ಸಾಹಿತ್ಯೋತ್ಸವ- ಪುಸ್ತಕೋತ್ಸವ ಸಂಭ್ರಮ

7
ಇಂದಿನಿಂದ ತ್ರಿಪುರ ವಾಸಿನಿಯಲ್ಲಿ ವಿವಿಧ ಭಾಷೆಯ ಸಾಹಿತಿಗಳ ಸಮಾಗಮ

ಸಾಹಿತ್ಯೋತ್ಸವ- ಪುಸ್ತಕೋತ್ಸವ ಸಂಭ್ರಮ

Published:
Updated:

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಸಾಹಿತ್ಯೋತ್ಸವದ ಸಾಹಿತ್ಯ ಗಂಧದ ಘಮಲು ಆರುವ ಮುನ್ನವೇ ಮತ್ತೊಂದು ಸಾಹಿತ್ಯೋತ್ಸವ ಮತ್ತು ಪುಸ್ತಕೋತ್ಸವಕ್ಕೆ ನಗರ ಸಜ್ಜಾಗುತ್ತಿದೆ. ಇದೇ 14ರಿಂದ 16ವರೆಗೆ ಸಾಹಿತ್ಯೋತ್ಸವ ಮತ್ತು 23ರವರೆಗೆ ಪುಸ್ತಕೋತ್ಸವಕ್ಕೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವೇದಿಕೆ ಸಿದ್ಧಗೊಂಡಿದೆ.`ಭಾರತೀಯ ಭಾಷೆಗಳ ನಡುವಿನ ಅಂತರವನ್ನು ತಗ್ಗಿಸಲು ಈ ಸಾಹಿತ್ಯ ಮತ್ತು ಪುಸ್ತಕೋತ್ಸವವು ಸೇತುವಾಗಲಿದೆ. ಉತ್ಸವದಲ್ಲಿ ದೇಶದ ಹತ್ತು ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ವಿವಿಧ ಭಾಷೆಗಳ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಂಬತ್ತು ವರ್ಷಗಳಿಂದ ಯಶಸ್ವಿಯಾಗಿ ಬೆಂಗಳೂರು ಪುಸ್ತಕೋತ್ಸವ ನಡೆದುಕೊಂಡು ಬಂದಿದೆ. ಈ ಉತ್ಸವದಲ್ಲಿ ಬಹುತೇಕ ಭಾರತೀಯ ಭಾಷೆಗಳ ಪುಸ್ತಕಗಳು ಒಂದೆಡೆ ದೊರೆಯಲಿವೆ. ಈ ಬಾರಿ ವಿಶೇಷವಾಗಿ ಪುಸ್ತಕೋತ್ಸವ ಜತೆಗೆ ದೇಶದ ಎಲ್ಲಾ ಭಾಷೆಗಳ ಸಾಹಿತಿಗಳನ್ನು ಒಂದೆಡೆ ಸೇರಿಸಿ ಸಾಹಿತ್ಯೋತ್ಸವವನ್ನೂ ಆಚರಿಸಲಾಗುತ್ತಿದೆ' ಎಂದು ವಿವರಿಸಿದರು.`ಸಾಹಿತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಯು ಡಿ.14 ರಂದು ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಸಂಜೆ 5 ಕ್ಕೆ ನಡೆಯಲಿದೆ. ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರು ಉದ್ಘಾಟನೆ ಮಾಡಲಿದ್ದಾರೆ. ಜ್ಞಾನಪೀಠ ಪುರಸ್ಕೃತ ಮಲಯಾಳಂ ಸಾಹಿತಿ ಡಾ.ವಾಸುದೇವನ್ ನಾಯರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ಅವರು ಭಾಗವಹಿಸಲಿದ್ದಾರೆ' ಎಂದರು.`ಇಂಡಿಯನ್ ಇಲ್ಲಸ್ಟ್ರೇಟೆಡ್ ಕ್ಲಾಸಿಕ್ ಹಾಗೂ ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಉತ್ಸವಕ್ಕೆ ಸಹಕಾರ ನೀಡುತ್ತಿವೆ' ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಎಲ್.ಹನುಮಂತಯ್ಯ, `ಉತ್ಸವದಲ್ಲಿ ಭಾರತೀಯ ಸಾಹಿತ್ಯದ ಎಲ್ಲ ರೂಪಗಳನ್ನು ಶೋಧಿಸುವ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ಚರ್ಚೆಗಳು ನಡೆಯಲಿವೆ.

ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕಲ್ಪಿಸಬೇಕಾದ ಪೂರಕ ವಾತಾವರಣ, ಪ್ರಾದೇಶಿಕ ಭಾಷಾ ಸಾಹಿತ್ಯ ಕೃತಿಗಳ ಪ್ರಚಾರ, ಅನುವಾದ ಸೇರಿದಂತೆ ಇನ್ನು ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ' ಎಂದರು.`ಸಾಹಿತ್ಯ ಪ್ರಕಾರಗಳ ಬಗ್ಗೆ ಅರಿವು, ಲೇಖಕರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಾಮರಸ್ಯ ಹೀಗೆ ಅನೇಕ ವಿಚಾರಗಳ ಕುರಿತು ಗೋಷ್ಠಿಗಳು ನಡೆಯಲಿವೆ' ಎಂದು ತಿಳಿಸಿದರು.`ಸಂವಾದದಲ್ಲಿ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಯು.ಆರ್.ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ, ಎಸ್.ಎಲ್.ಬೈರಪ್ಪ, ಕೆ.ಎಸ್. ನಿಸಾರ್ ಅಹಮದ್, ಚನ್ನವೀರ ಕಣವಿ, ಹಿಂದಿ ಭಾಷೆಯ ಸಾಹಿತಿಗಳಾದ ಚಿತ್ರಾ ಮುದುಗಲ್, ಕೈಲಾಸ್ ವಾಜಪೇಯಿ, ಮಲಯಾಳಂನ ಸಾಹಿತಿ ಎಂ.ಟಿ.ವಾಸುದೇವ ನಾಯರ್ ಮತ್ತಿತರರು ಭಾಗವಹಿಸಲಿದ್ದಾರೆ' ಎಂದು ತಿಳಿಸಿದರು.`ಡಿ.16 ರಂದು ಸಾಹಿತ್ಯೋತ್ಸವದ ಸಮಾರೋಪ ಕಾರ್ಯಕ್ರಮವು ನಡೆಯಲಿದೆ. ಸಾಹಿತಿ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಬಿ.ಎ. ವಿವೇಕ್ ರೈ ಸಮಾರೋಪ ಭಾಷಣ ಮಾಡಲಿದ್ದಾರೆ.

ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪ, ನಿಘಂಟು ತಜ್ಞ ಡಾ.ಜಿ.ವೆಂಕಟಸುಬ್ಬಯ್ಯ ಮತ್ತು ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಉಪಾಧ್ಯಕ್ಷ ನಿತಿನ್ ಎಸ್. ಶಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ' ಎಂದರು.ಉತ್ಸವದ ಪ್ರದರ್ಶನದಲ್ಲಿ 300 ಮಳಿಗೆಗಳು...

ಉತ್ಸವದ ಪುಸ್ತಕ ಪ್ರದರ್ಶನವು ಡಿ.14 ರಿಂದ 23 ರವರೆಗೆ ನಡೆಯಲಿದೆ. ರಾಜ್ಯದ ನೂರು ಪುಸ್ತಕ ಮಳಿಗೆಗಳು ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 300 ಪುಸ್ತಕ ಮಳಿಗೆಗಳನ್ನು ತೆರೆಯಲಾಗುವುದು. ಕನ್ನಡ, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ, ಉರ್ದು, ಮತ್ತಿತರ ಪ್ರಾದೇಶಿಕ ಭಾಷೆಗಳ ಅಪರೂಪದ ಪುಸ್ತಕಗಳು ಇಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.300 ಪುಸ್ತಕ ಮಳಿಗೆಗಳು...

*ಬೆಂಗಳೂರು ಪುಸ್ತಕೋತ್ಸವಕ್ಕೆದಶಮಾನದ ಸಂಭ್ರಮ

*ಪುಸ್ತಕೋತ್ಸವದ ಜತೆಗೆ ನಡೆಯಲಿದೆ ಸಾಹಿತ್ಯೋತ್ಸವ

* ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಹಲವು ಭಾಷೆಗಳ ಸಾಹಿತಿಗಳು 

* ಭಾರತೀಯ ಸಾಹಿತ್ಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ

* ಪುಸ್ತಕೋತ್ಸವದಲ್ಲಿ ಅಪರೂಪದ ಪುಸ್ತಕಗಳ ಮಾರಾಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry