`ಸಾಹಿತಿಗಳಿಂದ ವರ್ಗಮುಕ್ತ ಸಮಾಜ ನಿರ್ಮಾಣ ಸಾಧ್ಯ'

7

`ಸಾಹಿತಿಗಳಿಂದ ವರ್ಗಮುಕ್ತ ಸಮಾಜ ನಿರ್ಮಾಣ ಸಾಧ್ಯ'

Published:
Updated:

ಮೈಸೂರು: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ವರ್ಗ, ಜಾತಿರಹಿತ ಸಮಾಜದ ನಿರ್ಮಾಣಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಅಗಿನ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿದರು. 21ನೇ ಶತಮಾನದಲ್ಲಿ ಜಾತಿ ಮತ್ತು ವರ್ಗರಹಿತ ಸಮಾಜ ನಿರ್ಮಾಣದ ಜವಾಬ್ದಾರಿ ಸಾಹಿತಿಗಳು ಮತ್ತು ವಿದ್ವಾಂಸರದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನೂತನ ಸಭಾಭವನ, ಇತರ ಕಟ್ಟಡಗಳ ಉದ್ಘಾಟನೆ ಮತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ ಸಚಿವರು `ದಲಿತ ಸಂತರು' ಕೃತಿಯ ಹೆಸರಿನ ಕುರಿತು ಮಾತನಾಡಿದರು.

`ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪೀಠಾಧಿಪತಿಯಾಗಿದ್ದ ಅಲ್ಲಮಪ್ರಭುಗಳು ಹಿಂದುಳಿದ ಜನಾಂಗದವರು.ವರ್ಗರಹಿತ ಸಮಾಜ, ಜಾತಿ, ಧರ್ಮ ತಾರತಮ್ಯರಹಿತ ಸಮಾಜಕ್ಕೆ ಶರಣರ ಕೊಡುಗೆ ದೊಡ್ಡದು. ನಂತರದ ಕಾಲದಲ್ಲಿ ಶರಣರ ಪ್ರಭಾವಕ್ಕೊಳಗಾದ ಇಸ್ಲಾಂ ಸೂಫಿ ಸಂತರಿಂದ ವಿಜಾಪುರದ ಆದಿಲ್‌ಶಾಹಿಗಳು ಪ್ರಭಾವಿತರಾಗಿದ್ದರು. ಆದಿಲ್‌ಶಾಹಿ ಆಡಳಿತದ ಕಾಲದಲ್ಲಿ ನಾಣ್ಯಗಳ ಮೇಲೆ ಹಿಂದೂ ದೇವತೆಗಳ ಚಿತ್ರವಿರುವುದೇ ಈ ಮಾತಿಗೆ ಸಾಕ್ಷಿ. ಅಂತಹ ಬಹುದೊಡ್ಡ ಸಂಸ್ಕೃತಿ ಮತ್ತು ಪ್ರಭಾವ ನಮ್ಮ ಮೇಲಿದೆ. ಆದ್ದರಿಂದ 21ನೇ ಶತಮಾನದಲ್ಲಿ ದಲಿತ ಶರಣರು, ದಲಿತ ಸಂತರು ಎಂಬ ವರ್ಗೀಕರಣ ಬೇಕಾ ಗುವುದಿಲ್ಲ. ಆದ್ದರಿಂದ ವಿದ್ವಾಂಸರು ಈ ಬಗ್ಗೆ ಚಿಂತನೆ ನಡೆಸಿ ಜಾತಿರಹಿತ ಸಮಾಜ ಕಟ್ಟಬೇಕು' ಎಂದು ವಿನಂತಿಸಿದರು.`ಇವತ್ತು ನಾವು ಮಹಿಳಾ ಮೀಸಲಾತಿಗಾಗಿ ವಾದ ವಿವಾದಗಳನ್ನು ನೋಡುತ್ತಿದ್ದೇವೆ. ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಕೊಟ್ಟ ಆದ್ಯತೆಯನ್ನು ನೋಡಿದರೆ ಬೆರಗಾಗುತ್ತದೆ. 84 ಮಹಿಳೆಯರು ಪೀಠ ಅಲಂಕರಿಸಿದ್ದರು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ಸೌಹಾರ್ದ ಸಮಾಜ ಮತ್ತು ವರ್ಗಸಮಾನತೆಯ ದೂರದೃಷ್ಟಿಕೇಂದ್ರಿತ ಸಾಹಿತ್ಯ ರಚನೆ ಹೆಚ್ಚು ಮೂಡಿಬರ ಬೇಕು. ಇದು ನಿಮ್ಮಂತಹ ವಿದ್ವಾಂಸರು ಮತ್ತು ಸಾಹಿತಿಗಳ ಕೈಯಲ್ಲಿದೆ' ಎಂದು ಹೇಳಿದರು.`ಪ್ರತಿಯೊಂದು ವಿಶ್ವವಿದ್ಯಾಲಯಕ್ಕೂ ಕನ್ನಡ ಅಭಿವೃದ್ಧಿ ಕಾರ್ಯಗಳಿಗೆ ತಲಾ ಒಂದು ಕೋಟಿ ರೂಪಾಯಿಯನ್ನು ಸರ್ಕಾರ ನೀಡಿದೆ. ಕೆಲವು ವಿವಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದು, ಇನ್ನೂ ಕೆಲವು ನಿರ್ವಹಿಸಬೇಕಾಗಿದೆ. ಒಂದು ಕೋಟಿಯನ್ನು ವಿನಿಯೋಗಿಸಿರುವ ಕುರಿತು ಲೆಕ್ಕಪತ್ರಗಳನ್ನು ಒದಗಿಸಿದರೆ ಇನ್ನೊಂದು ಕೋಟಿ ರೂಪಾಯಿ ಪಡೆಯುವ ಅವಕಾಶ ಇದೆ' ಎಂದು ಹೇಳಿದರು.ಮೈಸೂರು ವಿವಿ ಕುಲಪತಿ ಪ್ರೊ. ವಿ.ಜಿ. ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಕೃತಿಗಳ ಪರಿಚಯ ಮಾಡಿದರು. ಕುಲಸಚಿವ ಪ್ರೊ. ಪಿ.ಎಸ್. ನಾಯಕ್, ಪ್ರಸಾ ರಾಂಗದ ನಿರ್ದೇಶಕ ಸಿ. ನಾಗಣ್ಣ ಮತ್ತಿತರರು ಹಾಜರಿದ್ದರು.`ಕನ್ನಡ ಶಾಲೆ ಮುಚ್ಚುವುದಿಲ್ಲ'

ಮೈಸೂರು: `ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ನಂತರ ತಮ್ಮನ್ನು ಭೇಟಿಯಾದ ಕನ್ನಡ ಕ್ರಿಯಾ ಸಮಿತಿ ಸದಸ್ಯರನ್ನು ಕುರಿತು ಮಾತನಾಡಿದ ಅವರು `ಕೆಲ ಶಾಲೆಗಳಲ್ಲಿ ಶಿಕ್ಷಕರಿಗಿಂತಲೂ ಕಡಿಮೆ ಮಕ್ಕಳು ಇರುವ ಪರಿಸ್ಥಿತಿ ಉದ್ಭವಿಸಿದೆ. ಐಟಿ, ಬಿಟಿಗಳಲ್ಲಿ ಕೆಲಸ ಸಿಗಬೇಕಾದರೆ ಇಂಗ್ಲಿಷ್ ಅನಿವಾರ್ಯ ಎಂದು ಹೆಚ್ಚು ಜನರು ಭಾವಿಸಿದ್ದಾರೆ. ಇದನ್ನು ಹೋಗಲಾಡಿಸಲು ಸರ್ಕಾರ ಕಾರ್ಯಕ್ರಮ ರೂಪಿಸಲಿದೆ' ಎಂದು ತಿಳಿಸಿದರು.ಹೊರನಾಡ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದರೂ ಕರ್ನಾಟಕದಲ್ಲಿ ಪ್ರವೇಶ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸಿದ್ದಕ್ಕೆ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry