ಸಾವಿರ ಚೀಲ ಭತ್ತ, ಹುಲ್ಲು ನೀರು ಪಾಲು

7
ಹೊನ್ನಾಳಿ: ಒಡೆದುಹೋದ ತುಂಗಾ ಮೇಲ್ದಂಡೆ ಮುಖ್ಯ ನಾಲೆ

ಸಾವಿರ ಚೀಲ ಭತ್ತ, ಹುಲ್ಲು ನೀರು ಪಾಲು

Published:
Updated:

ಹೊನ್ನಾಳಿ: ತುಂಗಾ ಮೇಲ್ದಂಡೆ ಮುಖ್ಯ ನಾಲೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿದ್ದು, ಗದ್ದೆಗಳಲ್ಲಿ ರಾಶಿ ಹಾಕಿದ್ದ ಸುಮಾರು ಒಂದು ಸಾವಿರ ಚೀಲಗಳಷ್ಟು ಭತ್ತ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಚೀಲೂರು ಕಡದಕಟ್ಟೆ– ಒಡೆಯರಹತ್ತೂರು ಗ್ರಾಮಗಳ ಮಧ್ಯೆ ಮಂಗಳವಾರ ಮಧ್ಯರಾತ್ರಿ   ನಂತರ ಸಂಭವಿಸಿದೆ.ಚೀಲೂರು ಕಡದಕಟ್ಟೆ ಗ್ರಾಮದ ಷಣ್ಮುಖಪ್ಪ ಅವರ ಹೊಲದಲ್ಲಿ ರಾಶಿ ಹಾಕಲಾಗಿದ್ದ 400 ಚೀಲ. ಚೀಲೂರಿನ ಮುರುಗೇಂದ್ರಪ್ಪ ಅವರ ಹೊಲದಲ್ಲಿ ರಾಶಿ ಹಾಕಲಾಗಿದ್ದ 300 ಚೀಲ. ಕೆಎಚ್‌ಎಂ ರತ್ನಮ್ಮ ಅವರ ಹೊಲದಲ್ಲಿ ರಾಶಿ ಹಾಕಲಾಗಿದ್ದ 300 ಚೀಲ ಭತ್ತ ನಾಶವಾಗಿದೆ.ಈ ಘಟನೆಯಲ್ಲಿ ಸಾವಿರಾರು ರೂಪಾಯಿಗಳಷ್ಟು ಮೌಲ್ಯದ ಭತ್ತದ ಹುಲ್ಲು ನಾಶವಾಗಿದೆ. ನೂರಾರು ಎಕರೆ ಪ್ರದೇಶಗಳಲ್ಲಿನ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಹಾನಿಗೀಡಾಗಿದೆ. ಈ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಸುಮಾರು 10ಕ್ಕೂ ಅಧಿಕ ನೀರೆತ್ತುವ ಮೋಟಾರ್‌ಗಳು ಜಲಾವೃತಗೊಂಡಿವೆ.ತುಂಗಾ ಮೇಲ್ದಂಡೆ ಮುಖ್ಯ ನಾಲೆ ಕೆಳಭಾಗದ ಜಮೀನುಗಳಲ್ಲಿ ಈಚೆಗೆ ಬತ್ತ ಕಟಾವು ಮಾಡಿ ರಾಶಿ ಹಾಕಲಾಗಿತ್ತು. ಕೆಲ ರೈತರು ಕಾಳು ಸಹಿತ ಬತ್ತದ ಹುಲ್ಲನ್ನು ರಾಶಿ ಹಾಕಿದ್ದರು. ಈ ಎಲ್ಲವೂ ಒಂದೇ ರಾತ್ರಿ ಗಂಗೆ ಪಾಲಾಗಿದೆ.ಅಧಿಕ ಮೌಲ್ಯದ ಭತ್ತದ ಬೀಜ, ಗೊಬ್ಬರ, ಕಳೆ ನಾಶಕ ಇತ್ಯಾದಿಗೆಂದು ಸಾಲ ಸೋಲ ಮಾಡಿದ್ದ ರೈತ, ಇದೀಗ ಬತ್ತ ನೀರು ಪಾಲಾಗಿರುವುದರಿಂದ ದಿಕ್ಕು ತೋಚದಂತಾಗಿದ್ದಾನೆ. ಒಟ್ಟು ₨ 30 ಲಕ್ಷದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಐದು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡಿದ್ದ ತುಂಗಾ ಮೇಲ್ದಂಡೆ ಮುಖ್ಯ ನಾಲೆ ಒಡೆದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂಬುದು ಸ್ಥಳದಲ್ಲಿದ್ದ ರೈತರ ಆರೋಪವಾಗಿದೆ.ಉಪವಿಭಾಗಾಧಿಕಾರಿ ಡಾ.ಎಸ್‌. ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಕಳೆದುಕೊಂಡ ಎಲ್ಲಾ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಅವರನ್ನು ಒತ್ತಾಯಿಸಿದರು. ಕಂದಾಯ ಮತ್ತು ತುಂಗಾ ಮೇಲ್ದಂಡೆ ಯೋಜನೆಯ ವಲಯ ಅಧಿಕಾರಿಗಳು ನಷ್ಟದ ಅಂದಾಜಿನ ವರದಿ ಸಲ್ಲಿಸುತ್ತಾರೆ. ಅದರ ಆಧಾರದ ಮೇಲೆ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಡಾ.ಎಸ್‌.ನಾಗರಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry