ಭಾನುವಾರ, ಮೇ 16, 2021
28 °C

`ಸಾಹಿತ್ಯ ಕ್ಷೇತ್ರ ಹೊಸತನ ಸೃಷ್ಟಿಸುತ್ತದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಸಾಹಿತ್ಯ ಕ್ಷೇತ್ರದಲ್ಲಿನ ಕ್ರಿಯಾಶೀಲತೆ ನಿರಂತರವಾಗಿ ಹೊಸತನವನ್ನು ಸೃಷ್ಟಿಸುವಂತಹದು. ಇದರ ಪರಿಣಾಮವೇ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಹಿರಿಯ ಕಿರಿಯ ಸಾಹಿತಿಗಳ ಸೃಷ್ಟಿಗೆ ಕಾರಣ ಎಂದು ಡಾ. ಪಂಚಾಕ್ಷರಿ ಹಿರೇಮಠ ಹೇಳಿದರು.ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ನಡೆಯುತ್ತಿರುವ ಕೊಪ್ಪಳ 6ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರಂತೆಯೂ ನಾನೂ ಒಬ್ಬ ಎನ್ನವುದರ ಬದಲು ಎಲ್ಲರಿಗಿಂತಲೂ ಭಿನ್ನ ಎನ್ನವ ರೀತಿಯಲ್ಲಿ ಹಾಗೂ ದೃಷ್ಟಿಕೋನ ಬದಲಾಯಿಸಿಕೊಂಡು ಬರೆಯುವುದನ್ನು ಯುವಕರು ರೂಢಿಸಿಕೊಳ್ಳಬೇಕಾಗಿದೆ ಎಂದು ನುಡಿದರು.ಕಾವ್ಯ ಅನ್ನೋದು ಒಂದು ಅದ್ಭುತ ಸೃಷ್ಟಿ. ಮತ, ಪಂಥ, ಪಂಗಡ, ಧರ್ಮಕ್ಕೆ ಬದ್ಧರಾಗದೇ ಬದುಕಿಗೆ ಬದ್ಧರಾಗಿ ಕಾವ್ಯವನ್ನು ರಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬದುಕಿನ ಬಗೆಗೆ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಇಟ್ಟುಕೊಂಡು ಯಾರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೋ ಅಂತವರಿಂದ ಮಾತ್ರ ಒಳ್ಳೆಯ ಕಾವ್ಯ ಸೃಷ್ಟಿಯಾಗಬಲ್ಲದು ಎಂದು ಹೇಳಿದರು.ಒಂದೇ ಒಂದು ಕವನ ಬರೆದರೆ ಸಾಕು ಖ್ಯಾತ ಕವಿ, ಸಾಹಿತಿ ಎಂದು ಕರೆಯಿಸಿಕೊಳ್ಳುತ್ತಿರುವ ಅನೇಕ ಯುವ ಬರಹಗಾರರ ಪ್ರಸ್ತುತತೆ ಬಗ್ಗೆ ಗಮನ ಹರಿಸುವುದಾದರೆ, ದಿಢೀರನೆ ಕವನ ಬರೆಯುವ, ಮುಲಾಜಿಗೆ ಬಿದ್ದು, ಭಯದಿಂದ ಹಾಗೂ ಮೂಲ ಆಶಯವಿಲ್ಲದೇ ಬರೆಯುತ್ತಿರುವ ಪ್ರವೃತ್ತಿ ಬೆಳೆಸಿಕೊಂಡ್ದ್ದಿದೇ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕದ ಸಂಗತಿಯಾಗಿದೆ. ಮುಖ್ಯವಾಗಿ ಸಾಹಿತ್ಯ ಕೃಷಿಯಲ್ಲಿ ಎಷ್ಟರಮಟ್ಟಿಗೆ ಸಮರ್ಥರಾಗಿದ್ದೇವೆ, ಸಾಮಾಜಿಕ ಚೌಕಟ್ಟಿನಲ್ಲಿ ಎಷ್ಟರಮಟ್ಟಿಗೆ ಪ್ರಭಾವಕ್ಕೆ ಒಳಗಾಗುವಂತಹದಿದೆ ಹೀಗೆ ಅನೇಕ ಅಂಶಗಳ ಕುರಿತು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಮೂಲಕ ಯುವ ಕವಿಗಳು ಜಾಗೃತ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಾಜಿ ದೇವೇಂದ್ರಪ್ಪ ಹೇಳಿದರು.ಹೊಸೂರಿನ ವೀರೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಶಿಕ್ಷಣ ಅಗತ್ಯ, ದೂರದೃಷ್ಟಿ, ಸ್ವ ಅನುಭವ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಕೃತಿಗಳನ್ನು ರಚಿಸಿದರೆ ಅದೊಂದು ಒಳ್ಳೆಯ ಗ್ರಂಥವಾಗಬದುದು. ಹಾಗೆಯೇ ಪ್ರತಿಯೊಬ್ಬರು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡು ಸಾಮಾಜಿಕ ಸಂಘಟನೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ನುಡಿದರು.ಡಾ. ಕೆ.ಬಿ. ಬ್ಯಾಳಿ ಅಧ್ಯಕ್ಷತೆ ವಹಿಸಿದ್ದರು. ಅಮರೇಶ ಕರಡಿ, ವೀರಣ್ಣ ವಾಲಿ, ಡಾ. ಶಿವಕುಮಾರ      ಮಾಲಿಪಾಟೀಲ, ಎಸ್.ಎಂ. ಕಂಬಾಳಿಮಠ, ಜಿ. ಪವನಕುಮಾರ, ಅರಳಿ ನಾಗಭೂಷಣ, ಗಾಯತ್ರಿ ಭಾವಿಕಟ್ಟಿ ಸೇರಿದಂತೆ ಅನೇಕರು ಕವನ ವಾಚನಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.