ಸಾಹಿತಿಗಳು ಚಳವಳಿಯಲ್ಲಿ ಪಾಲ್ಗೊಳ್ಳಲಿ: ವಾಟಾಳ್

7

ಸಾಹಿತಿಗಳು ಚಳವಳಿಯಲ್ಲಿ ಪಾಲ್ಗೊಳ್ಳಲಿ: ವಾಟಾಳ್

Published:
Updated:

ಬೆಂಗಳೂರು: ಪತ್ತೆದಾರಿ ಕಾದಂಬರಿಕಾರ ಎನ್.ನರಸಿಂಹಯ್ಯ ಸಂಸ್ಮರಣೆಯ ಪ್ರಯುಕ್ತ ನಗರದ `ಸಮ್ಮಿಲನ' ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸ್ಥಾಪಕ ವಾಟಾಳ್ ನಾಗರಾಜ್ ಅವರಿಗೆ `ಪತ್ತೆದಾರಿ ಕಾದಂಬರಿ ಸಾರ್ವಭೌಮ ಎನ್.ನರಸಿಂಹಯ್ಯ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿದ ವಾಟಾಳ್ ನಾಗರಾಜ್ ಮಾತನಾಡಿ, `ಸಾಹಿತಿಗಳು ನಾಲ್ಕು ಕೃತಿಗಳನ್ನು ರಚಿಸಿ ಮನೆಯೊಳಗೆ ಕುಳಿತು ಕನ್ನಡ ಚಳವಳಿಗಾರರ ಬಗ್ಗೆ ಟೀಕೆ ಮಾಡುತ್ತಾರೆ. ಇಂತಹ ಪ್ರವೃತ್ತಿ ಸರಿಯಲ್ಲ. ಸಾಹಿತಿಗಳು ಚಳವಳಿಯಲ್ಲಿ ನೇರ ಭಾಗವಹಿಸಿ ಬಳಿಕ ಟೀಕೆ ಮಾಡಲಿ' ಎಂದರು.ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ, `ನರಸಿಂಹಯ್ಯ ಅವರು ಕನ್ನಡ ಕೃತಿಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸಿದವರು. ನಾಡಿನಲ್ಲಿ ಕನ್ನಡ ಪ್ರೀತಿಯ ಬಗ್ಗೆ ವಿಶೇಷ ವಾತಾವರಣ ನಿರ್ಮಿಸಿದ ಮಹನೀಯರು' ಎಂದು ಅವರು ಶ್ಲಾಘಿಸಿದರು.`ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿರುವುದು ಕೆಲವೇ ಮಂದಿ. ಕೆಲವೇ ಮಂದಿಯನ್ನು ವೈಭವೀಕರಣ ಮಾಡುವ, ಅವರನ್ನು ಹೆಸರನ್ನು ರಸ್ತೆಗೆ ಇಡುವ ಹಾಗೂ ಸ್ಮಾರಕ ಭವನಗಳನ್ನು ನಿರ್ಮಿಸುವ ಪ್ರವೃತ್ತಿ ಹೆಚ್ಚುತ್ತಿದೆ.ಸಾಹಿತ್ಯದ ಕ್ಷೇತ್ರದ ನೆಲವನ್ನು ಹದಗೊಳಿಸಿದ ಸಾಹಿತಿಗಳನ್ನು ಮರೆಯುವುದು ಸಲ್ಲ' ಎಂದು ಅವರು ಅಭಿಪ್ರಾಯಪಟ್ಟರು.ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, `ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ವಾಟಾಳ್ ಪಾತ್ರ ಮಹತ್ವದ್ದು. ಆದರೆ, ಕನ್ನಡ ಚಿತ್ರರಂಗ ವಾಟಾಳ್ ಅವರನ್ನು ಮರೆತಿದೆ' ಎಂದು ಬೇಸರ ವ್ಯಕ್ತಪಡಿಸಿದರು.`ಸಮ್ಮಿಲನ' ಸಂಸ್ಥಾಪಕ ಕುವರ ಯಲ್ಲಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry