ಸಾವಿರ ಎಕರೆಯಲ್ಲಿ ‘ಶಿವಕುಮಾರ ಗೋಶಾಲೆ’

7
ರೂ.3 ಕೋಟಿ ವೆಚ್ಚದಲ್ಲಿ ನಿರ್ಮಾಣ: ಸಿರಿಗೆರೆ ಸ್ವಾಮೀಜಿ

ಸಾವಿರ ಎಕರೆಯಲ್ಲಿ ‘ಶಿವಕುಮಾರ ಗೋಶಾಲೆ’

Published:
Updated:

ಚಿತ್ರದುರ್ಗ: ಬರಗಾಲ ಪೀಡಿತ ಪ್ರದೇಶಗಳ ಗೋವುಗಳಿಗಾಗಿ ಮಠಕ್ಕೆ ಸೇರಿರುವ ಒಂದು ಸಾವಿರ ಎಕರೆ ಕಾವಲು ಪ್ರದೇಶದಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ನೆನಪಿಗಾಗಿ ಗೋಶಾಲೆ ನಿರ್ಮಿಸಲಾಗುತ್ತಿದೆ ಎಂದು ಸಿರಿಗೆರೆಯ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.ತಾಲ್ಲೂಕಿನ ಸಿರಿಗೆರೆಯಲ್ಲಿ ಮಂಗಳವಾರ ನಡೆದ ಶಿವಕುಮಾರ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ‘ಗೋಶಾಲೆ ಅಭಿವೃದ್ಧಿಗಾಗಿ ರೂ.3 ಕೋಟಿ ಅಗತ್ಯವಿದೆ. ಮಠದಿಂದ ಒಂದು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ.  ಉಳಿದ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಕೈಜೋಡಿಸಬೇಕು. ಈ ಬಗ್ಗೆ ಪಶುಸಂಗೋಪನಾ ಇಲಾಖೆಯೊಂದಿಗೆ ಚರ್ಚಿಸುತ್ತೇವೆ’ ಎಂದು ಸ್ವಾಮೀಜಿ ವಿವರಿಸಿದರು.‘ಗೋಶಾಲೆಗೆ ಶಿವಕುಮಾರ ವನ ಎಂದು ನಾಮಕರಣ ಮಾಡಲಾಗುತ್ತದೆ. ಬರಗಾಲ ಪೀಡಿತ ಪ್ರದೇಶಗಳ ಜನರು ತಮ್ಮ ಜಾನುವಾರು ಈ ಗೋಶಾಲೆಗೆ ತಂದು ಬಿಡಬಹುದು’ ಎಂದು ಸ್ವಾಮೀಜಿ ಹೇಳಿದರು.‘ಅಭಿವೃದ್ಧಿ ಕೇಂದ್ರೀಕೃತ ಆಡಳಿತದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ' ಎಂದು  ಅಭಿಪ್ರಾಯಪಟ್ಟ ಸ್ವಾಮೀಜಿ, ಸಿರಿಗೆರೆ- ಸಾಸಲು- ದಾವಣಗೆರೆ ರಸ್ತೆ  ಅಭಿವೃದ್ಧಿಗೆ ಗಣಿ ಮಾಲೀಕರೇ ಹಣ ಖರ್ಚು ಮಾಡಲು ಸಿದ್ಧರಾಗಿದ್ದರೂ,  ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲು ಸರ್ಕಾರ 6 ತಿಂಗಳು ತೆಗೆದುಕೊಂಡಿತು' ಎಂದು ಉದಾಹರಿಸಿದರು.‘ಬ್ರಿಟಿಷರ ಕಾಲದಲ್ಲಿ ಪ್ರಾದೇಶಿಕ ಅಭಿವೃದ್ಧಿ ವಿಚಾರದಲ್ಲಿ ಅಮಲ್ದಾರರಿಗೆ ತೆಗೆದುಕೊಳ್ಳತ್ತಿದ್ದಷ್ಟು ನಿರ್ಧಾರವನ್ನು  ಈಗಿನ ಸರ್ಕಾರ ಜಿಲ್ಲಾಧಿಕಾರಿಗಳಿಗೆ ನೀಡಿಲ್ಲ’  ಎಂದು ವಿಷಾದಿಸಿದ ಸ್ವಾಮೀಜಿ, ಅಭಿವೃದ್ದಿ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕಾದರೆ ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.‘ಸಿರಿಗೆರೆ ಮಠವನ್ನು ಮೊದಲು ದುಗ್ಗಾಣಿ ಮಠ ಎನ್ನುತ್ತಿದ್ದರು. ಆ ಮಾತು ಭಕ್ತರ ಭಕ್ತಿಯ ಸಿರಿವಂತಿಕೆ ಪ್ರವಾಹದಲ್ಲಿ ಮರೆಯಾಗಿದೆ. ಈ ಮಠ ಭಕ್ತರಿಂದಲೇ ನಿರ್ಮಾಣವಾದ ಮಠವೇ ಹೊರತು, ನಮ್ಮ ಮಠ ಅಲ್ಲ.  ಭಕ್ತರ ಹಣವನ್ನು ಅವರೇ ಸೂಚಿಸಿದ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.‘೨೦೧೪ಕ್ಕೆ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ೧೦೦ನೇ ಜಯಂತ್ಯುತ್ಸವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಐದಾರು ಕೋಟಿ ವೆಚ್ಚದಲ್ಲಿ ಬೆಳ್ಳಿ ರಥ ನಿರ್ಮಿಸಿ ಅದರಲ್ಲಿ ಸ್ವಾಮಿಜಿಯವರ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವ ಅಭಿಲಾಷೆ ಇದೆ.ಅದಕ್ಕಾಗಿ ಈಗಾಗಲೇ ಭಕ್ತರು ಸುಮಾರು ೨೫ ಕೆಜಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಶಾಮನೂರು ಶಿವಶಂಕರಪ್ಪ ರಥಕ್ಕೆ ಬಳಸಬಹುದಾದ ಅರ್ಧದಷ್ಟು ಬೆಳ್ಳಿ ಹಾಗೂ ದಾವಣಗೆರೆ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ರಥದ ಕಾಲು ಭಾಗದಷ್ಟು ಬೆಳ್ಳಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಚಿಕ್ಕಮಗಳೂರಿನ ಬಸವಾನಂದ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗ ಸ್ವಾಮೀಜಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ದಾವಣಗೆರೆ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ರಾದ ಚಂದ್ರಪ್ಪ, ರಮೇಶ್, ಮಾಜಿ ಸಂಸತ್‌ ಸದಸ್ಯ ಪ್ರೊ. ಐ.ಜಿ.ಸನದಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry