ಶುಕ್ರವಾರ, ಮೇ 14, 2021
21 °C

ಸಾಹಸದ ಮಾದರಿ ನೀರಜಾ ಭಾನೋಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ -5-1986  ಪ್ಯಾನ್ ಆಮ್  ಕ್ಲಿಪ್ಪರ್-73 ವಿಮಾನದ ಗಗನ ಸಖಿಯರ ಮುಖ್ಯಸ್ಥೆ (ಚೀಫ್ ಫ್ಲೈಟ್ ಪರ್ಸರ್) ಭಾರತೀಯ ನೀರಜಾ ಭಾನೋಟ್, ಬೆಳಿಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ತಮ್ಮನ್ನು ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ ಒಂಬತ್ತು ಗಂಟೆಗೆ ಮುಂಬೈನ ತಮ್ಮ ತಂದೆಯ ಮನೆಯಲ್ಲಿ ಲಘುವಾದ ಆಹಾರ ಸೇವಿಸಿದ ನೀರಜಾ, ಕೇವಲ ಮೂರು ಗಂಟೆಗಳ ಕಾಲ ಮಾತ್ರ ವಿಶ್ರಮಿಸಿ, ರಾತ್ರಿ ಒಂದೂವರೆ ಗಂಟೆಗೆ ಬರಲಿರುವ   ಪ್ಯಾನ್ ಆಮ್  ಸಂಸ್ಥೆಯ  ಪಿಕ್-ಅಪ್  ವ್ಯಾನ್‌ಗಾಗಿ ಕಾಯತೊಡಗಿದರು.ತುಂಬಾ ಬಳಲಿದ್ದ ಮಗಳಿಗೆ ತಾಯಿ ರಮಾ ಭಾನೋಟ್ ಹೇಳಿದ್ದು `ಡ್ಯೂಟಿ ಬದಲಿಸಿಕೊಂಡು ವಿಶ್ರಾಂತಿ ತೆಗೆದುಕೋ, ಏಳನೇ ತಾರೀಖು ನಿನ್ನ ಹುಟ್ಟುಹಬ್ಬ ಬೇರೆ~ `ಮಮ್ಮಿ, ನನ್ನ ಬರ್ತ್‌ಡೇಗೆ ಕುಟುಂಬದ ಸದಸ್ಯರಿದ್ದರೆ ಸಾಕು, ಬೇರೆ ಯಾವುದೇ  ಸೆಲೆಬ್ರೇಷನ್ಸ್ ಪಾರ್ಟಿ  ಬೇಕಾಗಿಲ್ಲ. ಈಗ ಮಾತ್ರ  ಡ್ಯೂಟಿ ಕಮ್ಸ  ಸ್ಟ್! ` ಎಂದು ಉತ್ತರಿಸಿದ ನೀರಜಾ ತನ್ನ ತಂದೆ, ತಾಯಿ ಹಾಗೂ ತನ್ನ ಪ್ರೀತಿಯ ನಾಯಿ  ಟಿಪ್ಸಿಗೆ  ಹೋಗಿ ಬರುವೆ  ಎಂದು  ಕೈಯಾಡಿಸಿದರು.ವಿಧಿ ವಿಪರ್ಯಾಸವೋ ಏನೋ, ಸೆಪ್ಟೆಂಬರ್-7 ರಂದು ಭಾನೋಟ್ ದಂಪತಿಗಳು ಹಾಗೂ ನೀರಜಾಳ ಇಬ್ಬರು ಹಿರಿಯ ಸಹೋದರರು ಕರಾಚಿಯ ವಿಮಾನ ನಿಲ್ದಾಣದಲ್ಲಿ, ಭಯೋತ್ಪಾದಕರ ಗುಂಡಿಗೆ ಬಲಿಯಾಗಿ,  ವೀರವನಿತೆಯಂತೆ ಸಾವನ್ನಪ್ಪಿದ ನೀರಜಾಳ  ಶವ ಪೆಟ್ಟಿಗೆ  (ಕಾಫಿನ್)ಗಾಗಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಆಕೆಯ ಇಪ್ಪತ್ತನಾಲ್ಕನೇ ಹುಟ್ಟಿದ ಹಬ್ಬದ ದಿನವೇ ದುಃಖತಪ್ತರಾಗಿ ಕಾಯಬೇಕಾಯಿತು!`ಪಪ್ಪಾ, ಒಂದಲ್ಲ ಒಂದು ದಿನ ನೀವು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಜೀವನ ನಡೆಸುತ್ತೇನೆ!~  ತಾನು ಗತಿಸುವ ಒಂದು ವರ್ಷದ ಮೊದಲು ನೀರಜಾ ತನ್ನ ತಂದೆ ಹರೀಶ್ ಭಾನೋಟ್‌ರಿಗೆ ಆಶ್ವಾಸನೆ ನೀಡಿದ್ದರು. ನೀರಜಾರ ತಂದೆ, ತಾಯಿ ಅದೇ ತಾನೇ ಮಗಳ ವಿಫಲವಾದ ಮದುವೆಯ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದರು.ಇಬ್ಬರು ಗಂಡು ಮಕ್ಕಳ ನಂತರ 7-ಸೆಪ್ಟೆಂಬರ್ 1962 ರಲ್ಲಿ ಚಂಡೀಗಢದಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ಹರೀಶ ಭಾನೋಟ್‌ರವರು ಕರೆಯತ್ತಿದ್ದದ್ದು  ಲಾಡೋ  (ತುಂಬಾ ಪ್ರಿಯವಾದವಳು) ಎಂದೇ!ತಂದೆಗೆ ಮುಂಬೈಗೆ ವರ್ಗವಾದ ಮೇಲೆ  ಸೇಂಟ್ ಜೇವಿಯರ್ಸ್‌ ಕಾಲೇಜ್‌ನಲ್ಲಿ ತಮ್ಮ ಪದವಿ ಮುಗಿಸಿದ ನೀರಜಾಗೆ, ಹದಿನೇಳು ವರ್ಷಗಳಾಗಿದ್ದಾಗಲೇ  ಅತ್ಯಂತ ರೂಪವಂತ ಹುಡುಗಿ ಎಂದು ಮುಂಬೈನ ಪ್ರಸಿದ್ಧ ಪತ್ರಿಕೆಯೊಂದು ಆಯ್ಕೆ ಮಾಡಿತು.ಪದವಿಯ ನಂತರ ಅನೇಕ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಲಾರಂಭಿಸಿದ ನೀರಜಾಗೆ ಇಪ್ಪತ್ತೆರಡನೇ ವಯಸ್ಸಿನಲ್ಲೇ ಹಿರಿಯರು ನಿಶ್ಚಯಿಸಿದ ವರನೊಂದಿಗೆ ಮದುವೆಯಾಯಿತು. ಕೇವಲ ಐದು ತಿಂಗಳುಗಳು ಗಂಡನೊಡನೆ ಶಾರ್ಜಾದಲ್ಲಿ ಇದ್ದ ನೀರಜಾ `ಚಾರ್ಮಿಸ್ ಕ್ರೀಮ್~  ಜಾಹೀರಾತಿನ ಕಾಂಟ್ರ್ಯಾಕ್ಟ್‌ನ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಾಗ ವಾರದೊಳಗೆ ಪತಿಯಿಂದ ಒಂದು ಪತ್ರ ಬಂದು ತಲುಪಿತು.  `ನಾನು ಬರೆದಿರುವ ನಿಯಮಗಳನ್ನು ಒಪ್ಪುವ ಹಾಗಿದ್ದರೆ ಸೊಲ್ಲೆತ್ತದೆ ಹಿಂತಿರುಗಿ ಬಾ, ಇಲ್ಲದಿದ್ದರೆ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದೇನೆ,  ಲೆಟ್ ಅಸ್ ಸೆಪರೇಟ್ ! `ಮಾನಸಿಕ ಸಾಂಗತ್ಯ, ಮಧುರ ಭವಿಷ್ಯದ ಭರವಸೆ ನೀಡದ ಮದುವೆಯ ಬಂಧನಕ್ಕಿಂತ, ಕೇವಲ ಐದು ತಿಂಗಳು ಮಾತ್ರ ತನ್ನ ಪತಿ ಎನಿಸಿಕೊಂಡವನ 

`ವಿ ವಿಲ್ ಸಪರೇಟ್~ ನಿರ್ಧಾರ ನೀರಜಾಗೂ ಪ್ರಿಯವೆನಿಸಿತುಸೆಪ್ಟೆಂಬರ್-85ರಲ್ಲಿ ನೀರಜಾ  `ಪ್ಯಾನ್-ಆಮ್~ ವಿಮಾನದ  `ಫ್ಲೈಟ್ ಅಟೆಂಡೆಂಟ್~  ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರು. ಸುಮಾರು ಹತ್ತು ಸಾವಿರ ಅರ್ಜಿದಾರರಲ್ಲಿ ಕೇವಲ ಎಂಬತ್ತು ಜನ ಮಹಿಳೆಯರು ಮಾತ್ರ ತರಬೇತಿಗಾಗಿ ಆಯ್ಕೆಯಾದರು! ಅಮೇರಿಕಾದ ಮಿಯಾಮಿಯಲ್ಲಿ ತರಬೇತಿಗಾಗಿ ಹೊರಟ ನೀರಜಾ, ಭಾರತಕ್ಕೆ ಹಿಂತಿರುಗಿ ಬಂದದ್ದು  ಚೀ್ ಫ್ಲೈಟ್ ಪರ್ಸರ್  ಆಗಿ!  ಪ್ಯಾನ್-ಆಮ್  ಕಂಪೆನಿಯ ತರಬೇತುದಾರರು ನೀರಜಾಳ ಮುಂದಾಳತ್ವದ ಗುಣಗಳನ್ನು ಗಣನೆಗೆ ತೆಗೆದುಕೊಂಡು, ನೀರಜಾಳ ನೇತೃತ್ವದಲ್ಲಿ, ಹನ್ನೆರಡು ಜನ ಇತರ ಸದಸ್ಯ/ಸದಸ್ಯೆಯರಿದ್ದ  ಟೀಮ್‌ಗೆ  `ಆ್ಯಂಟಿ ಹೈಜಾಕಿಂಗ್~ತರಬೇತಿಯನ್ನು ಕೂಡ ನೀಡಿದ್ದರು.6-ಸೆಪ್ಟೆಂಬರ್ 1986ರಲ್ಲಿ ಮುಂಬೈನಿಂದ ವಾಷಿಂಗ್ಟನ್ ತಲುಪಲಿದ್ದ  ಪ್ಯಾನ್ -ಆಮ್ ಕ್ಲಿಪ್ಪರ್ -73  ವಿಮಾನ ಬೆಳಗಿನ ಜಾವ ಮೂರು ಗಂಟೆಗೆ ಕರಾಚಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ವಿಮಾನ ಹತ್ತುತ್ತಿದ್ದ ಪ್ರಯಾಣಿಕರನ್ನು ನೀರಜಾರವರು ಮುಗುಳ್ನಗುತ್ತಾ ಸ್ವಾಗತಿಸುತ್ತಿದ್ದರು.

 

ಆಗ ಪ್ರಯಾಣಿಕರೊಡನೆಯೇ ಮಿಂಚಿನಂತೆ ವಿಮಾನವನ್ನು ಹತ್ತಿದವರು,  ಪಾಕಿಸ್ತಾನಿ ಸುಭದ್ರತಾ ಪಡೆಯ ವಾಹನದಂತೆಯೇ ಕಾಣುವ ವ್ಯಾನ್‌ನಿಂದ ಇಳಿದ, ವಿಮಾನ ನಿಲ್ದಾಣದ ಸುರಕ್ಷತಾ ತಂಡದವರಂತೆಯೇ ಸಮವಸ್ತ್ರಗಳನ್ನು ಧರಿಸಿದ್ದ ನಾಲ್ವರು ಆಜಾನುಬಾಹು ವ್ಯಕ್ತಿಗಳು! ಬಂದೂಕಧಾರಿಗಳಾಗಿದ್ದ  ಆ ನಾಲ್ವರೂ ನೀರಜಾಳನ್ನು ಒಂದು ಬದಿಗೆ ತಳ್ಳಿ, ವಿಮಾನದ ಒಳಗೆ ಪ್ರವೇಶಿಸಿದ ಕೂಡಲೇ ನೀರಜಾಗೆ ತಿಳಿದು ಹೋಯಿತು ಇವರು ವಿಮಾನ ಅಪಹರಣಕಾರರು(ಹೈಜಾಕರ್ಸ್‌) ಎಂಬುದು!  ಆ ಕೂಡಲೇ ನೀರಜಾರವರು ವಿಮಾನದ ಪೈಲಟ್ ಹಾಗೂ ಇತರ  ಕಾಕ್‌ಪಿಟ್  ಪಡೆಗೆ  `ಹೈಜಾಕ್ ಕೋಡ್~  ಮೂಲಕ ಆತಂಕಕಾರಿಗಳಿಂದ ವಿಮಾನವು ಹಿಡಿಯಲ್ಪಟ್ಟಿದೆ ಎಂದು,  ಇಂಟರ್‌ಕಾಮ್‌ನಲ್ಲಿ ತಿಳಿಸಿಬಿಟ್ಟರು! ಆಕೆಯನ್ನೇ ಅನುಮಾನಾಸ್ಪದವಾಗಿ ನೋಡಿದ ಭಯೋತ್ಪಾದಕರ ಮುಖಂಡ ನೀರಜಾರ  ಪೋನಿಟೈಲ್  ಅನ್ನು ಹಿಡಿದುಕೊಂಡು ಅವರ ತಲೆಗೆ ಬಂದೂಕಿನ ತುದಿಯನ್ನು ಒತ್ತಿದ!ವಿಮಾನವನ್ನು ನಿರ್ಜನ ಪ್ರದೇಶಕ್ಕೆ ನಡೆಸಲು ಒತ್ತಾಯಿಸಬಹುದು ಎಂದು ವಿಮಾನ ಚಾಲಕ ಹಾಗೂ ಆತನ  ಕಾಕ್‌ಪಿಟ್  ಪಡೆ, ಗುಪ್ತವಾಗಿ ಸುರಕ್ಷತಾದ್ವಾರದಿಂದ ತಪ್ಪಿಸಿಕೊಂಡು ಬಿಟ್ಟರು.ವಿಮಾನವೀಗ  `ನಾವಿಕನಿಲ್ಲದ ನೌಕೆ~  ಯಂತೆ ಎಂದು ನೀರಜಾಗೆ ಕ್ಷಣಗಳಲ್ಲೇ ತಿಳಿಯಿತು. ಸುಮಾರು 380 ಜನ ಪ್ರಯಾಣಿಕರು ಹಾಗೂ ಹದಿಮೂರು ಜನ  ಕ್ಯಾಬಿನ್ ಪಡೆಯ ಸದಸ್ಯರು, `ಟ್ರಿಗರ್ ಹ್ಯಾಪಿ~ ಹೈಜಾಕರ್‌ಗಳ ವಶವಾಗಿಬಿಟ್ಟಿರುವುದನ್ನು ಅರಿತ ನೀರಜಾ ಭಾನೋಟ್, ಬಂದೂಕಿನ ತುದಿ ತನ್ನ ಹಣೆಯನ್ನೊತ್ತುತ್ತಿದ್ದರೂ, ವಿಚಲಿತರಾಗದೆ  ಮೈಕ್‌ನಲ್ಲಿ ಪ್ರಕಟಿಸಿದರು.  `ನಾನು ನೀರಜಾ ಭಾನೋಟ್, ಚೀ್ ೈಟ್ ಪರ್ಸರ್, ಯಾರೂ ಗಾಬರಿಗೊಳ್ಳಬೇಡಿ, ಈ ನಾಲ್ಕು ಜನರ ಆದೇಶಗಳನ್ನು ನಾವೆಲ್ಲಾ ಪಾಲಿಸೋಣ!~  ಕೂಡಲೇ ತನ್ನೆರಡೂ ಕೈಗಳನ್ನು ಮೇಲೆತ್ತಿ  `ಶರಣಾಗಿದ್ದೇವೆ~  ಎಂದು ಭಯೋತ್ಪಾದಕರಿಗೆ ನೀರಜಾ ತಿಳಿಸಿದರು.ಕೆಲಕ್ಷಣಗಳ ನಂತರ ನೀರಜಾರವರು ಆತಂಕವಾದಿಗಳು ಅರೇಬಿಕ್ ಭಾಷೆಯಲ್ಲಿ ನೀಡುತ್ತಿದ್ದ ಆದೇಶಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಧ್ವನಿವರ್ಧಕದ ಮೂಲಕ ಮಾತನಾಡತೊಡಗಿದರು. (ಆ  ಉಗ್ರಗಾಮಿಗಳು ಆಗಿನ ಲಿಬಿಯಾ ಅಧ್ಯಕ್ಷ ಗಡಾಫಿಯವರಿಂದ ಬೆಂಬಲ ಪಡೆದ  `ಅಬು ನಿದಾಲ್~  ತಂಡದವರೆಂದು ಹಲವು ಗಂಟೆಗಳ ನಂತರ ತಿಳಿದು ಬಂದಿತು.) ಆತಂಕವಾದಿಗಳು  ಅಮೆರಿಕನ್ ಪ್ರಜೆ  ಗಳನ್ನೇ ಗುರಿಯಾಗಿಸಿಕೊಂಡು  ಪ್ಯಾನ್-ಆಮ್  ವಿಮಾನವನ್ನು ಅಪಹರಿಸಿದ್ದರು ಎಂಬುದನ್ನು ಪ್ರಯಾಣಿಕರು ಅರಿಯಲಿ ಎಂದು ಇಪ್ಪತ್ತಾರು ವರ್ಷದ ಭಾರತೀಯ ಸಂಜಾತ ರಾಜೇಶ್ ಕುಮಾರ್ ತನ್ನನ್ನು ತಾನು  ಅಮೆರಿಕನ್ ಸಿಟಿಜನ್  ಎಂದು ಗುರುತಿಸಿಕೊಂಡ ಕೂಡಲೇ ಆತನನ್ನು ಗುಂಡಿಕ್ಕಿ ಕೊಂದು, ಆತನ ಮೃತದೇಹವನ್ನು ವಿಮಾನ ನಿಲ್ದಾಣದ  ಟಾರ್ಮಾಕ್  ಮೇಲೆ ತೂರಿ ಎಸೆದರು!ಸುಮಾರು ಹದಿನಾರು ಗಂಟೆಗಳ ಕಾಲ ಪ್ರಯಾಣಿಕರನ್ನು ಹಾಗೂ  ಪ್ಯಾನ್-ಆಮ್  ತಂಡದವರನ್ನು ಬೆದರಿಸಿದ  ಹೈಜಾಕರ್‌ಗಳು ಸಾಯಂಕಾಲ ಏಳೂವರೆ ಗಂಟೆ ವೇಳೆಗೆ, ಪೂರ್ಣವಾಗಿ ತಾಳ್ಮೆ ಕಳೆದುಕೊಂಡಿದ್ದರು. ಅವರನ್ನು ಸಮಾಧಾನಗೊಳಿಸಲು ನೀರಜಾರವರು  `ಪೈಲಟ್‌ಗಳ ಹೊಸ ಟೀಮ್ ಇನ್ನೇನು ಬರಲಿದೆ, ನಂತರ  ಸೈಪ್ರಸ್‌ಗೆ ಹೋಗಿ ನಿಮ್ಮ ಸಹಚರರನ್ನು ಬಿಡಿಸೋಣ~  ಎಂದು ಹೇಳಲಾರಂಭಿಸಿದರು. ಆ ವೇಳೆಗಾಗಲೇ ಪರಿಸ್ಥಿತಿಯನ್ನು ನಿಭಾಯಿಸಲು ನೀರಜಾ ತನ್ನ ಕರ್ತವ್ಯದ ಪರಿಧಿಯನ್ನು ದಾಟಿ, ತನ್ನ ವಯಸ್ಸಿಗೆ ಹಾಗೂ ತರಬೇತಿಗೆ ಮೀರಿದ ಜವಾಬ್ದಾರಿಯನ್ನು ಸ್ವಇಚ್ಛೆಯಿಂದ ಹೊತ್ತುಕೊಂಡಿದ್ದಾರೆ ಎಂಬುದು ಪ್ರಯಾಣಿಕರಿಗೆಲ್ಲಾ ಖಚಿತವಾಯಿತು. ನೀರಜಾರವರು ಹೈಜಾಕರ್ಸ್‌ಗಳ ಮುಖಂಡ ಅಮೆರಿಕನ್ ಪ್ರಜೆಗಳನ್ನು ಹುಡುಕುತ್ತಿದ್ದಾನೆ ಎಂದು ತಿಳಿದಾಕ್ಷಣ, ಇತರ ಗಗನಸಖಿಯರಿಗೆ ಹೇಳಿ ನಲ್ವತ್ತನಾಲ್ಕು ಅಮೆರಿಕನ್ ಪ್ರಜೆಗಳ ಪಾಸ್‌ಪೋರ್ಟ್‌ಗಳನ್ನು ಒಂದು ಸೀಟ್ ಕವರ್ ಒಳಗೆ ಅವಿತಿಸಿಟ್ಟರು!ರಾತ್ರಿ ಒಂಬತ್ತು ಗಂಟೆ ವೇಳೆಗೆ ವಿಮಾನದ  ಆ್ಯಕ್ಸಿಲಿಯರಿ ಪವರ್ ಯೂನಿಟ್  ಸಂಪೂರ್ಣವಾಗಿ ವೈಪಲ್ಯವಾದಾಗ, ವಿಮಾನದ ಪೂರಾ ಗಾಢಾಂಧಕಾರ ಕವಿಯಿತು. ಕಮಾಂಡೋಸ್ ತಮ್ಮನ್ನು ಹಿಡಿಯಲು ಸಂಚು ಮಾಡಿರಬೇಕೆಂದು ಭಾವಿಸಿದ ಭಯೋತ್ಪಾದಕರು  ಇದೀಗ ಪ್ರಾರಂಭ  ನಮ್ಮ ಪವಿತ್ರವಾದ ಯುದ್ಧ, ಜೆಹಾದ್!  ಎಂದು ಕೂಗಿಕೊಂಡು, ತಮ್ಮ ಎ.ಕೆ. 47- ರೈಲ್‌ಗಳಿಂದ ದಿಕ್ಕು ದೆಸೆಯಿಲ್ಲದೆ ಗುಂಡುಗಳನ್ನು ಹಾರಿಸತೊಡಗಿದರು.ಅಂತಹ ಪರಿಸ್ಥಿತಿಯಲ್ಲೂ ತಮ್ಮ ಸಮಯಪ್ರಜ್ಞೆ, ಕರ್ತವ್ಯಪರತೆಯಿಂದ ನೀರಜಾರವರು, ವಿಮಾನದ ತುರ್ತು ದ್ವಾರ ತೆರೆದುಕೊಳ್ಳಲು ಅನುವಾಗುವಂತೆ ಒಂದು  ಬ್ಯಾಟರಿ ಚಾಲಿತ ಸ್ವಿಚ್ ಅನ್ನು ಒತ್ತಿ, ಪ್ರಯಾಣಿಕರಿಗೆ  ಕೂಗಿ ಹೇಳಲಾರಂಭಿಸಿದರು- `ವಿಮಾನದ ರೆಕ್ಕೆಯಿಂದ ಧುಮುಕಬೇಡಿ, ಎಮರ್ಜೆನ್ಸಿ ಶ್ಯೂಟ್‌ನ ಮೂಲಕ ಜಾರಿಕೊಳ್ಳಿ!~  ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಹಾಯ ಮಾಡಿ, ಮೂರು ಚಿಕ್ಕ ಮಕ್ಕಳಿಗೆ ಗುಂಡಿನೇಟು ಬೀಳದಂತೆ ವಜ್ರ ಕವಚದಂತೆ ನಿಂತಿದ್ದ ನೀರಜಾಳಿಗೆ, ಹೈಜಾಕರ್‌ಗಳ ಮುಖಂಡ  ಮುಸ್ತಾಫಾ  ಪಾಯಿಂಟ್ ಬ್ಲಾಂಕ್ ರೇಂಜ್‌ನಿಂದ ಕತ್ತಿಗೆ, ತೋಳಿಗೆ ಹಾಗೂ ಹೊಟ್ಟೆಯ ಮೇಲೆಲ್ಲಾ ಗುಂಡುಗಳನ್ನು ಹಾರಿಸಿದ. ವಿಪರೀತ ರಕ್ತಸ್ರಾವವಾಗುತ್ತಿದ್ದರೂ, ಸಂಪೂರ್ಣ ಪ್ರಜ್ಞೆ ಹೊಂದಿದ್ದ ನೀರಜಾರವರನ್ನು ತುರ್ತಾಗಿ ಕರಾಚಿಯ ಜಿನ್ನಾ ಆಸ್ಪತ್ರೆಗೆ ಸಾಗಿಸುವ ಏರ್ಪಾಡು ಮಾಡಲಾಯಿತು. ಆದರೆ `ಜೆಟ್ ಸೆಟ್~  ನೀರಜಾ ಆಸ್ಪತ್ರೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದರು!.ಎಲ್ಲರಿಗಿಂತ ಮೊದಲು ತಾನೇ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ತನ್ನ ಜೀವವನ್ನೇ ಒತ್ತೆಯಿಟ್ಟು ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಪುನರ್‌ಜನ್ಮ ಕೊಟ್ಟ  `ಮಾತೆ~ಯಾದ ಮಗಳ ಬಗ್ಗೆ  ಹಿಂದೂಸ್ತಾನ್ ಟೈಮ್ಸ ನ ವಿಶೇಷ ವರದಿಗಾರರಾಗಿದ್ದ ಹರೀಶ ಭಾನೋಟ್‌ರವರು ವೇದನೆಯಿಂದ ಬರೆದದ್ದು-  ಈ ಮೊದಲು ನೀರಜಾ ನನಗೆ ತ್ರೀ-ಡಿ ಆಗಿದ್ದಳು (ಡ್ಯಾಡೀಸ್, ಡಾರ್ಲಿಂಗ್, ಡಾಟರ್) ಈಗ ಫೋರ್-ಡಿ (ಡ್ಯಾಡೀಸ್, ಡೆಡ್, ಡಾರ್ಲಿಂಗ್, ಡಾಟರ್) .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.