ಭಾನುವಾರ, ಏಪ್ರಿಲ್ 18, 2021
31 °C

ಸಾಹಿತಿಗಳೋ ರಾಜಕಾರಣಿಗಳೋ?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರೇ ಆಯ್ಕೆಯಾಗಬೇಕು ಎಂಬುದು ಸರಳ ಸತ್ಯ. ಭಾಷಾವಾರು ಪ್ರಾಂತಗಳ ರಚನೆಯ ಉದ್ದೇಶವೇ ಅದು. ಆದರೆ ದಶಕಗಳು ಕಳೆದಂತೆ ರಾಜಕೀಯ ಪಕ್ಷಗಳು, ಆ ಉದ್ದೇಶವನ್ನು ಗಾಳಿಗೆ ತೂರಿ ಹಣಕ್ಕೆ, ಕನಸಿನ ಕನ್ಯೆಯರ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಅಕ್ಷಮ್ಯ. ಅದು ವಾಮಮಾರ್ಗ ಹಿಡಿದ ನೀತಿಗೆಟ್ಟ ರಾಜಕಾರಣ.ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾರ್ನಾಡ್, ಜಿ. ಕೆ. ಗೋವಿಂದರಾವ್ ಮುಂತಾದವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ‘ಇನ್ನು ಮುಂದಾದರೂ ಕಾಂಗ್ರೆಸ್, ಜೆ. ಡಿ. (ಎಸ್), ಸಾಹಿತಿಗಳು - ಕಲಾವಿದರನ್ನು ಸಾಂಕೇತಿಕ ಸ್ಪರ್ಧೆಗೆ ಇಳಿಸಬಾರದು. ಗೆಲ್ಲುವ ಸಂದರ್ಭದಲ್ಲೂ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಮತ್ತು ಪ್ರಗತಿಪರ ಚಿಂತಕರನ್ನು ಬೆಂಬಲಿಸಬೇಕು. ಆ ಮೂಲಕ ಆ ಪಕ್ಷಗಳು (ಬಿ.ಜೆ.ಪಿ.ಯನ್ನು ಹಾಗೂ ಇತರ ಪಕ್ಷಗಳನ್ನು ಏಕೆ ಕೈ ಬಿಟ್ಟಿದ್ದಾರೆ?) ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದಿರುವುದಂತೂ ಸಾಹಿತಿ ಮುಖವಾಡ ಹೊತ್ತ ಪಕ್ಷ ರಾಜಕಾರಣದ ಹೇಳಿಕೆಯೇ ಆಗಿದೆ.ಸಾಹಿತ್ಯ ಮುಖವಾಡ ಹೊತ್ತ ಇವರು ತಮ್ಮ ಅಂತರಂಗದ ಹಸಿವನ್ನು ಇಂಗಿಸಿಕೊಳ್ಳಲು ಬಂಡಾಯವನ್ನು ಬದಿಗೊತ್ತಿ ಸ್ವಾಭಿಮಾನ ಮುಂತಾದ ಹೆಸರನ್ನು ಮುಂದುಮಾಡಿಕೊಂಡು ಸರ್ಕಾರದ ಹುಲ್ಲುಗಾವಲಿಗೆ ನುಗ್ಗುತ್ತಿರುವುದು ವಿಪರ್ಯಾಸವೇ ಸರಿ.ಇವರು ಹೀಗಾದರೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಬಂದಾಗ ಸಿದ್ಧಗಂಗಾ ಮಠವಾಗಲೀ, ಜೆ.ಎಸ್.ಎಸ್. ಮಠವಾಗಲೀ, ಆದಿಚುಂಚನಗಿರಿ ಮಠವಾಗಲೀ, ಪೇಜಾವರ ಮಠವಾಗಲೀ, ರಾಮಚಂದ್ರಾಪುರದ ಮಠವಾಗಲೀ, ಆರ್ಟ್ ಆಫ್ ಲಿವಿಂಗ್ ಆಗಲೀ ಏಕೆ ದಿವ್ಯ ಮೌನ ವಹಿಸಿವೆ? ಡಾ. ಜಿ.ಎಸ್.ಎಸ್., ಕಣವಿ ಡಾ. ಎಂ. ಚಿದಾನಂದಮೂರ್ತಿ ಮುಂತಾದವರ ಗಂಟಲು ಏಕೆ ಕಟ್ಟಿದೆ?ಇಂಥ ಸಾಹಿತಿಗಳನ್ನು, ಸಂಸ್ಥೆಗಳನ್ನು ಮಠಗಳನ್ನು ಕಂಡೇ ಕುವೆಂಪು ‘ಎಂಜಲಿಗಂಜಲಿಯೊಡ್ಡಿದ ಕವಿಯಿಂ ಬಯಸುವಿರೇನನ್ನು?’ ಎಂದು ಪ್ರಶ್ನಿಸಿರುವುದು ಎಂದು ಕಾಣುತ್ತದೆಒಟ್ಟಿನಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವ ಕರ್ನಾಟಕದ ರಾಜಕೀಯದ ಕೆಸರು ರಾಡಿಯಿಂದ ರಾಜ್ಯದ ರಾಜಕಾರಣವನ್ನು ಪಾರು ಮಾಡಬೇಕಾಗಿದೆ. ಆದರೆ ಛಿದ್ರಗೊಂಡು ಪ್ರಶಸ್ತಿಗಳಿಗಾಗಿ ವಿವಿಧ ಸ್ಥಾನಗಳಿಗಾಗಿ ರಾಜಕೀಯ ಪಕ್ಷಗಳಿಗೆ ಹರಿದು ಹಂಚಿ ಹೋಗಿರುವ ಅವಕಾಶವಾದಿ ಸಾಹಿತಿಗಳ ಮನಸ್ಸುಗಳು ಒಗ್ಗೂಡುತ್ತವೆ ಎಂದು ನಿರೀಕ್ಷಿಸುವುದಾದರೂ ಹೇಗೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.