ಸೋಮವಾರ, ಮೇ 17, 2021
31 °C

ಸಾಹಿತ್ಯಕ್ಕೆ ದೇಶ ಭಾಷೆಗಳ ಸರಹದ್ದಿಲ್ಲ: ಸತ್ಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗಾಳಿ ಬೆಳಕಿನಂತೆ ಸಾಹಿತ್ಯಕ್ಕೂ ದೇಶ ಭಾಷೆಗಳ ಸರಹದ್ದಿಲ್ಲ. ಸಾದತ್ ಹಸನ್ ಮಂಟೊ, ದೇಶ ಭಾಷೆಗಳ ಗಡಿ ಮೀರಿದ ಕಥೆಗಾರ' ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಎಂ.ಎಸ್. ಸತ್ಯು ಹೇಳಿದರು.`ಸಾಹಿತ್ಯ ಸಮುದಾಯ' ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಸಾದತ್ ಹಸನ್ ಮಂಟೊ - ನೂರು ನೆನಪು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ದೇಶ ವಿಭಜನೆಯ ಸಂದರ್ಭದಲ್ಲಿ ಹೆಚ್ಚಾಗಿದ್ದ ಹಿಂಸಾಚಾರಗಳನ್ನು ಮಂಟೊ ತನ್ನ ಕಥೆಗಳಲ್ಲಿ ಹಿಡಿದಿಟ್ಟಿದ್ದಾನೆ. ಸಣ್ಣ ಕಥೆಗಳ ಮೂಲಕ ಬದುಕಿನ ಗಂಭೀರತೆಯನ್ನು ಕಟ್ಟಿಕೊಟ್ಟ ಕಥೆಗಾರ ಮಂಟೊ. ಆತನ ಕಥೆಗಳು ಕೇವಲ ಹಿಂಸಾಚಾರ ಹಾಗೂ ಕೋಮು ದಳ್ಳುರಿಯನ್ನು ಮಾತ್ರ ತೋರಿಸದೇ ಮನುಷ್ಯತ್ವದ ಸಾವನ್ನು ತಣ್ಣಗೆ ಕಟ್ಟಿಕೊಡುತ್ತವೆ. ದೇಶ ಹಾಗೂ ಭಾಷೆಯ ವಿಚಾರದಲ್ಲಿ ಗೆರೆಗಳನ್ನು ಹಾಕಿಕೊಳ್ಳದೇ ಬದುಕಿ ಬರೆದವನು ಕಥೆಗಾರ ಮಂಟೊ' ಎಂದು ಅವರು ಅಭಿಪ್ರಾಯಪಟ್ಟರು.`ಇತ್ತೀಚೆಗೆ ಅರ್ಥಪೂರ್ಣ ಸಿನಿಮಾಗಳು ನಿರ್ಮಾಣವಾಗುತ್ತಿಲ್ಲ. ನೈಜ ಘಟನೆಗಳನ್ನು ಆಧರಿಸಿದ, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳು ತಯಾರಾಗುತ್ತಿಲ್ಲ. ಉತ್ತಮ ಅಭಿರುಚಿಯ ಸಿನಿಮಾಗಳ ಕಡೆಗೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು' ಎಂದರು.

ಲೇಖಕ ಪ್ರೊ.ಎಸ್.ಆರ್.ರಮೇಶ್ ಮಾತನಾಡಿ, `ಮಂಟೊ ಜೀವನವಿಡೀ ಆತಂಕ ಹಾಗೂ ಡೋಲಾಯಮಾನ ಸ್ಥಿತಿಯಲ್ಲಿ ಕಳೆದವನು. ಆದರೆ, ಆತನ ಕಥೆಗಳು ನಿರ್ಲಿಪ್ತವಾಗಿ ತಾವು ಹೇಳಬೇಕಾಗಿರುವುದನ್ನು ಓದುಗನಿಗೆ ಮುಟ್ಟಿಸುತ್ತವೆ. ಮಂಟೊ ವ್ಯಕ್ತಿತ್ವಕ್ಕೂ ಆತನ ಕಥೆಗಳಿಗೂ ಸಾಕಷ್ಟು ಅಂತರವಿದೆ' ಎಂದು ಹೇಳಿದರು.`ಸಮುದಾಯ' ಸಂಘಟನೆಯ ಕಾರ್ಯದರ್ಶಿ ಡಾ.ಶ್ರೀಪಾದ ಭಟ್ ಮಾತನಾಡಿ, `ಮಂಟೊ ಕಥೆಗಳಲ್ಲಿ ಮನುಷ್ಯತ್ವದ ಹುಡುಕಾಟವಿದೆ. ಆತನ ಕಥೆಗಳಲ್ಲಿ ತಣ್ಣಗೆ ಸುಡುವ ಆರ್ದ್ರತೆ ಇದೆ' ಎಂದರು.ಲೇಖಕ ಜಿ.ಬಾಲಕೃಷ್ಣ, `ದೇಶ ವಿಭಜನೆಯ ವಿಷಯಗಳನ್ನು ಕುರಿತ ಮಂಟೊ ಕಥೆಗಳು ಹೆಚ್ಚು ಕಾಡುತ್ತವೆ. ಸಣ್ಣ ಸಣ್ಣ ಕಥೆಗಳ ಮೂಲಕ ಗಂಭೀರ ಅರ್ಥಕ್ಕೆ ತೆರೆದುಕೊಳ್ಳುವ ಕಥೆಗಾರ ಮಂಟೊ' ಎಂದು ಅಭಿಪ್ರಾಯಪಟ್ಟರು.ಉರ್ದು ಕವಿ ಮಾಹೆರ್ ಮನ್ಸೂರ್ ಅವರು ಗುಲ್ಜಾರ್ ಅವರ `ತೋಬಾ ಟೇಕ್ ಸಿಂಗ್' ಕವನವನ್ನು ವಾಚಿಸಿದರು. ನಂತರ ಸಮುದಾಯ ರಂಗ ತಂಡದ ಕಲಾವಿದರು ಮಂಟೊ ಕಥೆಗಳಾದ `ಖೋಲ್ ದೊ', `ಠಂಡಾ ಗೋಶ್ತ್' ಮತ್ತು `ತೋಬಾ ಟೇಕ್ ಸಿಂಗ್' ರಂಗ ರೂಪಕಗಳನ್ನು ಪ್ರಸ್ತುತ ಪಡಿಸಿದರು. ಮೈಸೂರಿನ ಪರಿವರ್ತನ ತಂಡದ ಕಲಾವಿದರು ಮಾಂಟೊ ಕಥೆ ಆಧಾರಿಕ `ಸಾಹೆ' ನಾಟಕವನ್ನು ಅಭಿನಯಿಸಿದರು.ಚಿಂತನ ಪುಸ್ತಕ ಹೊರತಂದಿರುವ ಹಸನ್ ನಯೀಂ ಸುರಕೋಡ ಅವರ `ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು' ಪುಸ್ತಕವನ್ನು ಎಂ.ಎಸ್.ಸತ್ಯು ಬಿಡುಗಡೆಗೊಳಿಸಿದರು. ಪುಸ್ತಕದ ಬೆಲೆ ರೂ.140.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.