ಗುರುವಾರ , ಮೇ 6, 2021
31 °C

ಸಾಹಿತಿ ಗಡಿಮೀರಿದರೆ ಲಾಭ: ಪ್ರೊ.ಮಲ್ಲೇಪುರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂಸ್ಕೃತಿ, ಸಾಹಿತ್ಯದಲ್ಲಿ ಗಡಿ ಮೀರಿದರೆ ಒಂದು ರೀತಿಯ ಅನ್ಯೋನ್ಯತೆಯ ಲಾಭವಾಗುತ್ತದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು.ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.`ಗಡಿ ಮೀರುವುದರಿಂದ ಮನಸ್ಸು, ಕ್ರಿಯೆ ಹಾಗೂ ಬೌದ್ಧಿಕ ಸಾಹಸ ವಿಶಾಲವಾಗಿರುತ್ತವೆ. ಕುವೆಂಪು ಅವರು ಕೇವಲ ಮಲೆನಾಡಿನವರಲ್ಲ, ಬೇಂದ್ರೆ ಕೇವಲ ಧಾರವಾಡದವರಲ್ಲ. ಯಾವುದೇ ಗಡಿಗೆ ಅವರು ಸೀಮಿತರಲ್ಲ. ಗಡಿ ಮೀರಿ ಬೆಳೆದವರು. ಗಡಿ ಮೀರುವ ಬೌದ್ಧಿಕತೆಯ ಸುಖವನ್ನು ನಾನು ಕೂಡ ಅನುಭವಿಸಿದ್ದೇನೆ' ಎಂದರು.`ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ ಭಾಗ ನನ್ನ ಬದುಕಿನಲ್ಲಿ ಮಹತ್ವದ ತಿರುವು ನೀಡಿವೆ. ಈ ಭಾಗದ ಜನರ ದೇಸಿಯತೆ, ಚೈತನ್ಯಶೀಲತೆಗಳೊಂದಿಗೆ ಬೆರೆಯಲು ಸಾಧ್ಯವಾಗಿದೆ. ದಕ್ಷಿಣ ಕರ್ನಾಟಕ ಭಾಗವು ಜಾಗತೀಕರಣ ಜಾಢ್ಯದಲ್ಲಿ ಕೊಚ್ಚಿಹೋಗಿದ್ದು, ತನ್ನತನ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.ಬಸವಣ್ಣನವರ ಮಹಾಮನೆ ಪರಿಕಲ್ಪನೆ 21ನೇ ಶತಮಾನದಲ್ಲಿ ಕಿರುಮನೆಯಾಗಿದೆ. ಮಹಾಮನೆ ಎನ್ನುವುದು ಎಲ್ಲ ಜಾತೀಯ ಜನರು ಒಂದೆಡೆ ಸೇರಿ, ಅನ್ಯೋನ್ಯವಾಗಿ ಚರ್ಚಿಸಿ ಸಂಕಲ್ಪಿಸುವುದಾಗಿತ್ತು.ಈ ಪ್ರತಿಷ್ಠಾನವು ವ್ಯಕ್ತಿ ಹೆಸರಿನಲ್ಲಿ ಹುಟ್ಟಿಕೊಂಡರೂ, ಎಲ್ಲರನ್ನು ಬೆಸೆಯುವ ಸಾಹಿತ್ಯಕ, ಸಾಂಸ್ಕೃತಿಕ ಶಕ್ತಿಯಾಗಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.ಗುಲ್ಬರ್ಗ ವಿವಿ ಕುಲಸಚಿವ ಪ್ರೊ. ದಯಾನಂದ ಅಗಸರ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿ `ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸಲು ಅನ್ಯೋನ್ಯತೆಯ ಧ್ಯೋತಕವಾಗಿ ಪ್ರತಿಷ್ಠಾನ ಆರಂಭಿಸಿರುವುದು ಶ್ಲಾಘನೀಯ' ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ. ಎಚ್.ಟಿ. ಪೋತೆ ಮಾತನಾಡಿ, `ಈ ಪ್ರತಿಷ್ಠಾನವು ಜಾತಿ ಮೀರಿದ ಗುಣ ಕಾರಣದಿಂದ ಅಸ್ತಿತ್ವಕ್ಕೆ ಬಂದಿದೆ. ಸಾಂಸ್ಕೃತಿಕ ರಾಜಕಾರಣದಿಂದ ಮರೆಯಾದ ಸಾಹಿತಿ, ಕವಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು ಹಾಗೂ ಸಾಧ್ಯವಾದಷ್ಟು ಸಾಹಿತ್ಯಪರ ಚಟುವಟಿಕೆಗಳನ್ನು ಮುಂದುವರಿಸುವ ಉದ್ದೇಶ ಹೊಂದಿದೆ' ಎಂದರು.ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಎ.ವಿ. ನಾವಡ ಅವರಿಗೆ ಪ್ರೊ. ಮಲ್ಲೇಪುರಂ ಜೀವಮಾನ ಸಾಧನೆ ಪ್ರಶಸ್ತಿ, ಗುಲ್ಬರ್ಗ ವಿವಿ ಪ್ರಾಧ್ಯಾಪಕ ಎಸ್.ಎಂ. ಹಿರೇಮಠ ಅವರಿಗೆ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಹ ಪ್ರಾಧ್ಯಾಪಕ ಡಾ. ಶ್ರೀಶೈಲ ನಾಗರಾಳ ಸ್ವಾಗತಿಸಿದರು. ಪ್ರಶಸ್ತಿಗೆ ಭಾಜನರಾದ ಪ್ರೊ. ಎ.ವಿ. ನಾವಡ, ಪ್ರೊ.ಎಸ್.ಎಂ. ಹಿರೇಮಠ ಮಾತನಾಡಿದರು.ಪ್ರತಿಷ್ಠಾನದ ಅಧ್ಯಕ್ಷೆ ಲಲಿತಾ ಎಚ್. ಪೋತೆ, ಸಂಘಾನಂದ ಭಂತೆ, ಇತರರು ಇದ್ದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಎಂ.ಬಿ. ಕಟ್ಟಿ, ಸುಜಾತಾ ಕೊಟನೂರಕರ್, ರೇಣುಕಾ ಎಸ್.ಎಚ್. ಹೊಸಮನಿ, ರಾಹುಲ್ ಎಸ್. ನಾಗರಾಳ, ಜಗನ್ನಾಥ ಸಿಂಧೆ, ಶ್ರೀಗೂರು ರಾಮುಲು, ಸಂಗಪ್ಪ ಹೊಸಮನಿ, ಕೆ. ಗುರುಲಿಂಗಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.