ಮಂಗಳವಾರ, ಜನವರಿ 21, 2020
26 °C

ಸಾವಯವ ಸಾಧನೆ

ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಸಾವಯವ ಸಾಧನೆ

ನೋಡಹೋದರೆ ಇದೊಂದು ಕುಗ್ರಾಮ. ಕನಿಷ್ಠ ಮೂಲ ಸೌಕರ್ಯಗಳಿಗೂ ಇಲ್ಲಿ ಬರ. ಒಟ್ಟೂ 105 ಕುಟುಂಬ, 650ರಷ್ಟು ಜನ ಸಂಖ್ಯೆ ಇರುವ ಈ ಪುಟ್ಟ ಗ್ರಾಮದಲ್ಲಿ ಎಲ್ಲರೂ ಕೃಷಿಕರೇ. ಶಿಕ್ಷಿತರೂ ಹೆಚ್ಚಾಗಿ ಇಲ್ಲದ, ಕಡು ಬಡತನದಲ್ಲಿಯೇ ಜೀವನ ಸಾಗಿಸುತ್ತಿರುವ ಈ ಗ್ರಾಮಸ್ಥರು ಈಗ ಎಲ್ಲರ ಹುಬ್ಬೇರಿಸುಂತೆ ಮಾಡಿದ್ದಾರೆ!ಇದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಡಿ ಗ್ರಾಮ ಮ್ಯಾಕಲ್‌ಝರಿಯ ಮಹಿಮೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳು ದೂಳು ತಿನ್ನುತ್ತಿರುವ ಇಂದಿನ ದಿನಗಳಲ್ಲಿ ಈ ಪುಟ್ಟ ಗ್ರಾಮ ಸಾವಯವ ಕೃಷಿಯಲ್ಲಿ ಮಹತ್‌ಸಾಧನೆ ಮಾಡಿ ‘ಸಾವಯವ ಗ್ರಾಮ’ ಎಂಬ ಹಿರಿಮೆಯೊಂದಿಗೆ ಬೀಗುತ್ತಿದೆ, ಹೊರ ರಾಜ್ಯಗಳ ಕೃಷಿಕರನ್ನೂ ತನ್ನತ್ತ ಸೆಳೆದಿದೆ!ಗ್ರಾಮಸ್ಥರ 550 ಎಕರೆ ಸಾಗುವಳಿ ಭೂ ಪ್ರದೇಶದಲ್ಲಿ, 65 ಕೃಷಿಕರ 250 ಎಕರೆ ಸಾಗುವಳಿ ಕ್ಷೇತ್ರದಲ್ಲಿ ಶೇಂಗಾ, ಸೂರ್ಯಕಾಂತಿ, ಸಜ್ಜೆ, ತೊಗರಿ, ಮೆಕ್ಕೆಜೋಳ, ರೇಷ್ಮೆ ಹುಲ್ಲು ಬೆಳೆಗಳು ಸಾವಯವ ಕೃಷಿ ಪದ್ಧತಿಯಿಂದ ಸಮೃದ್ಧವಾಗಿ ಬೆಳೆದು ನಿಂತು ಹಸಿರಿನಿಂದ ಕಂಗೊಳಿಸುತ್ತಿದೆ.ಯಶಸ್ಸಿನ ಹಿನ್ನೆಲೆ ಗದಗದ ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆಯ ರೋಣ ವಿಭಾಗ ಹಾಗೂ ಸಿಂಧನೂರಿನ ಭಾರತಿ ಟ್ರಸ್ಟ್‌ ಆಶ್ರಯದಲ್ಲಿ 2010–11ನೇ ಸಾಲಿನಲ್ಲಿ ಮ್ಯಾಕಲ್‌ಝರಿ ಗ್ರಾಮವನ್ನು ರಾಜ್ಯ ಸರ್ಕಾರದ ‘ಸಾವಯವ ಗ್ರಾಮ’ ಯೋಜನೆಗೆ ಆಯ್ಕೆ ಮಾಡಲಾಯಿತು. ಈ ಯೋಜನೆಯಡಿಯಲ್ಲಿ ಆಯ್ಕೆಗೊಂಡ ಕೃಷಿಕರು ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಪದ್ಧತಿ ತೊಡಗಿರುವುದು ಈ ಪರಿವರ್ತನೆಗೆ ಕಾರಣವಾಗಿದೆ. ಇದೇ ಕೃಷಿ ಪದ್ಧತಿಯನ್ನು ತಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ನೆರೆಯ ರಾಜ್ಯಗಳ ಕೃಷಿಕರು ಬರುತ್ತಿದ್ದಾರೆ.ಇದಕ್ಕೆ ಪುಷ್ಟಿ ಎನ್ನುವಂತೆ ಒಡಿಶಾ ರಾಜ್ಯದ ಅಂಗೂಲ್‌ ಜಿಲ್ಲೆಯ 26 ಜನ ಕೃಷಿಕರ ತಂಡ ಇಲ್ಲಿ ಅಧ್ಯಯನ ನಡೆಸಿ, ತರಬೇತಿ ಪಡೆದು ತಮ್ಮ ರಾಜ್ಯದಲ್ಲೂ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ. ಈ ಯೋಜನೆ ಅಡಿ ಕಾರ್ಯ ಆರಂಭಗೊಂಡಿದ್ದು 2011 ರ ಏಪ್ರಿಲ್‌ನಲ್ಲಿ. ‘100 ಎಕರೆ ಪ್ರದೇಶದಲ್ಲಿ 100 ಎರೆಹುಳು ತಯಾರಿಕಾ ಘಟಕ, ಜೀವಾಮೃತ ತಯಾರಿಕಾ ಘಟಕ, ದ್ರವರೂಪದ ಜೀವಾಮೃತ ತಯಾರಿಕೆ ತೊಟ್ಟಿ, ಸಸ್ಯ ಜನ್ಯಗೊಬ್ಬರ ತಯಾರಿಕೆಗಾಗಿ ಪ್ಲಾಸ್ಟಿಕ್‌ ಡ್ರಂ ರಚನೆ... ಹೀಗೆ ಹಲವಾರು ಬಗೆಯ ಮಾಹಿತಿಯನ್ನು ಈ ಯೋಜನೆ ಅಡಿ ಕೃಷಿಕರಿಗೆ ನೀಡಲಾಯಿತು’ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿಗಳಾದ ವಿ.ಟಿ.ವಿರಕ್ತಮಠ, ಕೆ.ಎಚ್‌.ಗಂಗೂರ.ಗ್ರಾಮದಲ್ಲಿ 20 ಜಪಾನ್‌ ಮಾದರಿಯ ಕಾಂಪೋಸ್ಟ್‌ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ. 20 ಲೀಟರ್‌ ಸಾಮರ್ಥ್ಯದ 10 ಪ್ಲಾಸ್ಟಿಕ್‌ ಡ್ರಮ್‌ಗಳಲ್ಲಿ ಹಾಗೂ 400 ಲೀಟರ್‌ ಸಾಮರ್ಥ್ಯದ 15 ಸಿಮೆಂಟ್‌ ತೊಟ್ಟಿಗಳಲ್ಲಿ ಜಾನುವಾರುಗಳ ಮೂತ್ರದಿಂದ ದ್ರವರೂಪದ ಜೀವಾಮೃತವನ್ನು ಸಿದ್ಧಗೊಳಿಸಿ ಕೃಷಿ ಕ್ಷೇತ್ರದ ಸದೃಢತೆ ಹೆಚ್ಚಳಕ್ಕೆ ಬಳಕೆ ಮಾಡಲಾಗುತ್ತಿದೆ. ಗ್ರಾಮಸ್ಥರು ತಮ್ಮ ಜಾನುವಾರುಗಳ ಸಗಣೆ ಮತ್ತು ಮೂತ್ರದಿಂದ ಸಿದ್ಧಗೊಳಿಸುವ ಸಾವಯವ ಗೊಬ್ಬರ ಸಾವಯವ ಕೃಷಿ ಕ್ಷೇತ್ರದ ಸಮೃದ್ಧಿಗೆ ಪೂರಕವಾಗಿದೆ ಎನ್ನುತ್ತಾರೆ ಪ್ರಗತಿ ಪರ ಕೃಷಿಕ ಅಂದಪ್ಪ ಅಂಗಡಿ.ಮೇವು ಸಂಪನ್ಮೂಲಕ್ಕೂ ಆದ್ಯತೆ

ಮೇವು ಉತ್ಪನ್ನ ಸಂಪನ್ಮೂಲ ವೃದ್ಧಿಗಾಗಿ ‘ಮೇಟಿಯರ್‌ ಗ್ರಾಸ್‌’ ಬೀಜ ‘ಮೌಳಿ’ ಹುಲ್ಲನ್ನು ಯೋಜನೆಯಡಿಯಲ್ಲಿ ಆಯ್ಕೆಗೊಂಡ ಕೃಷಿಕರ ಜಮೀನುಗಳ ಆಯ್ದ ಭಾಗಗಳಲ್ಲಿ ಬೆಳೆಸಲಾಗಿದೆ. ಈ ಹುಲ್ಲುಗಳನ್ನು ಜಾನುವಾರುಗಳಿಗೆ ಹಾಕುವುದರಿಂದ ಎರಡು ವರ್ಷಗಳಿಂದ ಹೈನುಗಾರಿಕೆ ಪ್ರಗತಿಯತ್ತ ಸಾಗಿದೆ. ಅಲ್ಲದೆ, ನಿರೀಕ್ಷೆಗೂ ಮೀರಿ ಜಾನುವಾರುಗಳು ಹಾಲನ್ನು ಒದಗಿಸುತ್ತಿವೆ. ಸದ್ಯ ಸಾವಯವ ಕೃಷಿ ಒಂದು ಭಾಗವಾದರೆ ಹೈನುಗಾರಿಕೆ ಇಲ್ಲಿನ ಮತ್ತೊಂದು ಭಾಗವಾಗಿರುವುದು ಸಾವಯವ ಗ್ರಾಮ ಯೋಜನೆಯ ಸಾರ್ಥಕತೆಯನ್ನು ಸಾರಿ ಹೇಳುತ್ತಿದೆ.‘ಆರಂಭದಲ್ಲಿ ಸಾವಯವ ಕೃಷಿ ಕಷ್ಟವೆನಿಸಿದರೂ ದಿನಗಳು ಉರುಳಿದಂತೆ ಲಾಭದತ್ತ ಸಾಗುತ್ತದೆ. ರಾಸಾಯನಿಕ ಕೃಷಿಗೆ ಖರ್ಚು ಜಾಸ್ತಿ, ರೋಗ– ಕೀಟಬಾಧೆಗಳು ಹೆಚ್ಚು. ಆದರೆ ಸಾವಯವ ಕೃಷಿಗೆ ರೋಗ–ರುಜಿನಗಳ ಅಳುಕಿಲ್ಲ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಸದ್ಯ ಮಳೆಯಾಶ್ರಿತ ಹಾಗೂ ಕೊಳವೆ ಬಾವಿ ಆಶ್ರಿತಗಳೆರಡಲೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದೇವೆ. ನಿರೀಕ್ಷೆಗೂ ಮೀರಿ ಇಳುವರಿ ಹಾಗೂ ಲಾಭ ಕಂಡಿದ್ದೇವೆ’ ಎನ್ನುತ್ತಾರೆ ಶರಣಪ್ಪ ಬಂಡಿ, ಮಲ್ಲಪ್ಪ ಅವಾರಿ.‘ಮ್ಯಾಕಲ್‌ಝರಿ ಗ್ರಾಮದ ಕೃಷಿಕರು ಅಳವಡಿಸಿಕೊಂಡಿರುವ ಸಾವಯವ ಕೃಷಿ ವಿಧಾನಗಳನ್ನು ಕಂಡು ಅತ್ಯಂತ ಸಂತೋಷವಾಗಿದೆ. ರಾಸಾಯನಿಕ ಕೃಷಿ ಪದ್ಧತಿಯಿಂದ ಕೃಷಿ ಕ್ಷೇತ್ರ ಬರಡಾಗುತ್ತಿದೆ. ಕೃಷಿ ಕ್ಷೇತ್ರದಿಂದ ಕೃಷಿಕರು ವಿಮುಖರಾಗುತ್ತಿದ್ದಾರೆ. ‘ಕೃಷಿಯಿಂದ ಲಾಭವಿರಲಿ, ಬೆಳೆಗೆ ಮಾಡಿದ ಖರ್ಚು ಸಹ ಕೈಸೇರುವುದಿಲ್ಲ’ ಎಂಬ ನಕಾರಾತ್ಮಕ ಯೋಚನೆಗಳಿಂದ ಕೃಷಿ ಕ್ಷೇತ್ರದ ಬಗೆಗಿನ ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವ ಕೃಷಿಕ ಸಮೂಹಕ್ಕೆ ಮ್ಯಾಕಲ್‌ಝರಿ ಗ್ರಾಮದ ಸಾವಯವ ಕೃಷಿ ಆದರ್ಶಪ್ರಾಯ.ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಸಾವಯವ ಕೃಷಿ ಅವಶ್ಯ ಎಂಬುದನ್ನು ಪ್ರಯೋಗಿಕವಾಗಿ ಸಾಧಿಸಿ ತೋರಿಸಿರುವ ಇಲ್ಲಿನ ಕೃಷಿಕರ ಕೃಷಿ ವಿಧಾನಗಳನ್ನು ನಾವು ಅಳವಡಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಒಡಿಶಾದ ರೈತರಾದ ಮಾರಸೆಲ್‌, ಭಾಗವತ್‌ ರೈ.ಯೋಜನೆಯ ಕುರಿತು.­..

‘ಮೂರು ವರ್ಷಗಳ ರೂ.15 ಲಕ್ಷ ಅನುದಾನದ ಯೋಜನೆ ಇದಾಗಿದೆ. ಆರು ತಿಂಗಳಿಗೆ ಒಂದು ಹಂತದಂತೆ 6 ಹಂತಗಳಲ್ಲಿ 16 ಬಗೆಯ  ಸಾವಯವ ಕೃಷಿ ತರಬೇತಿ ನೀಡಲಾಗುವುದು. ಪ್ರತಿ ಹಂತದಲ್ಲೂ ಸಾವಯವ ಕೃಷಿಯ ಮಹತ್ವ ತಿಳಿಸಿ ಕೊಡುವುದರ ಜೊತೆಗೆ ರಾಸಾಯನಿಕ ಕೃಷಿ ಕ್ಷೇತ್ರದ ದುಷ್ಪರಿಣಾಮ ಹಾಗೂ ರಾಸಾಯನಿಕ ಕೃಷಿಯಿಂದ ಸಾಗುವಳಿ ಕ್ಷೇತ್ರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಿಳಿಸುವುದು ಈ ಯೋಜನೆ ಉದ್ದೇಶ‘ ಎನ್ನುತ್ತಾರೆ ರೋಣ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್‌.ಎ.ಸೂಡಿ ಶೆಟ್ಟರ್‌.

ಜಾನುವಾರುಗಳ ಆಶ್ರಿತ ಕುಟುಂಬಗಳೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಪ್ರತಿಯೊಬ್ಬ ಕೃಷಿಕರ ಬಳಿ ಎತ್ತು, ಜಾನುವಾರು, ಹಸು–ಮೇಕೆ, ಕುರಿಗಳಿವೆ. ಈ ಜಾನುವಾರುಗಳಿಂದ ಉತ್ಪತ್ತಿಯಾಗುವ ಸಗಣೆ ಮತ್ತು ಮೂತ್ರವನ್ನು ಬಳಸಿ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ 20/5ಅಡಿ ವಿಸ್ತೀರ್ಣದ 30 ಎರೆ ಹುಳು ತಯಾರಿಕೆ ಘಟಕಗಳನ್ನು ಕೃಷಿಕರು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಆರಂಭದಲ್ಲಿ ಧಾರವಾಡ ಕೃಷಿ ವಿವಿ ಹಾಗೂ ಅರಸಿಕೇರೆಗಳಿಂದ ತಂದ ಎರೆಹುಳುಗಳನ್ನು ಘಟಕವೊಂದಕ್ಕೆ 50 ಕೆ.ಜಿ ಹುಳುಗಳನ್ನು ಬಿಡಲಾಗಿತ್ತು. ಗೊಬ್ಬರಕ್ಕೆ ಹುಳುಗಳನ್ನು ಬಿಟ್ಟ 45 ದಿನಕ್ಕೆ ಗುಣಮಟ್ಟದ ಹಾಗೂ ಫಲವತ್ತಾದ ಎರೆಹುಳು ಗೊಬ್ಬರ ಸಿದ್ಧಗೊಳ್ಳುತ್ತಿದೆ.

ಪ್ರತಿಕ್ರಿಯಿಸಿ (+)