ಸಾಹಿತ್ಯದ ರಚನೆಗೆ ಆವೇಶ ಬೇಡ: ಕಾಳೇಗೌಡ

7

ಸಾಹಿತ್ಯದ ರಚನೆಗೆ ಆವೇಶ ಬೇಡ: ಕಾಳೇಗೌಡ

Published:
Updated:

ತರೀಕೆರೆ: ಕುವೆಂಪು ಅವರು ಚಿಕ್ಕ ವಯಸ್ಸಿನಲ್ಲೇ ಪ್ರಜಾಪ್ರಭುತ್ವದ ಕನಸು ಕಾಣುತ್ತಿದ್ದರು ಎಂದು ಲೇಖಕ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.ಇಲ್ಲಿನ ಪುರಸಭೆಯ ನೂತನ ಸಭಾಂಗಣದಲ್ಲಿ ಗುರುವಾರ ನಡೆದ ಬಸವಣ್ಣ, ದೇವಲದಾಸಿಮಯ್ಯ, ಕನಕದಾಸ ಮತ್ತು ಕುವೆಂಪು ಅವರ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಕುವೆಂಪು ವಿಚಾರಧಾರೆ ಮಂಡಿಸಿ ಮಾತನಾಡಿದ ಅವರು, ಸಂವೇದನಾಶೀಲ ಜಗತ್ತು ಕಾಣಲು ಅವರು ತವಕಿಸುತ್ತಿದ್ದರು ಎಂದರು.ಧರ್ಮಗಳು ಮಾನವನಿಗೆ ಮೋಸ ಮಾಡುತ್ತಾ ಅವನ ಏಳಿಗೆ ಸೀಮಿತಗೊಳಿಸಿವೆ. ಹೆತ್ತತಾಯಿ ಪ್ರವೇಶಿಸದ ಯಾವುದೇ ದೇವಾ ಲಯ ಪವಿತ್ರವಲ್ಲ ಎಂದ ಅವರು ಸಮಾಜದಲ್ಲಿನ ವಿರೋಧಾಭಾಸಗಳ ಜತೆಗೆ ನಾವು ಆಶಾವಾದಿಗಳಾಗಿರಬೇಕು ಎಂದರು.ಕನಕದಾಸರ ವಿಚಾರಧಾರೆ ಮಂಡಿಸಿದ ಕನಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಸುಧಾಕರ್ ಮಾತನಾಡಿ, ಸಾಹಿತ್ಯದ ರಚನೆ ಆವೇಶ, ಉದ್ವೇಗದಿಂದ ಆಗಬಾರದು, ಶಾಂತಿ ಮತ್ತು ಸಂಯಮದಿಂದ ರಚಿಸಿದ ಸಾಹಿತ್ಯ ಗಟ್ಟಿಯಾಗಿ ಉಳಿಯುತ್ತದೆ. ಕಣಿವೆಯಲ್ಲಿ ಹುಟ್ಟಿದ ಕನಕರು ಸಾಹಿತ್ಯದ ಶಿಖರವನ್ನೇರಿ ಕುಳಿತರು ಎಂದರು.ಬಸವಣ್ಣನವರ ವಿಚಾರಧಾರೆ ಮಂಡಿಸಿದ ಲೇಖಕ ರವೀಶ್ ಕ್ಯಾತನಬೀಡು ಮಾತನಾಡಿ, ಜಡ್ಡುಗಟ್ಟಿದ ಸಮಾಜವನ್ನು ಸಮಷ್ಟಿ ಹಂತದಲ್ಲಿ ಬದಲಾಯಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡವರು ಬಸವಣ್ಣ. ಕೆಳವರ್ಗದವರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದ ಅಂದಿನ ದಿನದಲ್ಲಿ ಮೇಲ್ವರ್ಗದಲ್ಲಿ ಹುಟ್ಟಿದರೂ ಅವರ ಆಚಾರಗಳನ್ನು ಖಂಡಿಸಲಾಗುತ್ತಿದೆ ಎಂದರು.ದೇವರ ದಾಸಿಮಯ್ಯ ವಿಚಾರಧಾರೆಯನ್ನು ಕುರಿತು ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಅರುಂಡಿ ನಾಗರಾಜ್, ವಚನ ಸಾಹಿತ್ಯದ ಪಿತಾಮಹರೆನಿಸಿದ್ದ ದಾಸಿಮಯ್ಯ ವೀರಶೈವ ಪರಂಪರೆ ಹುಟ್ಟುಹಾಕಿದ ಮೊದಲಿಗರು. ಅವರು ತಮ್ಮ ವಚನದಲ್ಲಿ ಸೌಂದರ್ಯ ಮೀಮಾಂಸೆ, ಜೀವನ ಮೀಮಾಂಸೆ ಮತ್ತು ಆಂತರಿಕ ಮೀಮಾಂಸೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry