ಸಾವಯವ-ಸಂಪತ್ತು : ಕಾಲುಬಾಯಿ ಜ್ವರಕ್ಕೆ ಸರಳ ಚಿಕಿತ್ಸೆ

7

ಸಾವಯವ-ಸಂಪತ್ತು : ಕಾಲುಬಾಯಿ ಜ್ವರಕ್ಕೆ ಸರಳ ಚಿಕಿತ್ಸೆ

Published:
Updated:

ಪ್ರಶ್ನೆ ಕೇಳಿದ ತಕ್ಷಣ ಉತ್ತರ ಕೊಡುವ ಜಾಯಮಾನ ನನ್ನದಲ್ಲ. ಅದು ಪ್ರಕೃತಿ ನನಗೆ ಕಲಿಸಿದ ಪಾಠ. ಉತ್ತರ ಪಡೆಯಬೇಕಾದರೆ, ಪ್ರಾಮಾಣಿಕವಾದ ಪ್ರೀತಿ, ಪ್ರಯತ್ನ, ಪರಿಶ್ರಮ, ಪ್ರಯೋಗಶೀಲತೆ ಬೇಕಾಗುತ್ತದೆ.ಸುಂದರವಾದ  ಗುಲಾಬಿ ಹೂವನ್ನು ಪಡೆಯಬೇಕಾದರೆ ಸುಂದರವಲ್ಲದ ಗುಲಾಬಿ ಗಿಡವನ್ನು, ಚುಚ್ಚುವ ಅದರ ಮುಳ್ಳನ್ನು ಸಹಿಸಬೇಕಾಗುತ್ತದೆ. ನಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯಬೇಕಾದರೆ ಹೀಗೆ ಎಲ್ಲವನ್ನೂ ಸಹಿಸಬೇಕಾಗುತ್ತದೆ.ಪ್ರಕೃತಿಯ ಮೂಲ ವಿಜ್ಞಾನವನ್ನು, ಹೋಮಿಯೋಪಥಿಯ ಪ್ರಾಥಮಿಕ ಜ್ಞಾನವನ್ನೂ, ಆಯುರ್ವೇದದ ನಿಯಮಗಳನ್ನೂ ತಿಳಿಯದ ಹೊರತು ಹಸುಗಳಿಗೆ ಚಿಕಿತ್ಸೆ ಕೊಡುವುದು ತುಸು ಕಷ್ಟದ ಕೆಲಸ. ಆದರೂ ಕಷ್ಟಪಡುವ ಮನಸ್ಸಿನ ಜನರ ಅನುಕೂಲಕ್ಕಾಗಿ ಈ ಮುಂದಿನ ಮಾಹಿತಿ.ನಿಮ್ಮೂರಲ್ಲಿ ಕಾಲುಬಾಯಿ ಜ್ವರ ಹಬ್ಬುತ್ತಿದೆ ಎಂಬ ಸುದ್ದಿ ಬಂದಾಗ ಬಂದಾಗ ಹಸುಗಳಿಗೆ ಲಸಿಕೆ ಚುಚ್ಚಿಸುವ ಬದಲು `ತಡೆಗೋಡೆ~ಯಾಗಿ ಪೈರೋಜಿನಂ 200 ಎಂಬ ಔಷಧಿಯನ್ನು ತಲಾ 8 ಮಾತ್ರೆಗಳಂತೆ ನಿಮ್ಮ ಹಸುಗಳಿಗೆ ಕೊಡಿ. ಮಾತ್ರೆಗಳನ್ನು ಹಸುಗಳಿಗೆ ಕೊಡುವುದು ಸುಲಭ.ಯಾವುದೇ ಬಾಟ್ಲಿಯ ಪುಟ್ಟ ಮುಚ್ಚಳದಲ್ಲಿ 8 ಮಾತ್ರೆ ಹಾಕಿ ಹಸುವಿನ ತಲೆ ಎತ್ತಿ ಬಾಯೊಳಗೆ ಹಾಕಿ ಬಿಡಿ. ಮಾತ್ರೆಗಳು ಸಿಹಿಯಾಗಿರುವುದರಿಂದ ಹಸು ಅವನ್ನು ನುಂಗಿ ಬಿಡುತ್ತದೆ. ಹಸುವಿಗೆ ಮೂಗುದಾರ ಹಾಕಿದ್ದರೆ ಮಾತ್ರೆ ನುಂಗಿಸುವುದಕ್ಕೆ ನೀವೊಬ್ಬರೆ ಸಾಕು.ಮಾತ್ರೆ ನುಂಗಿಸುವುದು ಕಷ್ಟವೆಂದು ಕಂಡರೆ ಬಾಳೆಹಣ್ಣಿನೊಳಗೆ ಸೇರಿಸಿ ಕೊಡಬಹುದು. ಇನ್ನೂ ಸುಲಭವೆಂದರೆ ಮಾತ್ರೆ ಬದಲು ಅದನ್ನೇ ದ್ರಾವಣ ಮಾಡಿ ಹನಿ ರೂಪದಲ್ಲಿ ಹಸುವಿನ ಮೂಗಿನ ಒಳಗೆ 2-3 ಬಿಂದು ಸಿಂಪಡಿಸಿ ಬಿಡಿ. ಅದು ನೆಕ್ಕುವಾಗ ಮದ್ದು ಒಳಗೆ ಸೇರುತ್ತದೆ. ಮಾತ್ರೆಗಳನ್ನು ಹಿಂಡಿಯಲ್ಲಿ ಹಾಕಿ ಕೊಡುವುದು ಬೇಡ.ನೀವು ಒಂದು ಡ್ರಾಂ ಪ್ರಮಾಣದಲ್ಲಿ ಮಾತ್ರೆಯನ್ನು ಖರೀದಿಸಿದರೆ ಅದು ಸುಮಾರು 15-20 ಹಸುಗಳಿಗೆ ಸಾಕಾಗುತ್ತದೆ. ಅದಕ್ಕೆ ಇಂದಿನ ಬೆಲೆ ಸುಮಾರು 30 ರೂಪಾಯಿಗಳು. ನೀವು ಹೋಮಿಯೋಪಥಿ ಬಗ್ಗೆ ಪ್ರಾಥಮಿಕ ಜ್ಞಾನ ಪಡೆಯುತ್ತಾ ಹೋದಂತೆ ಈ ಬೆಲೆ ಇನ್ನಷ್ಟು ಕಡಿಮೆಯಾಗುವುದು.ಒಂದು ವಾರ ಬಿಟ್ಟು 200 ಬೋರಾಕ್ಸ್ ಮತ್ತು 200 ಮರ್ಕ್‌ಸಾಲ್  ಎಂಬ ಮಾತ್ರೆಗಳನ್ನು ಅದೇ ರೀತಿ ಕೊಡಿ. ಈ ಎರಡೂ ಮಾತ್ರೆಗಳು ನಿಮ್ಮ ಹಸುವಿಗೆ ಕಾಲುಬಾಯಿ ಜ್ವರ ಬರದಂತೆ ಭದ್ರ ಕೋಟೆಯಾಗಿ ಕೆಲಸ ಮಾಡುತ್ತವೆ. ಊರಿನ ದನಕರುಗಳಿಗೆ ಕಾಲುಬಾಯಿ ಜ್ವರ ಬಂದು ಒದ್ದಾಡುತ್ತಿದ್ದರೆ ನೀವು ನಿಶ್ಚಿಂತರಾಗಿ ಇರಬಹುದು.ಹಾಗೊಂದು ವೇಳೆ ಜ್ವರ ಬಂತು ಎಂದಿಟ್ಟುಕೊಳ್ಳಿ. ಗಾಬರಿಯಾಗುವುದು ಬೇಡ. ಕೈಕಾಲು, ಬಾಯಿ ಸುಲಿದು ಬರುವಷ್ಟು, ತಿಂಗಳು ಗಟ್ಟಲೆ ಒದ್ದಾಡುವಷ್ಟು ಜೋರಾಗುವುದಿಲ್ಲ. ಮೊದಲು ಪೈರೋಟಿನಂ 200 ಕೊಡಿ. ಆಮೇಲೆ ಆರ್ಸ್ ಆಲ್ಬು 200 ಮತ್ತು ಬೆಲಡೋನಾ 200 ಔಷಧವನ್ನೂ ಒಂದಾದ ಮೇಲೊಂದರಂತೆ ದಿನಕ್ಕೆ ಮೂರು ಬಾರಿ ಕೊಡಿ.ಎರಡನೇ ದಿನದಿಂದ ಬೋರಾಕ್ಸ್ 200 ಮತ್ತು ಮರ್ಕ್‌ಸಾಲ್ 200 ಮಾತ್ರೆಗಳನ್ನು ದಿನಕ್ಕೆ ಮೂರು ಬಾರಿ ಮೂರು ದಿನ ಕೊಡಿ. ಕೊಟ್ಟಿಗೆಯ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಅಗತ್ಯ ಎನಿಸಿದರೆ, ಹಸುವಿನ ಕಾಲು, ಬಾಯಿಗಳನ್ನು ಪೊಟಾಶಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆಯಬಹುದು.ಕಾಲುಬಾಯಿ ಜ್ವರ ಮಾತ್ರವೇ ಅಲ್ಲ, ಯಾವುದೇ ಕಾಯಿಲೆ ಬಂದರೂ ಹೋಮಿಯೋಪಥಿ ಔಷಧಿಯಿಂದ ಕೆಲವೇ ಪೈಸೆಗಳ ಖರ್ಚಿನಲ್ಲಿ ಗುಣಮಾಡಿ ಬಿಡಬಹುದು. ನಮ್ಮ ಹಸುಗಳಿಗೆ ಈಗ ನಾನೇ ವೈದ್ಯ. ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ಹಸುಗಳಿಗೆ ಮುದ್ದು ಚುಚ್ಚಿಲ್ಲ. ಬಣ್ಣಬಣ್ಣದ ಮಾತ್ರೆಗಳನ್ನು ತಿನಿಸಿಲ್ಲ.  ಸ್ವಯಂ ವೈದ್ಯನಾಗಿ ನಾನು ಸಾಕಷ್ಟು ಹಣ ಉಳಿತಾಯ ಮಾಡಿದೆ. ನಾನು ಪ್ರಕೃತಿಯಿಂದ ಹಲವು ವಿಚಾರಗಳನ್ನು ಕಲಿತೆ. ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ. ಚಾಕಲೇಟಿನ ಗುಣಮಟ್ಟ ಅದರ ಹೊರಗೆ ಸುತ್ತಿರುವ ಆಕರ್ಷಕ ಬೇಗಡೆಯ ಸೌಂದರ್ಯದಲ್ಲಿಲ್ಲ.

ಸಾವಯವದ ಬೆಲ್ಲದ ಶ್ರೇಷ್ಠತೆ ಚಾಕಲೇಟ್‌ಗೆ ಇಲ್ಲ. ಪ್ರಕೃತಿ ನಮಗೆ ಕೊಟ್ಟಿರುವುದನ್ನು ಹುಡುಕುವುದು ಬಲು ಸರಳ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry