ಮಂಗಳವಾರ, ಆಗಸ್ಟ್ 20, 2019
27 °C

ಸಾಹಿತ್ಯದಿಂದ ಜೀವನ ದೃಷ್ಟಿ ವಿಸ್ತಾರ- ರಾಮಮೂರ್ತಿ

Published:
Updated:

ಬೆಂಗಳೂರು: `ಸಾಹಿತ್ಯದ ಸಾಂಗತ್ಯದಿಂದ ಜೀವನ ದೃಷ್ಟಿ ವಿಸ್ತಾರಗೊಳ್ಳುತ್ತದೆ. ಸಾಹಿತ್ಯದ ಹವ್ಯಾಸ ಬದುಕಿನಲ್ಲಿ ಸಂತೃಪ್ತಿ ತರುತ್ತದೆ' ಎಂದು ಸಾಹಿತಿ ಬೇಲೂರು ರಾಮಮೂರ್ತಿ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಚಿತ್ರಾ ರಾಮಚಂದ್ರನ್ ಅವರ `ಕೀರ್ತಿನಿಧಿ ಕೇಸರಿ ಸಿಂಘ' ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.`ಸಾಹಿತ್ಯದ ಓದು ಉತ್ತಮವಾದ ಅಭಿರುಚಿ. ಓದಿನ ಅಭಿರುಚಿಯಿಂದ ಬದುಕಿನಲ್ಲಿ ಬೇರೆ ಬೇರೆ ರೀತಿ ಯೋಚಿಸುವುದನ್ನು ಕಲಿಯಬಹುದು. ಒಳ್ಳೆಯ ಕೃತಿಗಳನ್ನು ಓದುಗರು ಸದಾ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಚಿತ್ರಾ ರಾಮಚಂದ್ರನ್ ಅವರ ಬರವಣಿಗೆಯಲ್ಲಿ ಶ್ರದ್ಧೆ ಇದೆ. ಅವರು ಐತಿಹಾಸಿಕ ವಸ್ತುವನ್ನು ತಮ್ಮ ಕೃತಿಗೆ ಆರಿಸಿಕೊಂಡು ಅದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ' ಎಂದು ನುಡಿದರು.`ಲೇಖಕರಿಗೆ ಮಾನವೀಯತೆ ಬಹಳ ಮುಖ್ಯ. ಲೇಖಕರು ಸಮಾಜಮುಖಿ ಯಾಗಿರಬೇಕು. ಬದುಕಿನ ಎಲ್ಲ ಮಗ್ಗುಲುಗಳನ್ನೂ ಮಾನವೀಯತೆಯಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು' ಎಂದು ಹೇಳಿದರು.ಲೇಖಕ ಕೃಷ್ಣ ಸುಬ್ಬರಾವ್, `ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣ ಈ ಪುಸ್ತಕಕ್ಕಿದೆ. ಕೇವಲ ಒಂದು ವರ್ಗದ ಓದುಗರಿಗೆ ಸೀಮಿತವಾಗದೇ ಎಲ್ಲರನ್ನೂ ಸೆಳೆಯುವಂಥ ನಿರೂಪಣೆ ಈ ಪುಸ್ತಕದಲ್ಲಿದೆ. ವಿದ್ಯಾ ಮುರಳಿ ಅವರ ಚಿತ್ರಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಸಚಿತ್ರ ವರ್ಣನೆಯ ಪುಸ್ತಕ ಸರಳವಾಗಿ ಓದಿಸಿಕೊಳ್ಳುತ್ತದೆ' ಎಂದರು.ಪುಸ್ತಕದ ಲೇಖಕಿ ಚಿತ್ರಾ ರಾಮಚಂದ್ರನ್, `ಬಾಲ್ಯದಲ್ಲಿ ಕೇಳಿದ ಕಥೆಗಳು, ಸುತ್ತಾಟ ಈ ಕೃತಿ ರಚನೆಗೆ ಪ್ರೇರಣೆ. ಚಾರಿತ್ರಿಕ ವಸ್ತುವಿಗೆ ಕಾಲ್ಪನಿಕ ರೂಪಕೊಟ್ಟು ಕಥೆ ಹೆಣೆದಿದ್ದೇನೆ' ಎಂದರು. ಸಾಹಿತ್ಯ ಪ್ರಕಾಶನ ಹೊರತಂದಿರುವ ಪುಸ್ತಕದ ಬೆಲೆ ್ಙ 250.

Post Comments (+)