ಮಂಗಳವಾರ, ಮಾರ್ಚ್ 9, 2021
18 °C
ಮನೆಯಂಗಳದಲ್ಲಿ ಮಾತುಕತೆ

ಸಾಹಿತಿಗಳಿಗೆ ಭ್ರಮೆ ಬೇಡ: ಹಂದ್ರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತಿಗಳಿಗೆ ಭ್ರಮೆ ಬೇಡ: ಹಂದ್ರಾಳ

ಬೆಂಗಳೂರು: ‘ಸಾಹಿತಿಗಳು ಭ್ರಮೆ ಬಿಟ್ಟು ವಾಸ್ತವದಲ್ಲಿ ಬದುಕಬೇಕು. ಜೀವನದ ಮೂಲ ಬೇರುಗಳನ್ನು ಮರೆತು ಭ್ರಮೆಯಲ್ಲಿ ಬದುಕುವುದು ಸರಿಯಲ್ಲ’ ಎಂದು ಕಥೆಗಾರ ಕೇಶವರೆಡ್ಡಿ ಹಂದ್ರಾಳ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.‘ಬಾಲ್ಯದ ಬದುಕೇ ನನಗೆ ವಿಸ್ಮಯವಾಗಿತ್ತು. ಬಾಲ್ಯ, ಹಳ್ಳಿಯ ಮುಗ್ಧ ಜನ ನನ್ನ ಸಾಹಿತ್ಯದ ಮೂಲ ದ್ರವ್ಯ. ಈ ಕಾರಣದಿಂದಲೇ ನಾನಿಂದು ಗಟ್ಟಿ ಕಥೆಗಾರನಾಗಿ ಬೆಳೆಯಲು ಸಾಧ್ಯವಾಗಿದೆ. ನನ್ನ ಆರಂಭದ ಕಥೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ‘ಪ್ರಜಾವಾಣಿ’ಗೆ ನಾನು ಆಭಾರಿ’ ಎಂದು ಹೇಳಿದರು.‘ವಿಮರ್ಶಕರ ಮೇಲೆ ನನಗೆ ಕೋಪವೂ ಇಲ್ಲ, ಪ್ರೀತಿಯೂ ಇಲ್ಲ. ವಿಮರ್ಶಕರು ಓದುವುದಿಲ್ಲ. ಹಲವು ದಶಕಗಳಿಂದ ಕೆಲವರ ಬಗ್ಗೆಯೇ ವಿಮರ್ಶೆ ಬರೆಯುತ್ತಿದ್ದಾರೆ. ಹೊಸದಾಗಿ ಬರೆಯುತ್ತಿರುವ ಯುವ ಸಾಹಿತಿಗಳ ಕೃತಿಗಳನ್ನು ವಿಮರ್ಶಕರು ಓದುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕನ್ನಡಿಗರು ಆರ್ಥಿಕವಾಗಿ ಸಬಲ­ರಾ­ದರೆ ಕನ್ನಡ ಉಳಿಯಬಹುದು. ಇಂದಿನ ಪೈಪೋಟಿಯ ಯುಗದಲ್ಲಿ ಹಳ್ಳಿಯ ಮಕ್ಕಳಿಗೆ ಇಂಗ್ಲಿಷ್‌ ಬೇಕು. ಕನ್ನಡದ ಗ್ರಾಮೀಣ ಹಾಗೂ ಬಡ ಮಕ್ಕಳು ಇಂಗ್ಲಿಷ್‌ ಮೂಲಕ ಬೆಳೆಯಬೇಕು’ ಎಂದರು.‘ನನ್ನ ಶಾಲಾ ದಿನಗಳಲ್ಲಿ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ಕಠಿಣವಾದ ವಿಷಯಗಳಾಗಿದ್ದವು. ಆಗ ನಮಗೆ ಸರಿಯಾಗಿ ಇಂಗ್ಲಿಷ್‌ ಕಲಿಸಿದ್ದರೆ ನನ್ನ ಊರಿನ ಅನೇಕರು ಇಂದು ಉತ್ತಮ ಸ್ಥಾನದಲ್ಲಿರುತ್ತಿದ್ದರು. ಇಂಗ್ಲಿಷ್‌ ಬಾರದ ಕಾರಣಕ್ಕೆ ನನಗಿಂತ ಬುದ್ಧಿ­ವಂತ­ರಾದ ಅನೇಕರು ಅವಕಾಶಗಳಿಂದ ವಂಚಿತರಾಗಿ ಇಂದು ಹಳ್ಳಿಯಲ್ಲಿಯೇ ಉಳಿಯುವಂತಾಗಿದೆ’ ಎಂದರು.‘ನನ್ನಲ್ಲಿ ಕೀಳರಿಮೆ ಹೋಗಲು ಡಾ.ರಾಜ್‌ಕುಮಾರ್‌ ಕಾರಣ. ಅವರ ಚಿತ್ರಗಳ ಹಾಡುಗಳು ಹಳ್ಳಿಯಿಂದ ನಗರಕ್ಕೆ ಬಂದ ನನ್ನಂಥ ಅನೇಕರ ಕೀಳರಿಮೆ ತಗ್ಗಿಸಿವೆ. ಸಾಂಸ್ಕೃತಿಕ ನೀತಿ ರೂಪಿಸುವ ವ್ಯಕ್ತಿಗಳಲ್ಲಿ ವಿವೇಚನೆ ಇರಬೇಕು. ಮುಂದೆ ಎರಡು ಕಾದಂಬರಿಗಳನ್ನು ಬರೆಯುವ ತುಡಿತವಿದೆ’ ಎಂದು ತಿಳಿಸಿದರು.ಭ್ರಮಾಲೋಕದಲ್ಲಿ ಸಾಹಿತಿಗಳು

ಬದುಕಿನ ಬೇರುಗಳು ಭದ್ರವಾ­ಗಿ­ದ್ದರೆ ಹೂ, ಕಾಯಿ, ಹಣ್ಣುಗಳೂ ಚೆನ್ನಾ­ಗಿರುತ್ತವೆ. ಆದರೆ, ನಮ್ಮ­ಲ್ಲಿನ ಅನೇಕ ಸಾಹಿತಿಗಳು ಬಣ್ಣದ ಬದುಕೇ ಸತ್ಯ ಎಂಬ ಭ್ರಮೆಯಲ್ಲಿ­ದ್ದಾರೆ. ಬಣ್ಣದ ಬೆಡಗು ಹೆಚ್ಚು ದಿನ ಉಳಿಯುವುದಿಲ್ಲ. ನಾನು ಸಾಹಿ­ತ್ಯ­ದಲ್ಲಿ ಭ್ರಮೆ ಇಟ್ಟು­ಕೊಂಡಿಲ್ಲ.

–ಕೇಶವರೆಡ್ಡಿ ಹಂದ್ರಾಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.