ಶನಿವಾರ, ಜುಲೈ 24, 2021
23 °C

ಸಾವು ಮುಂದೂಡಲು ಸಾಧ್ಯವೇ?: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ತಾಲ್ಲೂಕಿನಾದ್ಯಂತ ದಲಿತರಿಗೆ ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ದಲಿತ ಸಮಾಜ ಅತಂತ್ರ ಸ್ಥಿತಿಯಲ್ಲಿದೆ ಎಂದು ದಲಿತ ಮುಖಂಡರು ಒಕ್ಕೊರಿನಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ   ಉಪವಿಭಾಗ ಮಟ್ಟದ ಎಸ್.ಸಿ. ಮತ್ತು ಎಸ್.ಟಿ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ಕಳೆದ ಸಭೆಯಲ್ಲಿ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಗುರುತಿಸಿ ಸ್ಮಶಾನ ನಿರ್ಮಿಸುವ ಭರವಸೆ ನೀಡಲಾಗಿತ್ತು. 

ಆದರೆ, ಈವರೆಗೂ ಅಧಿಕಾರಿಗಳು ಭೂಮಿ ಗುರುತಿಸುವಲ್ಲೇ ಕಾಲ ಕಳೆದಿದ್ದಾರೆ. ಸ್ಮಶಾನ ನೀಡುವವರಗೆ ದಲಿತರು ಸಾಯುವುದನ್ನು ಮುಂದೂಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾದ ಹಲವು ಯೋಜನೆಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ವಿತರಿಸುವಲ್ಲಿ ಶಾಖಾ ವ್ಯವಸ್ಥಾಪಕರು ಮೀನಮೇಷ  ಎಣಿಸುತ್ತಿದ್ದಾರೆ. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ಅವರು ಚರ್ಚಿಸಬೇಕು.ದಲಿತರಿಗಾಗಿ ರೂಪಿಸಿದ ಯೋಜನೆಗಳನ್ನು ಫಲಾನುಭವಿಗಳಿಗೆ ತಲಪಿಸಬೇಕು ಎಂದು ಡಿ. ಕುಮಾರ್ ಆಗ್ರಹಿಸಿದರು.ದೊಂಬರ ಕಾಲೊನಿ: ತಾಲ್ಲೂಕಿನಲ್ಲಿ ದಶಕಗಳಿಂದ ತಳವೂರಿರುವ ದೊಂಬರಿಗೆ ಸೂರು ನೀಡಲು ಹೋರಾಟ ನಡೆಸಿದ ಫಲವಾಗಿ ಇಂದು ಈ ವರ್ಗದವರಿಗೆ ವಸತಿ ಸೌಲಭ್ಯ ದೊರಕಿದೆ. ಆದರೆ, ಈ ಜನರಿಗೆ ವಸತಿ ಹಕ್ಕು ಪತ್ರ ನೀಡದ ಕಾರಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಪಡೆಯಲು ತೊಂದರೆ ಎದುರಾಗಿದೆ.

ಇದೇ ರೀತಿ ಪಟ್ಟಣದ ಹಂದಿಜೋಗಿಗಳಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪುರಸಭೆಯ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ನಿವೇಶನ ಅಥವಾ ವಸತಿ ಕಲ್ಪಿಸುವ ಕ್ರಮಕ್ಕೆ ಪುರಸಭೆ ಮುಂದಾಗಿಲ್ಲ ಎಂದು ನಿಂಗರಾಜ್ ಮಲ್ಲಾಡಿ ದೂರಿದರು. ಹಂದಿಜೋಗಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ನಿವೇಶನ ಕಲ್ಪಿಸುವಂತೆ ತಹಶೀಲ್ದಾರ್ ಶಿವಾನಂದ ಮೂರ್ತಿ ಅವರಿಗೆ ಉಪವಿಭಾಗಾಧಿಕಾರಿ    ಸೂಚಿಸಿದರು. ತಾಲ್ಲೂಕು ಪಂಚಾಯಿತಿ  ಕಾರ್ಯ ನಿರ್ವಹಣಾಧಿಕಾರಿ ಮಹದೇವಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.