿಸುವವರು ಈ ನಿಯೋಗದಲ್ಲಿರುತ್ತಾರೆ.ಮಾರಾಟದ ಮಳಿಗೆಗಳ ವ್ಯವಸ್ಥೆ ಹೇಗೆ?

 ಸಾವಯವ ಕೃಷಿ ನೀತಿ ಜಾರಿಗೆ ತಂದಿರುವ ದೇಶದ ಹದಿನೈದಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಳ್ಳಲು ಒಪ್ಪಿವೆ. ಅವರಿಗೆಲ್ಲ ಪ್ರತ್ಯೇಕ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ಮೇಳದ ಆತಿಥ್ಯ ನೀಡುತ್ತಿರುವ ಹಾಗೂ ಪ್ರಮುಖ ಪಾಲುದಾರರಾಗಿರುವ ಕರ್ನಾಟಕದ ಉದ್ದಿಮೆದಾರರಿಗೆ ಪ್ರತ್ಯೇಕ ಹಾಗೂ ವಿಶಾಲ ಮಳಿಗೆ ನೀಡಲಾಗುತ್ತಿದೆ.

 

ಜಾಗತಿಕಮಟ್ಟದಲ್ಲಿ ಸಾವಯವ ಉತ್ಪನ್ನ ಮಾರುಕಟ್ಟೆಯ `ಅಗ್ರಜ~ ನೆನಿಸಿರುವ ಜರ್ಮನಿ ಉದ್ದಿಮೆದಾರರಿಗೆ ವಿಶೇಷ ಮಳಿಗೆ  ಕಾಯ್ದಿರಿಸಲಾಗಿದೆ. ಈ ಮಳಿಗೆಯಲ್ಲಿ ಐರೋಪ್ಯ ರಾಷ್ಟ್ರದ ವಿವಿಧ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಿದ್ದಾರೆ.ಸಾವಯವ ಉತ್ಪನ್ನ ರುಚಿ ಸವಿಯಬಹುದೇ?

ಖಂಡಿತಾ ಇದೆ. `ರುಚಿ ಪರಿಚಯಿಸುವ~ ಸಲುವಾಗಿಯೇ ಮೇಳದಲ್ಲಿ ಆರ್ಗಾನಿಕ್ ಫುಡ್ ಕೋರ್ಟ್ ಹಾಗೂ ರೆಸ್ಟೋರೆಂಟ್‌ಗಳಿಗಾಗಿ ವಿಶಾಲವಾದ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ಪ್ರಮುಖ ಸಾವಯವ ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಮೇಳದಲ್ಲಿರುವ ರೆಸ್ಟೋರೆಂಟ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ.ಚರ್ಚೆ, ಸಂವಾದಕ್ಕೆ ಅವಕಾಶವಿದೆಯೇ ?


ಮೇಳ ಉದ್ಘಾಟನೆ ಆಗುತ್ತಿದ್ದಂತೆ ಮಧ್ಯಾಹ್ನ  2.30ರಿಂದ ವಿಚಾರ ಸಂಕಿರಣಗಳು ಆರಂಭವಾಗುತ್ತವೆ. ಸಾವಯವ ಕೃಷಿಯ ಹೊಸ ದಿಕ್ಕುಗಳ ಕುರಿತು ಮೊದಲ ಪ್ರಬಂಧ ಮಂಡನೆಯಾಗುತ್ತದೆ. ದೇಶದ ಪ್ರಮುಖ ಕೃಷಿ ಸಂಸ್ಥೆಗಳ ಪರಿಣತರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದರ ಜೊತೆಗೆ ಜವಳಿ ಉದ್ಯಮ, ಸಂಶೋಧನೆ, ಮಾರುಕಟ್ಟೆ ಮತ್ತು ಸುಸ್ಥಿರತೆ ಕುರಿತು ಗೋಷ್ಠಿಗಳಿರುತ್ತವೆ.

ವಿವರಗಳಿಗೆ 080: 2860 1183 / 2860 7200 www.iccoa.org 

www.indiaorganictradefairs .com

 ಸಾವಯವ ಕೃಷಿ

ರಸಗೊಬ್ಬರ, ಕೀಟನಾಶಕ ಬಳಸದೇ ಅನುಸರಿಸುವ ಕೃಷಿ ಪದ್ಧತಿಯೇ `ಸಾವಯವ ಕೃಷಿ~ ಪದ್ಧತಿ. ಈ ಪರಿಕಲ್ಪನೆಯಲ್ಲೇ ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಜೀವಚೈತನ್ಯ ಕೃಷಿ, ಜೈವಿಕ ಕೃಷಿ.. ಇತ್ಯಾದಿ ಪ್ರಕೃತಿಪೂರಕ ಕೃಷಿ ಪದ್ಧತಿಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ.ಇವುಗಳ ಉದ್ದೇಶ `ವಿಷ ರಹಿತ ಕೃಷಿ ಮೂಲಕ ಆರೋಗ್ಯ ಪೂರ್ಣ ಆಹಾರ ಉತ್ಪಾದನೆ~. ಈ ಪದ್ಧತಿಗಳಲ್ಲಿ ಬೆಳೆದ ಎಲ್ಲ ಉತ್ಪನ್ನಗಳನ್ನು `ಸಾವಯವ ಉತ್ಪನ್ನ~ಗಳೆಂದು ಪರಿಗಣಿಸಲಾಗುತ್ತಿದೆ. ಜೊತೆಗೆ, `ದೃಢೀಕರಣ ಪ್ರಮಾಣ ಪತ್ರ~ವನ್ನೂ ನೀಡಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry