ಸಾವು ಬದುಕಿನ ನಡುವೆ ಹೋರಾಟ

6

ಸಾವು ಬದುಕಿನ ನಡುವೆ ಹೋರಾಟ

Published:
Updated:

ಬೆಳಗಾವಿ: ಇಲ್ಲಿನ ಸದಾಶಿವನಗರದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ವಿದ್ಯುದಾಘಾತಕ್ಕೆ ಒಳಗಾಗಿ ತೀವ್ರ ಸುಟ್ಟ ಗಾಯ­ಗಳಿಂದ ಬಳಲುತ್ತಿರುವ ಮೂವರು ನಗರದ ಕೆಎಲ್‌ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚೇತರಿಸಿಕೊಂಡಿದ್ದು, ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಘಟನೆ­ಯಲ್ಲಿ ಮೃತಪಟ್ಟಿದ್ದ ಸದಾಶಿವನಗರದ ನಿವಾಸಿ ಗೀತಾ ಗಜಾನನ ಸಪ್ಲೆ (42) ಹಾಗೂ ಅವರ ಪುತ್ರ ಸುಜಲ್‌ (10), ಗಂಗಪ್ಪ ಮುದಲಿ (52), ಪ್ರಜ್ವಲ್‌ ಅನಿಲ್‌ ಮಾಳಿ (16) ಅವರ ಅಂತ್ಯಕ್ರಿಯೆ ಶೋಕ ಸಾಗರದ ನಡುವೆ ಗುರುವಾರ ನಡೆಯಿತು.ಸದಾಶಿವನಗರದ ನಿವಾಸಿ ಸಾಹಿಲ್‌ ಕಾಜುಕರ್‌ (16) ಸ್ಥಿತಿ ಚಿಂತಾಜನಕವಾಗಿದೆ. ಕೃತಕ ಉಸಿರಾಟ­ದಂತಹ ಜೀವ ರಕ್ಷಕ ಸಾಧನಗಳೊಂದಿಗೆ ಅವರಿಗೆ  ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುದಾಘಾತದಿಂದಾಗಿ ಹಾರಿ ನೆಲಕ್ಕೆ ಬಿದ್ದಿರುವುದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಹಲವೆಡೆ ಸುಟ್ಟ ಗಾಯಗಳಾಗಿವೆ.ಸೋಮೇಶ ಮಡಿವಾಳ (16) ಹಾಗೂ ಸಚಿನ್‌ ಕುಂಪಿ (18) ಅವರ ತಲೆಗೆ ಪೆಟ್ಟು ಬಿದ್ದಿದ್ದು, ಅಲ್ಲಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ಇಬ್ಬರಿಗೂ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಸವ­ರಾಜ ಕೋಲಕಾರ (33) ಎಂಬುವವರು ಆರೋಗ್ಯ­ದಲ್ಲಿ ಚೇತರಿಸಿಕೊಂಡಿದ್ದು, ಪ್ಲಾಸ್ಟಿಕ್‌ ಸರ್ಜರಿ ವಿಭಾ-­ಗಕ್ಕೆ ಸ್ಥಳಾಂತರಿಸಲಾಗಿದೆ. ಆರೋಗ್ಯದಲ್ಲಿ ಸ್ಥಿರತೆ ಬಂದ ಹಿನ್ನೆಲೆಯಲ್ಲಿ ಸಂತೋಷ ಕಾಳೆ (48) ಹಾಗೂ ಅಪ್ಪಾಜಿ ಮಾಳವಾಡಕರ್‌ (55) ಎಂಬು­ವವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತ­ರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಅಂತ್ಯಕ್ರಿಯೆ: ಸದಾಶಿವನಗರದ ಸಾರ್ವಜನಿಕ ಗಣೇಶ ಮಂಡಳದ ಅಧ್ಯಕ್ಷರಾದ ಗಜಾನನ ಸಪ್ಲೆ ಅವರ ಪತ್ನಿ ಗೀತಾ ಹಾಗೂ ಪುತ್ರ ಸುಜಲ್‌ ಅವರ ಅಂತ್ಯಕ್ರಿಯೆಯನ್ನು ಕೊಲ್ಲಾಪುರ ರಸ್ತೆಯ ಕಾಮತ್‌ ಗಲ್ಲಿಯ ಸ್ಮಶಾನದಲ್ಲಿ ಗುರುವಾರ ಬೆಳಿಗ್ಗೆ ಶೋಕ ಸಾಗರದ ನಡುವೆ ನೆರವೇರಿಸಲಾಯಿತು.ಸಪ್ಲೆ ಕುಟುಂಬ ಹಾಗೂ ಸಂಬಂಧಿಕರು, ಸಂಸದ ಸುರೇಶ ಅಂಗಡಿ, ಪಾಲಿಕೆ ಸದಸ್ಯೆ ಸರಳಾ ಹರೇಕರ, ಸ್ಥಳೀಯ ಜನಪ್ರತಿನಿಧಿಗಳು, ಸದಾಶಿವನಗರದ ನಾಗ­ರಿಕರು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.ಇದಕ್ಕೂ ಮೊದಲು ಪ್ರಜ್ವಲ್‌ ಮಾಳಿ ಅವರ ಅಂತ್ಯಕ್ರಿಯೆಯು ಸದಾಶಿವನಗರದ ಸ್ಮಶಾನದಲ್ಲಿ ನಡೆ­ಸಲಾಯಿತು. ಗಂಗಮ್ಮ ಮುದಲಿ ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಹಿರೇಬಾಗೇವಾಡಿಯ ಅರಳಿ­ಕಟ್ಟಿ ಗ್ರಾಮದಲ್ಲಿ ನೆರವೇರಿಸಲಾಯಿತು.ಸಚಿವರ ಭೇಟಿ: ಸಚಿವ ಪ್ರಕಾಶ ಹುಕ್ಕೇರಿ, ಸಂಸದ ಸುರೇಶ ಅಂಗಡಿ, ರಾಜ್ಯಸಭೆ ಸದಸ್ಯ ಪ್ರಭಾ­ಕರ ಕೋರೆ ಹಾಗೂ ಜಿಲ್ಲಾಧಿಕಾರಿ ಎನ್‌. ಜಯ­ರಾಮ್‌ ಅವರು ವಿದ್ಯುದಾಘಾತದಿಂದ ಮೃತ­ಪಟ್ಟ-ವರ ಮನೆಗಳಿಗೆ ಬೆಳಿಗ್ಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ಗಂಗಪ್ಪ ಮುದಲಿ ಹಾಗೂ ಪ್ರಜ್ವಲ್‌ ಮಾಳಿ ಅವರ ಮನೆಗೆ ಹೋಗಿ ಹುಕ್ಕೇರಿ ಸಂತಾಪ ಸೂಚಿಸಿದರು. ಗೀತಾ ಹಾಗೂ ಸುಜಲ್‌ ಸಪ್ಲೆ ಅವರ  ಅಂತಿಮ ಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡ ಸಚಿವರು ಸಪ್ಲೆ ಕುಟುಂಬದವರಿಗೆ ಸಾಂತ್ವನ ಹೇಳಿದರು.ವಿಧಾನಮಂಡಲ ಸಮಿತಿ ಸದಸ್ಯರ ಭೇಟಿ: ಬೆಳಗಾವಿಯಲ್ಲಿ ಸಭೆ ನಡೆಸಲು ಆಗಮಿಸಿದ್ದ ವಿಧಾನ­ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ನೇತೃತ್ವದ ತಂಡದ ಸದಸ್ಯರು ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರನ್ನು ಶಕುಂತಲಾ ಶೆಟ್ಟಿ ಕೋರಿ­ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ.ವಿ. ಜಾಲಿ ಅವರು ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ತಂಡಕ್ಕೆ ಮಾಹಿತಿ ನೀಡಿದರು.ಸಮಿತಿ ಸದಸ್ಯರಾದ ಅಶ್ವತ್‌ ನಾರಾಯಣ, ಎಸ್‌.ಟಿ. ಸೋಮಶೇಖರ್‌, ಶಾರದಾ ಶೆಟ್ಟಿ, ಶಾರದಾ ಪೂರ್ಯ ನಾಯ್ಕ, ವೈ. ರಾಮಕ್ಕ ಮತ್ತಿತರರರು ಹಾಜರಿದ್ದರು.‘ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹೆಸ್ಕಾಂ ವತಿಯಿಂದ ತಲಾ 1 ಲಕ್ಷ ರೂಪಾಯಿ ಹಣವನ್ನು ವಿತರಿಸಲಾಗುತ್ತಿದೆ. ಮೃತರ ಕುಟುಂಬಕ್ಕೆ ಸರ್ಕಾ­ರದ ವತಿಯಿಂದ ಹೆಚ್ಚಿನ ಪರಿಹಾರ ಕೊಡಿ­ಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry