ಸಾಹಸ ಅಂಬರಕ್ಕೆ ಏಣಿ ಹಾಕಿದವರು!

7

ಸಾಹಸ ಅಂಬರಕ್ಕೆ ಏಣಿ ಹಾಕಿದವರು!

Published:
Updated:

ಮೈಸೂರು: `ಬುಲೆಟ್~ ವೇಗದಲ್ಲಿ ಓಡುವ ಮೋಟಾರ್ ಬೈಕ್ ಮೇಲೆ ಏಣಿಯಿಟ್ಟ ಶೂರರು ಸಾಹಸದ ಅಂಬರವನ್ನೇ ಧರೆಗಿಳಿಸಿದರು.ಗುರುವಾರ ರಾತ್ರಿ ಬನ್ನಿಮಂಟಪದ ಅಂಗಳದಲ್ಲಿ ನಡೆದ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಮೋಟಾರ್ ಬೈಕ್ ಸಾಹಸ ಪ್ರದರ್ಶನ ನೀಡಿದ ಬೆಂಗಳೂರಿನ ಮಿಲಿಟರಿ ಪೊಲೀಸ್ ತಂಡದವರು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದರು.62 ವರ್ಷಗಳ ಹರೆಯದ ಈ ತಂಡಕ್ಕೆ ಈ ಬಾರಿ ಸುಬೇದಾರ್ ಎಂ.ಜಿ. ರಾಜನ್ ನೇತೃತ್ವ ವಹಿಸಿದ್ದರು. ಕರ್ನಲ್ ಪಿ.ಎಸ್. ಆನಂದ ಮಾರ್ಗದರ್ಶನದಲ್ಲಿ ನಡೆದ ಪ್ರದರ್ಶನ, ಮೈದಾನದಲ್ಲಿದ್ದ  ಸುಮಾರು 40 ಸಾವಿರ ಪ್ರೇಕ್ಷಕರು ಮತ್ತು ಟಿವಿ ಮುಂದೆ ಕುಳಿತಿದ್ದ ಲಕ್ಷಾಂತರ ಜನರ ಮನಕ್ಕೆ ಲಗ್ಗೆಯಿಟ್ಟಿತು.ಗಿನ್ನೆಸ್ ದಾಖಲೆ ನಿರ್ಮಿಸಿರುವ ಈ ತಂಡವು ತೋರಿದ ಒಂದೊಂದು ಪ್ರದರ್ಶನವೂ ಅದ್ಭುತ ಕಾವ್ಯವಾಗಿದ್ದವು. ಪ್ಯಾರಲಾಲ್ ಕ್ರಾಸಿಂಗ್,  ಸೀಸರ್ ಕ್ರಾಸಿಂಗ್‌ಗಳು ಉಸಿರು ಬಿಗಿ ಹಿಡಿದು ನೋಡುವಂತೆ  ಮಾಡಿದವು. ಎರಡು ದಿನಗಳ ಹಿಂದೆ ಈ ಪ್ರದರ್ಶನಗಳ ಅಭ್ಯಾಸ ಸಂದರ್ಭದಲ್ಲಿಯೇ ಆದ ಅವಘಡದಲ್ಲಿ ಇಬ್ಬರು ಸೈನಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಂತಹ ಅಪಾಯಕಾರಿ ಪ್ರದರ್ಶವನ್ನು 30 ಮಂದಿಯ ತಂಡವು ಲೀಲಾಜಾಲವಾಗಿ ಪ್ರದರ್ಶಿಸಿಬಿಟ್ಟಿತು.ನೇರವಾಗಿ ಓಡುವ ಬೈಕ್ ಮೇಲೆ ಲ್ಯಾನ್ಸ್ ನಾಯಕ ಜಗದೀಶ್ ನಿಂತು ಸವಾರಿ ಮಾಡಿದಾಗ, ಲ್ಯಾನ್ಸ್ ನಾಯಕ್ ಬಾಬಿಜಾನಿ ಒಂದೇ ಕಾಲಲ್ಲಿ ನಿಂತು ಹೋದಾಗ, ರಿವರ್ಸ್ ಸ್ಟ್ಯಾಂಡಿಂಗ್‌ನಲ್ಲಿ ಮನೋಜಕುಮಾರ್ ನಿರ್ಗಮಿಸಿದಾಗ, ಸೂರ್ಯಸ್ನಾನ ಮಾಡುವ ಮಾದರಿಯನ್ನು ಲ್ಯಾನ್ಸ್‌ನಾಯಕ್ ಗೋಪಾಲ್ ಪ್ರದರ್ಶಿಸಿದಾಗ ನೋಡಿದವರು ಮತ್ತೆ ಮತ್ತೆ ಪುಳಕಗೊಂಡರು.ಒಂದೇ ಬೈಕ್ ಮೇಲೆ ಆರು ಮಂದಿ ನಿಂತು ಹೂವಿನ ಚಿತ್ತಾರ ಮೂಡಿಸಿದ್ದು, ಕ್ರಿಸ್‌ಮಸ್ ಟ್ರೀ ಅರಳಿಸಿದ್ದು, ಓಡುವ ಬೈಕ್ ಮೇಲೇ ಏಣಿ ಇಟ್ಟು ಪಟಪಟನೆ ಹತ್ತಿ ಇಳಿದಿದ್ದು, ಟ್ಯೂಬ್‌ಲೈಟುಗಳ ಗೋಡೆಯನ್ನು ಬೇಧಿಸಿ ಹೊರ ಜಿಗಿದಿದ್ದು, ಬೆಂಕಿಯ ಬಳೆಯೊಳಗಿಂದ ತೂರಿ ಬಂದಿದ್ದು ಮಣಭಾರದ ಬುಲೆಟ್ ಬೈಕ್ ಎದೆ ಮೇಲೆ ಹಾದುಹೋಗಿದ್ದನ್ನು ನೋಡಿದವರ ಎದೆಯಲ್ಲಿ ನಗಾರಿಯ ಸದ್ದು. ಸಾಹಸದಲ್ಲಿಯೇ ಹಾಸ್ಯದ ತುಣುಕುಗಳನ್ನು ಉಣಬಡಿಸಿದ ಜೋಕರ್‌ಗಳ ಕೌಶಲ ಅದ್ಭುತ ಸಂಜೆಯನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿತ್ತು. ಕೊನೆಯಲ್ಲಿ ಏಳು ಬೈಕ್‌ಗಳ ಮೇಲೆ 30 ಜನರ ತಂಡವು ಪಿರಮಿಡ್ ರಚಿಸಿ, ತ್ರಿವರ್ಣ ಧ್ವಜ ಬೀಸುತ್ತ ನಡೆದ ವೀರರಿಗೆ ಚಪ್ಪಾಳೆಗಳ ಅಭಿನಂದನೆ ಸಿಕ್ಕಿತ್ತು.  ಟೆಂಟ್ ಪೆಗ್ಗಿಂಗ್ ಝಲಕ್: ಓಡುವ ಬೈಕ್‌ಗಳ ಮೇಲಿನ ಸಾಹಸ ನೋಡಿದ್ದ ಜನರಿಗೆ ಶರವೇಗದ ಅಶ್ವಗಳ ಮೇಲೆ ಬಂದ ವೀರಾಧಿವೀರರು ಸಾಹಸಪ್ರಿಯರ ಹೃದಯಕ್ಕೆ ಕಿಚ್ಚು ಹಚ್ಚಿದರು.ಮೌಂಟೆಡ್ ಪೊಲೀಸ್‌ನ ಕಮಾಂಡೆಂಟ್ ಎಸ್.ಜಿ. ಮರೀಬಾಶೆಟ್ಟಿಯವರ ನೇತೃತ್ವದ ತಂಡವು ಪ್ರದರ್ಶಿಸಿದ ಟೆಂಟ್ ಪೆಗ್ಗಿಂಗ್  ಗಮನ ಸೆಳೆಯಿತು. ನೆಲದಲ್ಲಿ ಹುಗಿದ ಬೆಂಕಿಯುರಿಯಿರುವ ಕಟ್ಟಿಗೆಯ ಗೂಟವನ್ನು ಶರವೇಗದಿಂದ ಓಡಿ ಬರುವ ಕುದುರೆಯ ಮೇಲಿಂದ ಈಟಿಯಲ್ಲಿ ಕಿತ್ತು ಒಯ್ಯುವ ಆಟ ಮೈನವಿರೇಳಿಸಿತು. ಒಬ್ಬೊಬ್ಬರೇ ಬಂದು ಆಟ ಪ್ರದರ್ಶಿಸಿದ ನಂತರ, ಮುಖಾಮುಖಿಯಾಗಿ ಬಂದು ಟೆಂಟ್ ಪೆಗ್ಗಿಂಗ್ ಮಾಡುವುದು, ನಾಲ್ಕು ಜನರ ಎರಡು ತಂಡಗಳು ಪೆಗ್ಗಿಂಗ್ ಆಡಿದ ದೃಶ್ಯ ಮನದೊಳಗೆ ಮನೆ ಮಾಡಿತು.ಲೇಸರ್ ಕಿರಣಗಳ ಚೆಲ್ಲಾಟ: ಬೆಂಗಳೂರಿನ ಲೇಸರ್ ಮ್ಯಾಜಿಕ್ಸ್ ತಂಡವು ಪ್ರದರ್ಶಿಸಿದ ಲೇಸರ್ ಶೋ ಮೈಸೂರಿನ ಭವ್ಯ ಪರಂಪರೆಯ ಪರಿಚಯ ಮಾಡಿಸಿತು.ಯದುವಂಶದ ಆಳ್ವಿಕೆ, ಅರಸರು ಕೊಟ್ಟ ಕೊಡುಗೆ, ಮೈಸೂರಿನ ಕೀರ್ತಿ, ಅರಮನೆಯ ಅಂದ, ಜನಮನದ ಚೆಂದಗಳೆಲ್ಲವೂ ಬೆಳಕಿನಲ್ಲಿ ಅರಳಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು.ಪಥ ಸಂಚಲನ: ಅಶ್ವಪಡೆ, ಕೆಎಸ್‌ಆರ್‌ಪಿಯ ಮೂರು ತುಕಡಿಗಳು, ರೈಲ್ವೆ ಭದ್ರತಾ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಮತ್ತು ಗೈಡ್ಸ್ ಪಥ ಸಂಚಲನ ನಡೆಸಿದವು.ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗೌರವ ವಂದನೆ ಸ್ವೀಕರಿಸಿದರು. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್, ಪೊಲೀಸ್ ಆಯುಕ್ತ ಸುನಿಲ ಅಗರವಾಲ್ ಮತ್ತಿತರರು ಹಾಜರಿದ್ದರು.21 ಕುಶಾಲತೋಪುಗಳನ್ನು ಹಾರಿಸಲಾಯಿತು. ಏಳು ಫಿರಂಗಿಗಳು ಘರ್ಜಿಸಿದವು. ಖಡ್ಗಧಾರಿ ಅಶ್ವಾರೋಹಿ ಕಮಾಂಡೆಂಟ್ ಎಸ್.ಜಿ. ಮರೀಬಾಶೆಟ್ಟಿ ನೇತೃತ್ವದ ಪಡೆಯು ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry