ಸಾಹಿತ್ಯ ಚರಿತ್ರೆ ಮರುಸೃಷ್ಟಿ ಅಗತ್ಯ

7

ಸಾಹಿತ್ಯ ಚರಿತ್ರೆ ಮರುಸೃಷ್ಟಿ ಅಗತ್ಯ

Published:
Updated:
ಸಾಹಿತ್ಯ ಚರಿತ್ರೆ ಮರುಸೃಷ್ಟಿ ಅಗತ್ಯ

ಗುಲ್ಬರ್ಗ: ಸಾಹಿತ್ಯ ಚರಿತ್ರೆಯ ಮರುಸೃಷ್ಟಿಯ ಅಗತ್ಯವಿರುವ ಈ ಸಂದರ್ಭದಲ್ಲಿ ಅದನ್ನು ಮತ್ತೊಮ್ಮೆ ಅವಲೋಕಿ ನೋಡಿದರೆ, ಅಲ್ಲಿನ ಬಹುಮುಖಿ ಇರುವುಗಳ ನಮ್ಮ ಗಮನ ಸೆಳೆಯುತ್ತವೆ ಎಂದು ಭಾರತೀಯ ಅಧ್ಯಯನಗಳ ಅಮೆರಿಕಾ ಸಂಸ್ಥೆಯ ನಿರ್ದೇಶಕ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರೀಯ ಭಾಷಾ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಹೊಸ ಬಗೆಯ ಕನ್ನಡ ಸಾಹಿತ್ಯ ಚರಿತ್ರೆಯತ್ತ ಒಂದು ನೋಟ~ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಪಠ್ಯಗಳ ಆರಂಭಿಕ ಹಂತವು ಲಿಪಿ ಕೇಂದ್ರಿತವಾಗಿತ್ತು. ಮುಂದೆ ಅದು ನಿಧಾನವಾಗಿ ಸ್ವರ-ಗಾಯನ ಕೇಂದ್ರಿತವಾಗಿ ಸಾವಿರಾರು ಜನರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಯಶಸ್ವಿಯಾಯಿತು. ನಂತರ ಪ್ರದರ್ಶನ ಕೇಂದ್ರಿತವಾಗಿ ಲಕ್ಷಾಂತರ ಜನರನ್ನು ತಲುಪಿತು ಎಂದು ತಿಳಿಸಿದರು.ಈವರೆಗಿನ ಸಾಹಿತ್ಯ ಚರಿತ್ರೆಕಾರರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಾದ ಈ ಬಗೆಯ ಬದಲಾವಣೆಗಳನ್ನು ಕೇವಲ ಒಂದೇ ಸಾಲಿನಲ್ಲಿ ಹೇಳಿ ಮುಗಿಸಿದ್ದು, ಮೇಲಿನ ಈ ಎಲ್ಲ ವಿವರಗಳನ್ನು ಒಳಗೊಂಡ ಸಾಹಿತ್ಯ ಚರಿತ್ರೆಯನ್ನು ಸೃಷ್ಟಿ ಮಾಡುವ ಅನಿವಾರ್ಯತೆ ಇಂದು ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ಬಳಿಕ ಪ್ರೊಜೆಕ್ಟರ್ ಮೂಲಕ ತೋರಿಸಿ ಉಪನ್ಯಾಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದರು.ದೇವಾಲಯದ ನವರಂಗಗಳು, ಮೂರ್ತಿ ಚಿತ್ರಗಳು, ಭಿತ್ತಿ ಚಿತ್ರಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಬಹುಮುಖಿ ಇರುವಿಕೆಯನ್ನು ಗುರುತಿಸಬಹುದಾಗಿದೆ. ಇಂಥವುಗಳನ್ನು ಗಮನಿಸುವುದರ ಜೊತೆಗೆ ಹರಿಕಥೆ, ಯಕ್ಷಗಾನ, ತಾಳಮದ್ದಲೆಗಳಲ್ಲೂ ಕನ್ನಡ ಸಾಹಿತ್ಯ ಚರಿತ್ರೆಯನ್ನು ಹುಡುಕಬೇಕಾಗಿದೆ ಎಂದು ವಿವರಿಸಿದರು.ಕರಾವಳಿ ಪ್ರದೇಶದಲ್ಲಿ ಈ ಹಿಂದೆ ಜೈಮಿನಿ ಭಾರತದ ಪದ್ಯ ಹೇಳದ ಗಂಡಿಗೆ ಹೆಣ್ಣು ಕೊಡುತ್ತಿರಲಿಲ್ಲ ಎಂಬ ಸಂಗತಿಯು ಕಾವ್ಯದ ಸಾಮಜಿಕ ಅರ್ಥವನ್ನು ಬಿತ್ತರಿಸುತ್ತದೆ. ಕನ್ನಡ ಕಾವ್ಯ ವಿಸ್ತರಣೆಗೆ ಆಕರಗಳಾಗಿರುವ ಇಂತಹವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಹೊಸ ಚರಿತ್ರೆ ನಿರ್ಮಿಸಬೇಕಾಗಿದೆ ಎಂದು ಹೇಳಿದರು.

ಪ್ರೊ. ಪಿ.ಡಿ. ರಾಜಣ್ಣ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಕ್ರಮ ವಿಸಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭೀಮಾಶಂಕರ ಬಿರಾದಾರ ವಂದಿಸಿದರು.ಸಂವಾದ ಕಾರ್ಯಕ್ರಮ

ಸಾಹಿತ್ಯ ಚರಿತ್ರೆ ಬಗ್ಗೆ ನೀವು ಹೇಳಿದ ಹೊಸ ಸಾಧ್ಯತೆಗಳು ಕೇವಲ ಕರಾವಳಿಗೆ ಮಾತ್ರ ಸೀಮಿತವಾಗಿದ್ದವು. ನಮ್ಮಲ್ಲಿಯೂ (ಉತ್ತರ ಕರ್ನಾಟಕ) ಸಣ್ಣಾಟ, ಬಯಲಾಟ, ತತ್ವಪದಗಳು, ಸ್ವರ ವಚನ, ಪುರಾಣಗಳಿವೆ ಎಂಬ ಡಾ. ಮೀನಾಕ್ಷಿ ಬಾಳಿ ಅವರ ಪ್ರಶ್ನೆಗೆ, ನಾನು ಆ ಪರಿಸರದಲ್ಲಿಯೇ ಹುಟ್ಟಿ ಬೆಳೆದಿರುವುದರಿಂದ ಒಂದು ಸಾಧ್ಯತೆಗಳನ್ನು ಮಾತ್ರ ಗುರುತಿಸಿದ್ದೇನೆ. ಇದುವೇ ಅಂತಿಮ ಅಲ್ಲ. ಆಯಾ ಭಾಗದ ಸಮಗ್ರ ಸಾಹಿತ್ಯ ಚರಿತ್ರೆ ಹೊರಬರಬೇಕಾಗಿದೆ ಎಂದು ಹೇಳಿದರು.ಕೇವಲ ಷಟ್ಪದಿ, ಚಂಪೂ ಕುರಿತು ಹೇಳಿದ ನೀವು ವಚನ ಸಾಹಿತ್ಯದ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಡಾ. ಕಾಶಿನಾಥ ಅಂಬಲಗಿ ಅವರ ಪ್ರಶ್ನೆಗೆ, ಡಾ. ಎಂ.ಎಂ. ಕಲಬುರ್ಗಿ, ಡಾ. ಆರ್.ಸಿ. ಹಿರೇಮಠ ಅವರ ವಚನ ಸಂಪುಟಗಳನ್ನು ಬಿಟ್ಟು ನೋಡಬೇಕಿದೆ. ಮೈಲಾರ ಜಾತ್ರೆ, ಎಲ್ಲಮ್ಮನ ಜಾತ್ರೆ ಹಾಗೂ ಮಂಟೆಸ್ವಾಮಿ, ಮಲಯ ಮಹಾದೇಶ್ವರ ಸಂಪ್ರದಾಯಗಳಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದವರ ವಚನಗಳು ಸಿಗುತ್ತವೆ. ಆ ಹಿನ್ನೆಲೆಯಲ್ಲಿ ನೋಡಬೇಕಿದೆ ಎಂದರು.ಸಾಹಿತ್ಯ ಚರಿತ್ರೆಯೊಳಗೆ ನಾಟಕ ಕವಿಗಳನ್ನು ಮರೆತಿದ್ದೇವೆ. ಈ ಬಗೆಯ ನಿರ್ಲಕ್ಷ್ಯಕ್ಕೊಳಗಾದವರ ಚರಿತ್ರೆ ಬರೆಯುವ ಅಗತ್ಯವಿದೆ. ವಿವಿಧ ಕ್ಷೇತ್ರದ ಕೊಡುಗೆಗಳನ್ನು ಸೇರಿಸುವ ಮೂಲಕ ಅದಕ್ಕೊಂದು ಪ್ರಜಾಪ್ರಭುತ್ವ ಸ್ವರೂಪ ನೀಡಬೇಕಿದೆ ಎಂಬ ರಹಮತ್ ತರೀಕೆರೆ ಅವರ ಅಭಿಪ್ರಾಯವನ್ನು ಮನ್ನಿಸಿದ ಬಿಳಿಮಲೆ, ಸಾಹಿತ್ಯ ಚರಿತ್ರೆಯ ಮರುಸೃಷ್ಟಿಯ ಅಗತ್ಯದ ಕುರಿತು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry