ಸಾವಿರ ದಿನ : ಬಿಜೆಪಿ ಬಲಪ್ರದರ್ಶನ

7

ಸಾವಿರ ದಿನ : ಬಿಜೆಪಿ ಬಲಪ್ರದರ್ಶನ

Published:
Updated:

ಬೆಂಗಳೂರು: ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಆಡಳಿತಾರೂಢ ಬಿಜೆಪಿ ನಗರದಲ್ಲಿ ಭಾನುವಾರ ಮತ್ತೆ ಶಕ್ತಿ ಪ್ರದರ್ಶನ ನಡೆಸಿತು. ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರ್ಕಾರ ಸಾವಿರ ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಕಮಲ ಪಾಳೆಯದ ಮತ್ತೊಂದು ಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು.ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರಿಂದ ತುಂಬಿದ್ದ ಮೈದಾನದಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯ ಬಿಜೆಪಿ ವತಿಯಿಂದ ನಡೆದ ‘ಜನತೆಗೆ ವಂದನೆ, ಕಾರ್ಯಕರ್ತರಿಗೆ ಅಭಿನಂದನೆ’ ಬೃಹತ್ ಸಮಾವೇಶ ಒಂದರ್ಥದಲ್ಲಿ 2014ರ ಲೋಕಸಭಾ ಚುನಾವಣಾ ಪೂರ್ವತಯಾರಿಯಂತೆಯೂ ಇತ್ತು. ರಾಜ್ಯದ 40 ಸಾವಿರ ಮತಗಟ್ಟೆಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಕ್ಷದ ನಾಯಕರು ಕಾರ್ಯಕರ್ತರನ್ನು ಹುರಿದುಂಬಿಸಿದರು. ಈ ಮೂಲಕ ಇಡೀ ಸಮಾವೇಶದಲ್ಲಿ ಕಾರ್ಯಕರ್ತರೇ ಕೇಂದ್ರಬಿಂದು ಆಗಿರುವಂತೆ ನೋಡಿಕೊಂಡರು.ಸರ್ಕಾರ ಅವಧಿ ಪೂರೈಸಲಿದೆ: ಸಮಾವೇಶ ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲೇ ಈ ಸರ್ಕಾರ ಐದು ವರ್ಷ ಪೂರೈಸಲಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಪಕ್ಷದ ಸಂಪೂರ್ಣ ಬೆಂಬಲ ಇದೆ. ಉಳಿದ ಅವಧಿಗೂ ಅವರ ನೇತೃತ್ವದಲ್ಲೇ ಸರ್ಕಾರ ಮುಂದುವರಿಯುತ್ತದೆ’ ಎಂದು ಘೋಷಿಸಿದರು.ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆ ಕಂಡು ಕಾಂಗ್ರೆಸ್ ನಾಯಕರು ಅಸ್ವಸ್ಥರಾಗಿದ್ದಾರೆ. ರಾಜ್ಯಪಾಲರು ಮತ್ತು ಇತರೆ ವಾಮಮಾರ್ಗಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮುಖಂಡರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.‘ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈಹಾಕಿದವರಿಗೆ ಜಿ.ಪಂ. ಮತ್ತು ತಾ.ಪಂ.ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಅಭೂತಪೂರ್ವ ಜನಬೆಂಬಲದೊಂದಿಗೆ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಕುಸಿದು ಹೋಗಿದೆ’ ಎಂದರು.ಓಟ ಮುಂದುವರಿಯಲಿ: ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಸ್ವತಂತ್ರವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪಕ್ಷದ ಕಾರ್ಯಕರ್ತರ ಶ್ರಮ ಕಾರಣ. ಈ ಸರ್ಕಾರ ಯಶಸ್ವಿಯಾಗಿ 1,000 ದಿನಗಳನ್ನು ಪೂರೈಸುತ್ತಿರುವುದು ಸಂತಸದ ಸಂಗತಿ. ರಾಜ್ಯದ ಬಿಜೆಪಿ ಸರ್ಕಾರ ನಿಜವಾದ ರೈತಪರ ಸರ್ಕಾರ ಎಂದು ಶ್ಲಾಘಿಸಿದರು. ರೈತರಿಗೆ ಉತ್ತೇಜನ ನೀಡುವುದು ಈ ಹೊತ್ತಿನ ತುರ್ತು.   ಆ ಅವಶ್ಯಕತೆಯನ್ನು ಪೂರೈಸುವ ಉದ್ದೇಶದಿಂದ ಯಡಿಯೂರಪ್ಪ ಕೃಷಿ ಬಜೆಟ್ ಮಂಡಿಸುತ್ತಿದ್ದಾರೆ. ದೇಶದ ಯಾವುದೇ ರಾಜ್ಯ ಸರ್ಕಾರವೂ ಮಾಡದ ಕೆಲಸವನ್ನು ತಮ್ಮ ಪಕ್ಷದ ಸರ್ಕಾರ ಮಾಡುತ್ತಿದೆ. ಶೇಕಡ 1ರ ಬಡ್ಡಿದರಲ್ಲಿ ಸಾಲ ನೀಡುವ ಯೋಜನೆ ಕೂಡ ಈ ಸರ್ಕಾರದ ಐತಿಹಾಸಿಕ ಸಾಧನೆಯಾಗಲಿದೆ ಎಂದರು.‘ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳಲ್ಲೂ ಗೆಲುವು ಸಾಧಿಸುವ ರೀತಿಯಲ್ಲಿ ಪಕ್ಷವನ್ನು ಸಂಘಟಿಸಬೇಕು. ರಾಜ್ಯದ ಜನತೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಮತಗಳನ್ನಾಗಿ ಪರಿವರ್ತಿಸಬೇಕು’ ಎಂದು ಗಡ್ಕರಿ ಕಾರ್ಯಕರ್ತರಿಗೆ ಕರೆ ನೀಡಿದರು.ವಿಸರ್ಜನೆಯ ಪ್ರಶ್ನೆಯೇ ಇಲ್ಲ: ಸಮಾವೇಶದ ಕೊನೆಯಲ್ಲಿ ಮಾತನಾಡಿದ ಯಡಿಯೂರಪ್ಪ, ‘ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವಂತಹ ದುಸ್ಥಿತಿ ನಮಗೆ ಬಂದಿಲ್ಲ. ಆ ಪ್ರಶ್ನೆಯೇ ಈಗ ನಮ್ಮ ಮುಂದಿಲ್ಲ. ಐದು ವರ್ಷಗಳ ಅವಧಿಯನ್ನು ಸುಗಮವಾಗಿ ನಮ್ಮ ಸರ್ಕಾರ ಪೂರೈಸುತ್ತದೆ’ ಎಂದು ಈ ಕುರಿತ ವದಂತಿಗೆ ಖಚಿತ ಸ್ಪಷ್ಟನೆ ನೀಡಿದರು.ಭಾಷಣದುದ್ದಕ್ಕೂ ಭಾವುಕರಾಗಿಯೇ ಇದ್ದ ಅವರು, ‘ಸಾವಿರ ದಿನಗಳಲ್ಲಿ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಜನರ ಸಮಸ್ಯೆಗಳ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅವಕಾಶವನ್ನೇ ನೀಡಿಲ್ಲ. ಈಗ ಸರ್ಕಾರದ ಸಾಧನೆಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದೇನೆ. ಅದನ್ನು ಅವರು ಓದಲಿ. ಎಲ್ಲ ವಿಷಯಗಳ ಬಗ್ಗೆಯೂ ವಿಧಾನಮಂಡಲದಲ್ಲಿ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ. ಪ್ರತಿಪಕ್ಷಗಳೂ ಸಿದ್ಧವಾಗಿ ಬರಲಿ’ ಎಂದು ಸವಾಲು ಹಾಕಿದರು.‘ರೈತರಿಗಾಗಿ ಕೃಷಿ ಬಜೆಟ್ ಮಂಡಿಸುತ್ತಿದ್ದೇನೆ. ಶೇ 1ರ ಬಡ್ಡಿ ದರದಲ್ಲಿ ಕೃಷಿಕರಿಗೆ ಬೆಳೆ ಸಾಲ ನೀಡಲು ನಿರ್ಧರಿಸಿದ್ದೇನೆ. ಹಲವು ದಶಕಗಳಿಂದ ನಿರಂತರವಾಗಿ ಸರ್ಕಾರದ ಖಜಾನೆ ಲೂಟಿ ಮಾಡಿ, ರಾಜ್ಯವನ್ನು ಸಂಕಷ್ಟದ ಪರಿಸ್ಥಿತಿಗೆ ತಳ್ಳಿರುವ ನಿಮಗೆ ನನ್ನನ್ನು ಟೀಕಿಸುವ ನೈತಿಕತೆ ಇದೆಯೇ’ ಎಂದು ಪ್ರತಿಪಕ್ಷಗಳನ್ನು ಖಾರವಾಗಿ ಪ್ರಶ್ನಿಸಿದರು.ತಲೆ ಎತ್ತಲು ಬಿಡಬೇಡಿ: ಪ್ರತಿಪಕ್ಷಗಳು ಜನತೆಯ ನಂಬಿಕೆ ಕಳೆದುಕೊಂಡಿವೆ. ಇನ್ನೂ 20 ವರ್ಷ ಕಾಲ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿವೆ. ಈಗ ಪಕ್ಷದ ಎಲ್ಲ ಕಾರ್ಯಕರ್ತರೂ ಒಕ್ಕೊರಲಿನಿಂದ ದುಡಿಯಬೇಕು. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತಲೆ ಎತ್ತಲು ಬಿಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.‘ನಿಮ್ಮ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ಮಾರ್ಚ್ ತಿಂಗಳಿನಿಂದ ಖುದ್ದಾಗಿ ಹಳ್ಳಿಗಳಿಗೆ ಬರುತ್ತೇನೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತೇನೆ. ಆದರೆ ಅವುಗಳು ಮಧ್ಯವರ್ತಿಗಳ ಪಾಲಾಗದಂತೆ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು’ ಎಂದರು.‘ನಾನು ಯಾವತ್ತೂ ನನ್ನಿಂದಲೇ ಸರ್ಕಾರ ಬಂದಿದೆ ಎಂದು ಹೇಳಿಲ್ಲ. ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರಿಂದ ನಾವು ಇಲ್ಲಿ ನಿಂತಿದ್ದೇವೆ. ಯಡಿಯೂರಪ್ಪ ಇಲ್ಲಿ ನೆಪಮಾತ್ರ. ಪಕ್ಷದಲ್ಲಿ ಕಾರ್ಯಕರ್ತರಿಗಿಂತ ದೊಡ್ಡವರು ಯಾರೂ ಇಲ್ಲ. ನೀವೇ ನಮ್ಮ ಪರವಾಗಿ ಶಾಸಕರು, ಮುಖಂಡರು ಎಲ್ಲಾ’ ಎಂದು ನುಡಿದರು.ಕನಸು ಕಾಣಬೇಡಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿ ಸರ್ಕಾರ ಉರುಳಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆ ಕುರಿತು ಪದೇಪದೇ ಮಾತನಾಡುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ’ ಎಂದರು.‘ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಜನರು ವಿರೋಧಪಕ್ಷದ ಸ್ಥಾನ ನೀಡಿದ್ದಾರೆ. ಅಲ್ಲಿ ಕುಳಿತು ರಚನಾತ್ಮಕ ಕೆಲಸ ಮಾಡಿ’ ಎಂದು ವ್ಯಂಗ್ಯವಾಡಿದರು.ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಸಚಿವರಾದ ಜಗದೀಶ ಶೆಟ್ಟರ್, ಸುರೇಶ್‌ಕುಮಾರ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಸಮಾವೇಶದಲ್ಲಿ ಮಾತನಾಡಿದರು. ಪಕ್ಷದ ನಾಯಕರಾದ ವೆಂಕಯ್ಯ ನಾಯ್ಡು, ಸಚಿವರಾದ ಆರ್. ಅಶೋಕ, ರೆಡ್ಡಿ ಸಹೋದರರು ಸೇರಿದಂತೆ ಬಹುತೇಕ ಎಲ್ಲ ಸಚಿವರು, ಸಂಸದರು, ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಮಸ್ಯೆ ಹೊತ್ತು ಬರುವುದಿಲ್ಲ: ‘ಇನ್ನು ಮುಂದೆ ಯಾವುದೇ ಸಮಸ್ಯೆ ಹೊತ್ತು ದೆಹಲಿಗೆ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಬಹಿರಂಗವಾಗಿಯೇ ವಾಗ್ದಾನ ನೀಡಿದರು.‘ಪಕ್ಷದ ಎಲ್ಲ ಮುಖಂಡರೂ ಒಗ್ಗಟ್ಟಿನಿಂದಲೇ ಮುನ್ನಡೆಯುತ್ತೇವೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಮುನ್ನಡೆಯುತ್ತೇನೆ. ಈ ಕುರಿತು ಸ್ಪಷ್ಟವಾಗಿ ನಾನು ನಿಮಗೆ ವಾಗ್ದಾನ ನೀಡುತ್ತೇನೆ’ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry