ಸಾಹಿತಿ ದಿಗ್ಗಜರ ಜಗಳ ತರವಲ್ಲ: ಕುಸನೂರ

ಸೋಮವಾರ, ಜೂಲೈ 22, 2019
27 °C

ಸಾಹಿತಿ ದಿಗ್ಗಜರ ಜಗಳ ತರವಲ್ಲ: ಕುಸನೂರ

Published:
Updated:

ಗುಲ್ಬರ್ಗ: ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಡಾ. ಯು.ಆರ್. ಅನಂತಮೂರ್ತಿ ಮತ್ತು ಡಾ. ಎಸ್. ಎಲ್. ಭೈರಪ್ಪ ಅವರ ಜಗಳ ತರವಲ್ಲ ಎಂದು ಗುಲ್ಬರ್ಗ-ಯಾದಗಿರಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಕಾಂತ ಕುಸನೂರ ಅಭಿಪ್ರಾಯಪಟ್ಟರು.ಇಲ್ಲಿನ ಕನ್ನಡ ಭವನದ ಬಾಪೂಗೌಡ ರಂಗಮಂದಿರಲ್ಲಿ ಸೋಮವಾರ ಜರುಗಿದ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಸಂಸ್ಕೃತಿ ಹಾಗೂ ಇಲ್ಲಿನ ಮನಸ್ಥಿತಿ ಎಲ್ಲೆಡೆ ಪಸರಿಸುವ ಕೆಲಸ ಇಲ್ಲಿನ ಕವಿ, ಸಾಹಿತಿಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.ಮೂಲ ಕನ್ನಡ ಮತ್ತು ನಿಜವಾದ ಗಟ್ಟಿ ಸಾಹಿತ್ಯ ಹೊಂದಿರುವ ಈ ಭಾಗದ ನೆಲದ ಮೇಲೆ ನಾಡಿನ ಸಾಹಿತಿಗಳು, ವಿಮರ್ಶಕರು ವಿಶೇಷ ಕಾಳಜಿ ವಹಿಸುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಶಾಸಕ ವಾಲ್ಮೀಕ ನಾಯಕ ಮಾತನಾಡಿ, ಕನ್ನಡ ಭವನದ ನಿರ್ಮಾಣಕ್ಕಾಗಿ ಶಾಸಕರ ವಿಶೇಷ ಅನುದಾನದಲ್ಲಿ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸಾಹಿತ್ಯದಿಂದ ಸಮಾಜ ಬದಲಾವಣೆ ಸಾಧ್ಯ. ಇಂಥ ಸಮ್ಮೇಳನಗಳು ಸಾಹಿತ್ಯ ಬಲವರ್ಧನೆಗೆ ಪ್ರೇರಣೆಯಾಗಲಿ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯಕುಮಾರ ಪರೂತೆ ನಿರೂಪಿಸಿದರು. ಕೃಷ್ಣ ಸುಬೇದಾರ ವಂದಿಸಿದರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 22 ಜನರನ್ನು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ವತಿಯಿಂದ ಸತ್ಕರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry