ಸಾವಿರ ಹಳ್ಳಿಗಳಲ್ಲಿ ಸುವರ್ಣ ಗ್ರಾಮೋದಯ

ಮಂಗಳವಾರ, ಜೂಲೈ 23, 2019
24 °C

ಸಾವಿರ ಹಳ್ಳಿಗಳಲ್ಲಿ ಸುವರ್ಣ ಗ್ರಾಮೋದಯ

Published:
Updated:

ದಾವಣಗೆರೆ: `ಸುವರ್ಣ ಗ್ರಾಮೋದಯ ಯೋಜನೆ~ಯ 5ನೇ ಹಂತವನ್ನು 30 ಜಿಲ್ಲೆಗಳ ಒಂದು ಸಾವಿರ ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಎರಡು ವರ್ಷಗಳ ಅವಧಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಿದೆ.ಆಯಾ ಜಿಲ್ಲೆಗಳಿಂದ ಗ್ರಾಮಗಳನ್ನು ಆಯ್ಕೆ ಮಾಡುವುದು ಹಾಗೂ ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆಯುವ ಕಾರ್ಯ ಪೂರ್ಣಗೊಂಡ ನಂತರ, ಅಕ್ಟೋಬರ್ ಅಂತ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ.`ಸುವರ್ಣ ಕರ್ನಾಟಕ~ ವರ್ಷಾಚರಣೆ ಸ್ಮರಣಾರ್ಥ, 2006ರಲ್ಲಿ ಪ್ರಾರಂಭಗೊಂಡ ಈ ಯೋಜನೆಯ ಅಡಿ, ನಾಲ್ಕು ಹಂತಗಳಲ್ಲಿ ರೂ 1,722.43 ಕೋಟಿ ವೆಚ್ಚ ಮಾಡಿ, ಒಟ್ಟು 3,381 ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವ ಪಡೆದಿದೆ. ಇದೀಗ, 5ನೇ ಹಂತ ಆರಂಭಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗ್ರಾಮಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ರಸ್ತೆ ಹಾಗೂ ಚರಂಡಿಗೆ ಹೆಚ್ಚಿನ ಹಣ: ಇತ್ತೀಚೆಗೆ ಇಲಾಖೆಯ ನೀಡಿರುವ ಆದೇಶದ ಪ್ರಕಾರ, `ಸುವರ್ಣ ಗ್ರಾಮೋದಯ~ ಯೋಜನೆಯಡಿ 5ನೇ ಹಂತದಲ್ಲಿ ದೊರೆಯುವ ಅನುದಾನದಲ್ಲಿ ಶೇ 70ರಷ್ಟು ಹಣವನ್ನು ರಸ್ತೆಗಳು ಹಾಗೂ ಚರಂಡಿ, ಶೇ 3ರಷ್ಟು ಹಣವನ್ನು ಘನ ತ್ಯಾಜ್ಯ ನಿರ್ವಹಣೆ, ಶೇ 2ರಷ್ಟು ಹಣವನ್ನು ಸೌರ ವಿದ್ಯುತ್ ದೀಪಗಳ ಅಳವಡಿಕೆ, ಶೇ 10ರಷ್ಟನ್ನು ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣ ಹಾಗೂ ಉಳಿದ ಶೇ 15ರಷ್ಟು ಹಣದಲ್ಲಿ ಶಾಲೆ, ಗ್ರಾಮ ಪಂಚಾಯ್ತಿ, ಗ್ರಂಥಾಲಯ ಕಟ್ಟಡ, ಸ್ತ್ರೀಶಕ್ತಿ ಸಂಘಗಳಿಗೆ ಸಭಾಭವನ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಬಳಸಬೇಕು ಎಂದು ಸೂಚಿಸಲಾಗಿದೆ. 5ನೇ ಹಂತದಲ್ಲಿ ಒಂದು ಸಾವಿರ ಹಳ್ಳಿಗಳ 40 ಲಕ್ಷ ಮಂದಿಗೆ ಉಪಯೋಗವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಜಿಲ್ಲಾ ಪಂಚಾಯ್ತಿ ಸಿಇಒಗಳು ಜುಲೈ 25ರ ಒಳಗೆ ಗ್ರಾಮಗಳ ಪಟ್ಟಿ ಸಲ್ಲಿಸಬೇಕು. ನಂತರ ಸರ್ಕಾರದ ಮಟ್ಟದಲ್ಲಿ ಪಟ್ಟಿ ಅಂತಿಮಗೊಳಿಸಲಾಗುವುದು.ಯೋಜನೆ ಆರಂಭದ ನಂತರ ಪ್ರತಿ 5 ತಿಂಗಳಿಗೆ ಒಮ್ಮೆ `ಸಿಇಒ~ಗಳು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಬೇಕು. 2014ರ ಮಾರ್ಚ್ 31ರ ಒಳಗೆ ಅನುಷ್ಠಾನ ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿದೆ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು (92) ಹಾಗೂ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (14) ಹಳ್ಳಿಗಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry