ಸಾಹಿತ್ಯವೇ ನನ್ನ ಜೀವಾಳ

7

ಸಾಹಿತ್ಯವೇ ನನ್ನ ಜೀವಾಳ

Published:
Updated:
ಸಾಹಿತ್ಯವೇ ನನ್ನ ಜೀವಾಳ

ನಿಮಗೆ ಈಗ 70ರ ಆಸುಪಾಸು. ಇಲ್ಲಿ ನಿಂತು ನೋಡುವಾಗ ತಮ್ಮ ಹಿಂದಿನ ದಿನಗಳ ಬಗ್ಗೆ ಏನನ್ನಿಸುತ್ತದೆ?

ನಾನು ಎಂದೆಂದಿಗೂ ವಿದ್ಯಾರ್ಥಿ. ಹೊಸದನ್ನು ಕಲಿಯುವತ್ತಲೇ ನನ್ನ ಮನಸ್ಸು ತುಡಿಯುತ್ತದೆ. ಹೀಗಾಗಿ ಏನೋ ಬಹಳಷ್ಟು ಸಾಧಿಸಿಬಿಟ್ಟಿದ್ದೇನೆ ಎಂಬ ಭ್ರಮೆ ಇಲ್ಲ. ಅಧ್ಯಯನಕ್ಕೆ ಸಾಕಷ್ಟು ವಿಷಯಗಳು ಇವೆಯಲ್ಲಾ ಎಂಬುದು ಕಾಡುತ್ತದೆ. ನನ್ನನ್ನು ಚೇತೋಹಾರಿಯಾಗಿ ಇಟ್ಟಿರುವುದೇ ಕಲಿಕೆ.ಪ್ರಸ್ತುತ ಪ್ರದರ್ಶನ ಕಂಡಾಗ ಹೆಚ್ಚು ಭಿನ್ನವಾಗಿ ತೋರುತ್ತೀರಿ. ಇದರ ಹಿಂದಿನ ಮರ್ಮವೇನು?

ನಾನು ಸದಾ ಬೇರೆ ಬೇರೆ ಮಾಧ್ಯಮಗಳನ್ನು ಹುಡುಕುತ್ತಿರುತ್ತೇನೆ. ಅದರ ಫಲವೇ ಭಿನ್ನತೆ. ರೇಖಾಚಿತ್ರ, ವರ್ಣಚಿತ್ರ, ಉಬ್ಬುಶಿಲ್ಪ ಹಾಗೂ ಚಿತ್ರವಸ್ತ್ರ ಈ ಬಾರಿಯ ವೈಶಿಷ್ಟ್ಯಗಳು. ಮುಂದೆ ಕಾಷ್ಠಶಿಲ್ಪದೊಡನೆ ಪ್ರಯೋಗ ನಡೆಸುವ ಹಂಬಲ ಇದೆ.ಆಶಯಗಳಲ್ಲೂ ಪ್ರಯೋಗ ನಡೆದಿದೆಯೇ?

ನನ್ನ ಹಳೆಯ ಪರಿಕಲ್ಪನೆ ಮರ ಹಾಗೂ ಮಿಥುನದ ಸುತ್ತ ಇರುತ್ತಿತ್ತು. ಪುರುಷ ಮತ್ತು ಪ್ರಕೃತಿಯನ್ನು ಬಿಂಬಿಸುವ `ಹಿ ಅಂಡ್ ಶಿ~ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿ ರ‌್ಯಾಪ್ಸೋಡಿ ಸಂಗೀತ ಪ್ರಕಾರದಿಂದ ಪ್ರಭಾವಿತನಾಗಿ ಬಹುತೇಕ ಕಲಾಕೃತಿಗಳನ್ನು ರಚಿಸಿದ್ದೇನೆ.ನಿಮ್ಮನ್ನು ಬಹುವಾಗಿ ಪ್ರಭಾವಿಸಿದ್ದು ಯಾವುದು?

ನನ್ನ ಗೆರೆಗಳ ಹಿಂದಿರುವ ಶಕ್ತಿಯೇ ಸಾಹಿತ್ಯ. ಅದರಲ್ಲೂ ಕನ್ನಡ ಸಾಹಿತ್ಯ.  ಅರವತ್ತರ ದಶಕದಲ್ಲಿ ಗೆಳೆಯರಾದ ಎ.ಕೆ.ರಾಮಾನುಜನ್, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಲಂಕೇಶ್ ಮುಂತಾದವರ ಬರಹಗಳಿಂದ ಪ್ರಭಾವಿತನಾದೆ.

 

ರಾಮಾನುಜನ್ ಅಂತಹವರ ಪದ್ಯಗಳಿಗೆ ಚಿತ್ರ ಬರೆಯುವುದು ಸುಲಭದ ಮಾತಾಗಿರಲಿಲ್ಲ. ಅವರು ಪದಗಳಲ್ಲಿ ಹೇಳುವುದನ್ನು ನಾನು ದೃಶ್ಯಗಳಲ್ಲಿ ದಾಟಿಸಬೇಕಿತ್ತು. ಓದಿನ ಪರಿಶ್ರಮವೇ ನನ್ನ ಕೆಲಸವನ್ನು ಇನ್ನಷ್ಟು ಸರಳಗೊಳಿಸಿತು. `ಸಂಸ್ಕಾರ~ `ಕಾನೂರು ಹೆಗ್ಗಡತಿ~ ಇತ್ಯಾದಿ ಅನೇಕ ಚಿತ್ರಗಳಿಗಾಗಿ ದುಡಿದೆ. ರಂಗ ಪ್ರಯೋಗಗಳಲ್ಲಿ ತೊಡಗಿಕೊಂಡಿದೆ. ಸಾಹಿತ್ಯ ನಾನು ಬಯಸಿದ್ದನ್ನು ನೀಡಿತು.ಕಲೆಯ ಮಾರುಕಟ್ಟೆ ಹೇಗಿದೆ?


ಕಲಾವಿದನ ಹಿಂದೆ ಮಾರುಕಟ್ಟೆ ಬರಬೇಕೇ ಹೊರತು ಕಲಾವಿದನೇ ಮಾರುಕಟ್ಟೆಯ ಬೆನ್ನು ಹತ್ತಬಾರದು. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಹೋದರೆ ಜನ ಗುರುತಿಸುತ್ತಾರೆ. ಆದರೆ ಜನ ಗುರುತಿಸಬೇಕು ಎನ್ನುವ ಕಾರಣಕ್ಕೆ ಕೆಲಸ ಮಾಡಬಾರದು. ನನ್ನ ಪ್ರಕಾರ ಕಲಾವಿದ ಮಾರುಕಟ್ಟೆಯ ಬಗ್ಗೆ ತಲೆಕೆಡಿಸಿಕೊಳ್ಳಬಾರದು.ಯುವ ಕಲಾವಿದರಿಗೆ ನೀವು ಹೇಳಬಯಸುವ ಮಾತು?

ನಾವು ಚಿತ್ರ ರಚನೆಗೆ ತೊಡಗಿದಾಗ ಗ್ಯಾಲರಿಗಳಿಗಾಗಿ ತಡಕಾಗಬೇಕಿತ್ತು. ತಂತ್ರಜ್ಞಾನದ ಕೊರತೆ ಇತ್ತು. ಸಮೂಹ ಮಾಧ್ಯಮಗಳ ಬೆಂಬಲ ಇರಲಿಲ್ಲ. ಈಗ ಅದೆಲ್ಲ ಸಮಸ್ಯೆಯೇ ಅಲ್ಲ. ಹೀಗಾಗಿ ಯುವ ಕಲಾವಿದರು ತಾನೊಬ್ಬ ವಿದ್ಯಾರ್ಥಿ ಎನ್ನುವುದನ್ನು ಅರಿತು ಶ್ರಮವಹಿಸಬೇಕು. ಹೊಸತನ್ನು ಹುಡುಕಲು ಯತ್ನಿಸಬೇಕು.  ನಾವು ಕಂಡಂತೆ ವಾಸು...

`ವಾಸುದೇವ್ ಹೊಸ ಕರ್ನಾಟಕ ಪರಂಪರೆಯನ್ನೇ ಹುಟ್ಟುಹಾಕಿದರು. ವೆಂಕಟಪ್ಪನವರ ನಂತರ ಉದ್ಭವಿಸಿದ್ದ ಕಲಾವಿದರ ಕೊರತೆಯನ್ನು ನೀಗಿಸಿದರು. ಅವರು ಹೊಸ ತಲೆಮಾರಿಗೆ ಸೇರಿದ ಕಲಾವಿದ.~

- ಗಿರೀಶ ಕಾರ್ನಾಡ, ನಾಟಕಕಾರ.`ಜಾನಪದ ಪುರಾಣದ ಜತೆಗೆ ಆಧುನಿಕತೆಯನ್ನು ವಾಸುದೇವ್ ಮೇಳೈಸಿದ್ದಾರೆ. ಕನ್ನಡದ ಲಿಪಿಗಳನ್ನು ಚಿತ್ರಗಳಲ್ಲಿ ಬಳಸುವ ರೀತಿಯೂ ಮನೋಜ್ಞವಾದುದು. ಗೆರೆಗಳ ಮೇಲೆ ಅವರಿಗಿರುವ ಪ್ರಭುತ್ವ ಬೆರಗು ಹುಟ್ಟಿಸುತ್ತದೆ~

- ಎಂ.ಎಚ್.ಕೃಷ್ಣಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ.`ವಾಸುದೇವ್ ಒಬ್ಬ ಹುಟ್ಟು ಕಲಾವಿದ. ಅವರು ಸದಾ ಜನರ ಜತೆ ಬೆರೆತವರು. ಅದರಿಂದ ಅವರಿಗೆ ವಿಶ್ವದಲ್ಲಿ ಏನೇನಾಗುತ್ತಿದೆ ಎಂಬುದನ್ನು ಸಮೀಕರಿಸಿ ಅಭಿವ್ಯಕ್ತಿಗೊಳಿಸುವ ಗುಣವಿದೆ. ಅವರ ಕಲೆಯನ್ನು ಪ್ರಸ್ತುತಪಡಿಸುವ ರೀತಿ ಕೂಡ ವಿಭಿನ್ನ. ಒಂದೇ ಒಂದು ಆಕ್ಷೇಪ ಎಂದರೆ ಅವರ ಕಲಾಕೃತಿಗಳು ಬಲು ದುಬಾರಿ!~

- ಐ.ಎಂ.ವಿಠ್ಠಲಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ.`ಈ ಇಳಿವಯಸ್ಸಿನಲ್ಲೂ ಅವರು ಅನೇಕ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಅದು ಯುವಕರಿಗೆ ಸ್ಫೂರ್ತಿ ನೀಡುವ ವಿಷಯ. ಅವರು ಬೇರೆ ಬೇರೆ ಮಾಧ್ಯಮಗಳಲ್ಲಿ ಪ್ರಯೋಗ ನಡೆಸುತ್ತಿರುವುದು ಕೂಡ ಗಮನಾರ್ಹ.~

- ರವಿಕುಮಾರ್ ಕಾಶಿ, ಕಲಾ ವಿಮರ್ಶಕ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry