ಶುಕ್ರವಾರ, ಮೇ 7, 2021
26 °C

ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ:ಭಗತ್ ಸಿಂಗ್ ಮಾದರಿಯೋ? ಐಟಿ ಕಂಪನಿಯೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಯುವಜನತೆಗೆ ಭಗತ್ ಸಿಂಗ್ ಮಾದರಿಯೋ ಅಥವಾ ಐಟಿ ಕಂಪೆನಿ ಮಾಲೀಕನೋ ಎಂಬುದನ್ನು ಇಂದು ಕಂಡುಕೊಳ್ಳಬೇಕಾಗಿದೆ~ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯು (ಡಿವೈಎಫ್‌ಐ) ನಗರದಲ್ಲಿ ಸೆಪ್ಟೆಂಬರ್ 11ರಿಂದ 14ರವರೆಗೆ ನಡೆಸಲಿರುವ ಅಖಿಲ ಭಾರತ 9ನೇ ಯುವಜನ ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.`ಯುವಜನತೆಯನ್ನು ಇಂದು ನಾವು ಕಂಠಪಾಠ ಕಲಿಗಳನ್ನಾಗಿ ಮಾಡಲು ಹೊರಟಿದ್ದೇವೆ. ಹಿಂದಿನದಕ್ಕೆ ಜೋತು ಬೀಳಬೇಕಾದ ಅನಿವಾರ್ಯತೆಯನ್ನು ರೂಪಿಸಲಾಗಿದೆ. ಯುವಜನತೆಯ ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನೇ ಇಂದು ಕಿತ್ತುಕೊಳ್ಳಲಾಗುತ್ತಿದೆ~ ಎಂದು ವಿಷಾದಿಸಿದರು.`ನಮ್ಮ ನಾಡಿನಲ್ಲಿ ಸೈದ್ಧಾಂತಿಕ ರಾಜಕಾರಣವಿಲ್ಲ ಬದಲಿಗೆ ಸಮಯ ಸಾಧಕ ರಾಜಕಾರಣ ವಿಜೃಂಭಿಸುತ್ತಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ನಮ್ಮ ನಾಡು ಇಂದು ಇಂತಹ ದುಃಸ್ಥಿತಿಗೆ ತಲುಪುತ್ತಿರಲಿಲ್ಲ.

 

ಮಂಡನೆಯಾದ ಬಜೆಟ್ ಬಗ್ಗೆ ಒಂದು ನ್ಯಾಯಯುತವಾದ ವಿಶ್ಲೇಷಣೆ ನಡೆಯುವುದಿಲ್ಲ ಅಂದರೆ, ರಾಜಕೀಯ ಎಂತಹ ಮಟ್ಟಕ್ಕೆ ತಲುಪಿದೆ ಎಂಬುದು ಅರ್ಥವಾಗುತ್ತದೆ. ಪ್ರಜೆಗಳಿಗೆ ಅನುಕೂಲವಾದ ಸೈದ್ಧಾಂತಿಕ ರಾಜಕಾರಣ ಇಂದು ಉಳಿದಿಲ್ಲ. ರೋಗಿ ಸತ್ತರೂ ಆಪರೇಷನ್‌ಗಳು ನಡೆಯುತ್ತಲೇ ಇವೆ~ ಎಂದು ವ್ಯಂಗ್ಯವಾಡಿದರು.`ಯುವಜನತೆಗೆ ಸಾಮಾಜಿಕ ವಿವೇಕವನ್ನು ತಿಳಿಸಿಕೊಡುವ ತುರ್ತು ಅಗತ್ಯವಿದೆ. ಉದ್ದಿಮೆ ಪ್ರಧಾನವಾದ ನಾಡಿನಲ್ಲಿ ಎಲ್ಲವೂ ಸರಕಾಗಿದೆ. ಇಲ್ಲಿ ಮಾನವನೂ ಬಿಕರಿಯಾಗುವ ಒಂದು ಸರಕಾಗಿ ಮಾರ್ಪಟ್ಟಿದ್ದಾನೆ. ಯುವ ಜನತೆಗೆ ಸಂಸ್ಕೃತಿ, ಧರ್ಮ, ಪುರಾಣದ ನಿಜವಾದ ಅರ್ಥಗಳನ್ನು ತಿಳಿಸಿಕೊಡಬೇಕು. ಹಿಂದಿನ ಆದರ್ಶಗಳನ್ನು ಸಂಪೂರ್ಣವಾಗಿ ನಿರಾಕರಿಸದೆ, ಆಗಿರುವ ಅಪವ್ಯಾಖ್ಯಾನಗಳನ್ನು ಪುನರ್ ವ್ಯಾಖ್ಯಾನಗೊಳಿಸಿ ಯುವಜನತೆಗೆ ಸರಿಯಾದ ದಾರಿ ತೋರಬೇಕು~ ಎಂದರು.ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ ಶ್ರೀರಾಮಕೃಷ್ಣನ್ ಮಾತನಾಡಿ, `ಜಾಗತೀಕರಣದ ಒಟ್ಟಾರೆ ಪರಿಣಾಮವೆಂದರೆ, ಇಂದಿನ ಯುವಜನತೆಯಲ್ಲಿ ಒತ್ತಡವನ್ನು ಉಂಟುಮಾಡಿ, ಅವರಲ್ಲಿ ಅಭದ್ರತೆಯನ್ನು ಸೃಷ್ಟಿಸುವುದೇ ಆಗಿದೆ~ ಎಂದು ಹೇಳಿದರು.ಡಿವೈಎಫ್‌ಐ ಅಖಿಲ ಭಾರತ ಕಾರ್ಯದರ್ಶಿ ತಪಸ್ ಸಿನ್ಹಾ, ರಾಜ್ಯ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.