ಸಾವಿರದ ಜಾನಪದ ಝೇಂಕಾರ

7

ಸಾವಿರದ ಜಾನಪದ ಝೇಂಕಾರ

Published:
Updated:
ಸಾವಿರದ ಜಾನಪದ ಝೇಂಕಾರ

ಜನಪದ ಗೀತೆಗಳು ಅಳಿದು ಹೋಗುತ್ತಿವೆ ಎಂಬ ಮಾತನ್ನು ಸುಳ್ಳು ಮಾಡುವಂತೆ ಇತ್ತೀಚೆಗೆ ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಒಂದು ಸಾವಿರ ಜನಪದ ಗಾಯಕರು ಜನಪದ ಗೀತೆಗಳಿಗೆ ದನಿಯಾದರು.ಸಾವಿರ ಗಾಯಕರು ಏಕ ಕಂಠದಲ್ಲೆಂಬಂತೆ ಜನಪದ ಗೀತೆಗಳನ್ನು ಹಾಡಿದ್ದು ನಗರ ಜೀವನದ ಒತ್ತಡದ ಬದುಕನ್ನೇ ಹಾಸಿ ಹೊದೆಯುತ್ತಿದ್ದವರ ಪಾಲಿಗೆ ಸ್ವಲ್ಪ ಮಟ್ಟಿಗಿನ ಮಾನಸಿಕ ನೆಮ್ಮದಿ ನೀಡುವಂತಿತ್ತು. ತಿಂಗಳ ಬೆಳಕಿನ ಹೊನಲಲ್ಲಿ, ಸಂಸ ಬಯಲಲ್ಲಿ ಹರಿದ ಜನಪದ ನಾದ ಗಂಗೆಯಲ್ಲಿ ಗಾಯಕರು, ಕೇಳುಗರು ಎಲ್ಲರೂ ಮಿಂದೆದ್ದರು.ಸಂಸ ಬಯಲು ಮಂದಿರದ ಸಭಿಕರು ಕೂರುವ ಸ್ಥಳವನ್ನೇ ವೇದಿಕೆ ಮಾಡಿಕೊಂಡು ಮಲೆ ಮಾದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯರನ್ನು ಗೀತೆಗಳ ಮೂಲಕ ನಗರಕ್ಕೆ ಕರೆತರುವ ಪ್ರಯತ್ನ ಕಾರ್ಯಕ್ರಮದ ಮೂಲಕ ಆಯಿತು. ಸೋಬಾನೆಯ ಸೊಲ್ಲುಗಳು ಕೇಳುಗರ ಎದೆಯೊಳಗೆ ಹಸಿರಾದವು.ಶರಣು ಶರಣುವಯ್ಯ ಗಣನಾಯಕ ಗೀತೆ ತನ್ನ ಓಘದಲ್ಲಿಯೂ ಸಾವಿರ ಕಂಠಗಳ ಮೂಲಕ ಮೂಡಬಲ್ಲುದು ಎಂಬುದು ಇಲ್ಲಿ ಸಾಬೀತಾಯಿತು. ಸಾವಿರ ಗಾಯಕರ ಮೂಲಕ `ಸಾವಿರದ~ ಜನಪದವನ್ನು ಬೆಳೆಸುವ ಪ್ರಯತ್ನ ಇದಾಗಿತ್ತು.ನಗರದ ರಂಗಸಂಸ್ಥಾನ ಸಂಸ್ಥೆ ತನ್ನ ದಶಮಾನೋತ್ಸವದ ಅಂಗವಾಗಿ ಇಂಥದ್ದೊಂದು ಅಭೂತಪೂರ್ವ `ಕನ್ನಡ ಜಾನಪದ ಝೇಂಕಾರ~ ಜನಪದ ಸಮೂಹ ಗೀತಗಾಯನ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಿತ್ತು. ಸಂಸ್ಥೆಯ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್ ಒಂದು ಸಾವಿರ ಜನರನ್ನು ಹಾಡಲು ವಿದ್ಯಾರ್ಥಿಗಳಷ್ಟೇ ಅಲ್ಲದೇ ಮಹಿಳಾ ಸಂಘಟನೆ ಮೂಲಕ ಗಾಯಕರನ್ನು ಸಿದ್ಧಪಡಿಸಿದರು.`ಒಂದು ಸಾವಿರ ಜನರನ್ನು ಸಂಘಟಿಸಿ, ಒಂದೇ ವೇದಿಕೆಯಲ್ಲಿ ಹಾಡಿಸಿದ್ದು ಕಷ್ಟದ ಕೆಲಸ. ಕಾರ್ಯಕ್ರಮ ಯಶಸ್ಸಿನಲ್ಲಿ ಎಲ್ಲ ಕಷ್ಟಗಳೂ ಮರೆತು ಹೋಗಿವೆ. ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತಗಳಲ್ಲಿ ಇಂತಹ ಪ್ರಯತ್ನಗಳು ನಡೆದಿವೆ. ಆದರೆ ಜನಪದ ಗೀತೆಗಳನ್ನು ಹಾಡಿಸುವ ಕಾರ್ಯಕ್ರಮಗಳು ಹಿಂದೆಂದೂ ನಡೆದಿಲ್ಲ. ಹಾಡಿದವರಿಗೇ ಇದರ ಯಶಸ್ಸು ಸಲ್ಲಬೇಕು~ ಎನ್ನುವ ವಿಜಯಕುಮಾರ್ ಕಾರ್ಯಕ್ರಮ ಯಶಸ್ವಿಯಾದ ಖುಷಿಯಲ್ಲಿದ್ದರು.`ಜನಪದ ಗೀತೆ ಕಲಿಯುವ ಹಾಗೂ ಹಾಡುವ ಉತ್ಸಾಹ ಜನರಲ್ಲಿದೆ. ಆದರೆ ಇಡೀ ರಾಜ್ಯದಲ್ಲಿ ಜನಪದ ಗೀತೆಗಳನ್ನು ಕಲಿಸುವ ಒಂದೇ ಒಂದು ಪೂರ್ಣಾವಧಿ ಸಂಗೀತ ಶಾಲೆಯೂ ಇಲ್ಲ. ಶಾಸ್ತ್ರೀಯ ಹಾಗೂ ಸುಗಮ ಸಂಗೀತವನ್ನು ಕಲಿಸುವ ಗುರು ಶಿಷ್ಯ ಪರಂಪರೆಯಂತೆ ಜನಪದ ಸಂಗೀತವನ್ನು ಕಲಿಸುವ ಪರಂಪರೆ ಬೆಳೆಯುತ್ತಿಲ್ಲ. ಜನಪದ ಗಾಯಕರು ಹಾಡಲು ತೋರುವ ಉತ್ಸಾಹವನ್ನು ಕಲಿಸುವ ಕಡೆಗೂ ತೋರಿಸಬೇಕು~ ಎನ್ನುವ ಅವರು ರಂಗಸಂಸ್ಥಾನದ ಮೂಲಕ ಜನಪದ ಗೀತೆಗಳ ಉಳಿವಿಗಾಗಿ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.ಗ್ರಂಥಸ್ಥವಾಗಿರುವ ಜನಪದ ಕಾವ್ಯಗಳನ್ನು ಕಂಠಸ್ಥಗೊಳಿಸುವ, ಜನರ ನಾಲಿಗೆಯ ಮೇಲೆ ತರುವ ಕನಸು ಹೊಂದಿರುವ ವಿಜಯಕುಮಾರ್ ಉತ್ತರ ಮತ್ತು ದಕ್ಷಿಣ ಕರ್ನಾಟಕಗಳ ಜನಪದ ಕಾವ್ಯಗಳಲ್ಲಿನ ಅಂತರವನ್ನು ದೂರ ಮಾಡುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.ಮುಂದಿನ ಏಪ್ರಿಲ್‌ನಲ್ಲಿ ಮತ್ತೊಂದು ದೊಡ್ಡ ಜನಪದ ಕಾರ್ಯಕ್ರಮವನ್ನು ಆಯೋಜಿಸುವ ಉತ್ಸಾಹದಲ್ಲಿರುವ ಅವರ ಕಾರ್ಯಕ್ಕೆ ನಾಡಿನ ಅನೇಕ ಸಂಸ್ಥೆಗಳೂ ಅವರ ಜೊತೆಯಾಗಿ ನಿಂತಿವೆ.          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry