ಬುಧವಾರ, ಮೇ 18, 2022
23 °C

ಸಾವಿನ ಸ್ಥಳವಾದ ಮ್ಯಾನ್‌ಹೋಲ್

ಉದಯ ಯು / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಈ ಸಾವು ಖಂಡಿತವಾಗಿಯೂ ನ್ಯಾಯಯುತವಾದುದಲ್ಲ. ರಜೆ ಕಳೆಯಲು ಹಾಸನದ ಅಜ್ಜಿ ಮನೆಗೆ ಬಂದಿದ್ದ ಮೂರೂವರೆ ವರ್ಷದ ಬಾಲಕ ನಗರಸಭೆಯವರು ರಸ್ತೆಪಕ್ಕದಲ್ಲಿ ಮ್ಯಾನ್‌ಹೋಲ್‌ಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದ. ಪೊಲೀಸರು ಬಂದರು, ಜನಪ್ರತಿನಿಧಿಗಳು ಬಂದು ಮನೆಯವರಿಗೆ ಸಾಂತ್ವನ ಹೇಳಿದರು, ದೂರು ದಾಖಲಾಯಿತು... ಮಗು ಪ್ರಾಣ ಬಿಟ್ಟಮೇಲೆ ಏನೇನಾಗಬೇಕೋ ಅದೆಲ್ಲವೂ ಆಯಿತು.ಮುಂದಿನ ದಿನಗಳಲ್ಲಿ ಒಂದಷ್ಟು ಪರಿಹಾರ ಸಿಗಬಹುದು. ಆದರೆ, ಮನೆಯವರಿಗೆ ಬಾಲಕ ಮತ್ತೆ ಸಿಗುವನೇ ?

ನಿನ್ನೆಯವರೆಗೂ ರಚ್ಚೆ ಹಿಡಿಯುತ್ತ, ಆಟವಾಡುತ್ತ, ತುಂಟಾಟ ಮಾಡುತ್ತ ಲೋಕವನ್ನೇ ಮರೆತು ಪಕ್ಕದಲ್ಲೇ ಮಲಗುತ್ತಿದ್ದ ಮಗು ಇಂದು ರಾತ್ರಿ ಪಕ್ಕದಲ್ಲಿಲ್ಲ ಎಂದಾಗ ಆ ತಂದೆ, ತಾಯಿಗೆ ಆಗಬಹುದಾದ ದುಃಖ, ಹಲವು ದಿನಗಳ ಕಾಲ ಅವರು ಅನುಭವಿಸುವ ವೇದನೆಗೆ ಸರ್ಕಾರ ನೀಡುವ ಪರಿಹಾರ ಅಥವಾ ಸಾಂತ್ವನದ ಮಾತು ಸರಿಯಾಗಬಲ್ಲವೇ?ನಗರದಲ್ಲಿ ಇದೇನು ಮೊದಲ ಘಟನೆಯಲ್ಲ. ಬಹುಶಃ ಕೊನೆಯ ಘಟನೆಯೂ ಆಗಲಾರದು. ಅವಘಡ ಸಂಭವಿಸುವಾಗ ಅದರಿಂದ ಕಲಿತು, ತಪ್ಪನ್ನು ಸರಿಪಡಿಸುವ ಸಂಪ್ರದಾಯವನ್ನು ಎಂದೋ ಮರೆತಿದ್ದೇವೆ. ಅಂಥ ಜವಾಬ್ದಾರಿ ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಇದ್ದಿದ್ದರೆ ಜನರು ಓಡಾಡುವ ರಸ್ತೆ ಪಕ್ಕದಲ್ಲಿ ತೋಡಿದ್ದ ಗುಂಡಿಯನ್ನು ಮೂರು ತಿಂಗಳ ಕಾಲ ತೆರೆದೇ ಇಟ್ಟಿರುತ್ತಿರಲಿಲ್ಲ. ಆ ಗುಂಡಿಯ ಮಾತಿರಲಿ ನಗರದ ಮಧ್ಯದಲ್ಲಿರುವ ದೇವಿಗೆರೆ ಸುತ್ತ ಒಂದು ಬೇಲಿಯನ್ನಾದರೂ ಹಾಕಿಸುತ್ತಿರಲಿಲ್ಲವೇ.ದೇವಿಗೆರೆಯಲ್ಲಿ ಅದೆಷ್ಟು ಶವಗಳು ಸಿಕ್ಕಿವೆ ಎಂಬ ಲೆಕ್ಕಾಚಾರವನ್ನು ಪೊಲೀಸರೂ ಇಟ್ಟಿರಲಾರರು. ಪ್ರತಿ ವರ್ಷ ನಾಲ್ಕು-ಐದು ಅಪರಿಚಿತ ಶವಗಳು ಸಿಗುತ್ತಿವೆ. ಬಿದ್ದು ಸಾಯುತ್ತಾರೋ, ಸತ್ತವರನ್ನು ತಂದು ಇಲ್ಲಿ ಎಸೆಯುತ್ತಾರೋ ಒಂದೂ ಅರ್ಥವಾಗುವುದಿಲ್ಲ.ಹಾಸನದ ಐತಿಹ್ಯದ ಪ್ರಕಾರ ಅತಿ ಪವಿತ್ರವಾಗಿರುವ ಈ ಕೆರೆಗೆ ಆತ್ಮಹತ್ಯೆಯ ಕೆರೆ ಎಂಬ ಕಳಂಕ ಅಂಟಿಕೊಂಡಿದೆ. ಯಾರಮೇಲಾದರೂ ಸಿಕ್ಕಾಪಟ್ಟೆ ಸಿಟ್ಟು ಬಂದಾಗ `ದೇವಿಗೆರೆಯಲ್ಲಿ ಬಿದ್ದು ಸಾಯಿ~ ಎಂದು ಶಪಿಸುವ ಮಟ್ಟಕ್ಕೂ ಇದರ ಅಪಖ್ಯಾತಿ ಹಬ್ಬಿದೆ. ಆದರೆ ಈ ಕೆರೆಗೆ ಕನಿಷ್ಠ ಒಂದು ತಂತಿ ಬೇಲಿ ಹಾಕಿ ಯಾರೂ ಬೀಳದಂತೆ ವ್ಯವಸ್ಥೆ ಮಾಡಬೇಕು ಎಂಬ ಕಾಳಜಿ ಇಲ್ಲ. ಇನ್ನು ಅದೆಷ್ಟು ಜೀವಗಳು ಇದಕ್ಕೆ ಬಲಿಯಾಗಬೇಕೋ.ನಗರದಲ್ಲಿ ಯಾವುದೇ ಕ್ಷಣದಲ್ಲಿ ಸಾವು ತಂದೊಡ್ಡಬಹುದಾದಂಥ ಹಲವು ತಾಣಗಳಿವೆ. ನಮ್ಮ ಪ್ರಮುಖ ರಸ್ತೆಗಳೇ ಪ್ರತಿ ವರ್ಷ ಸಾಕಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಎಂಟು ವರ್ಷ ಹಿಂದೆ ಎನ್.ಆರ್ ಸರ್ಕಲ್ ಹಲವರನ್ನು ಬಲಿ ತೆಗೆದುಕೊಂಡಿತ್ತು. ಈಚೆಗೆ ಇಬ್ಬರು ಪ್ರಾಣ ತೆತ್ತಿದ್ದಾರೆ. ಇದಾದ ಬಳಿಕ ಈ ವೃತ್ತದಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಅಲ್ಲೇ ಬಸ್ಸುಗಳು ನಿಲ್ಲುತ್ತವೆ.

 

ಏಕಮುಖ ಸಂಚಾರವಿರುವ್ಲ್ಲಲಿ ಪೊಲೀಸರ ಸಮ್ಮುಖದಲ್ಲೇ ಆಟೋಗಳು ಓಡುತ್ತವೆ, ಸಿಗ್ನಲ್ ಅಕ್ಕಪಕ್ಕದಲ್ಲೇ ಬಸ್ಸುಗಳು ನಿಲ್ಲುತ್ತಿವೆ.... ಏನೂ ಬದಲಾಗಿಲ್ಲ. ಹೊಸ ಮತ್ತು ಹಳೆಯ ಬಸ್ ನಿಲ್ದಾಣಗಳ ನಡುವಿನ ರಸ್ತೆಯಲ್ಲಿ ವಾಹನ ದಟ್ಟಣೆ ಹಲವು ಪಟ್ಟು ಹೆಚ್ಚಿದೆ. ಒಂದು ಪರ್ಯಾಯ ರಸ್ತೆ ನಿರ್ಮಾಣವಾಗಿಲ್ಲ... ರಸ್ತೆಗಳ ಬಗ್ಗೆ ಹೇಳದಿರುವುದೇ ವಾಸಿ.ಕೆಲವೇ ತಿಂಗಳ ಹಿಂದಿನ ಘಟನೆ ಹೌಸಿಂಗ್ ಬೋರ್ಡ್ ದೊಡ್ಡ ಮೋರಿಯ ಪಕ್ಕದಲ್ಲೇ ವಿದ್ಯಾರ್ಥಿನಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.  ಎದುರಿನಿಂದ ಆಟೋ ಬಂತು. ಇಕ್ಕಟ್ಟಾದ ಜಾಗ, ಮೋರಿ ಪಕ್ಕದಲ್ಲಿ ತಡೆಗೋಡೆ ಇಲ್ಲ. ವಿದ್ಯಾರ್ಥಿನಿ ಮೋರಿಗೆ ಬಿದ್ದರು. ಅದೃಷ್ಟ ಚೆನ್ನಾಗಿತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಮೇಲೆದ್ದಳು. ಅದೆಷ್ಟು ಜನರು ಇಲ್ಲಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ, ಬಿದ್ದು ಬಿದ್ದು ಎದ್ದಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇಲ್ಲಿ ಒಂದು ತಡೆಗೋಡೆ ನಿರ್ಮಿಸಲೂ ಆಗದ ನಗರಸಭೆಯವರು, ಬಿ.ಎಂ. ರಸ್ತೆಯಲ್ಲಿ ಜನರೇ ಓಡಾಟಕ್ಕೆ ಅಗತ್ಯವೇ ಇಲ್ಲದ ಜಾಗದಲ್ಲಿ ಮೋರಿಗೆ ಸ್ಲ್ಯಾಬ್ ಹಾಕಲು 90 ಲಕ್ಷ ರೂಪಾಯಿ ಎಸ್‌ಎಫ್‌ಸಿ ಹಣ ಬಳಸಲು ಯೋಜನೆ ರೂಪಿಸಿದ್ದರು.ದೊಡ್ಡಿ ರಸ್ತೆ ಕೊನೆಯಲ್ಲಿ ಮೋರಿಗೆ    ಹಾಕಿದ ಸ್ಲ್ಯಾಬ್‌ಗೆ ಯಾವುದೇ ತಡೆ ಇಲ್ಲ. ರಸ್ತೆಗೆ ತಿರುವೂ ಇರುವುದರಿಂದ ಸರಿಯಾಗಿ ಕಾಣಿಸುವುದೂ ಇಲ್ಲ. ಪ್ರತಿದಿನ ನಸುಕಿನಲ್ಲೇ ಟ್ಯೂಶನ್‌ಗಾಗಿ ಅನೇಕ ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಇಲ್ಲಿ ಭರ‌್ರನೆ ಓಡಾಡುತ್ತಾರೆ. ಈಗಾಗಲೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿ ಇನ್ನು ಏನೇನಾಗಬೇಕೋ ಗೊತ್ತಿಲ್ಲ. ಹುಡುಕುತ್ತ ಹೋದರೆ ಬಡಾವಣೆಗೊಂದು `ಮರಣ ತಾಣ~ವಿದೆ. ಯಾವ ತಾಣ ಎಷ್ಟು ಅಪಾಯಕಾರಿ ಎಂಬ ಮಾಹಿತಿಯೂ ಇದೆ. ಆದರೆ ಅವುಗಳನ್ನು ಸರಿಪಡಿಸುವ ಇಚ್ಛೆ ಯಾರಿಗೂ ಇಲ್ಲ.ಯಾರೇ ಆಗಲಿ, ಇನ್ಯಾರದೋ ತಪ್ಪಿಗೆ ಅನ್ಯಾಯವಾಗಿ ಪ್ರಾಣ ಬಿಟ್ಟರೆ ದುಃಖವಾಗುತ್ತದೆ. ಅದರಲ್ಲೂ ಪುಟ್ಟ ಮಕ್ಕಳು ಈ ರೀತಿ ಪ್ರಾಣ ಬಿಟ್ಟಾಗ ಕಲ್ಲು ಮನಸ್ಸೂ ಕರಗಿ ನಾಲ್ಕು ಹನಿಯಾದರೂ ಕಣ್ಣೀರು ಸುರಿಸುತ್ತದೆ. ಆದರೆ ಎಚ್ಚರದಿಂದಿರಬೇಕಾದವರು ಇನ್ನೂ ನಿದ್ದೆ ಬಂದವರಂತೆ ನಟಿಸುತ್ತಿದ್ದಾರೆ. ಇದು ಹಾಸನದ ದುರಂತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.