ಸಾಹಿತ್ಯ ದೂರವಾದರೆ ಭಾಷೆಯೂ ದೂರ

7

ಸಾಹಿತ್ಯ ದೂರವಾದರೆ ಭಾಷೆಯೂ ದೂರ

Published:
Updated:
ಸಾಹಿತ್ಯ ದೂರವಾದರೆ ಭಾಷೆಯೂ ದೂರ

ಸೊರಬ: `ಕೊಟ್ಟು ತೆಗೆದುಕೊಳ್ಳುವ ಮಾಧ್ಯಮವೇ ಸಾಹಿತ್ಯ. ಅದನ್ನು ಅಮೃತದಂತೆ ಹಂಚುವ ಕೆಲಸವನ್ನು ನಾವೆಲ್ಲಾ ಮಾಡಬೇಕು~ ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ನುಡಿದರು.ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ಬಗ್ಗೆ ಗೌರವ, ಪ್ರೀತಿ ಕಮ್ಮಿ ಆಗುತ್ತಿದೆ. ಪುಸ್ತಕ ಓದುವವರ ಸಂಖ್ಯೆ ತೀವ್ರ ಕುಸಿದಿದೆ. ವಿದ್ಯಾವಂತರು ಹೆಚ್ಚಾಗುತ್ತಿದ್ದರೂ, ಸಾಹಿತ್ಯ ಮಾತ್ರ ಹಿನ್ನಡೆಯತ್ತ ಸಾಗಿದೆ. ದೃಶ್ಯ ಮಾಧ್ಯಮಗಳ ಸಾಹಿತ್ಯವನ್ನು ಜನಮನದಿಂದ ದೂರ ಮಾಡುತ್ತಿವೆ ಎಂದು ಆತಂಕ ಸೂಚಿಸಿದರು.ಸಾಹಿತ್ಯ ಜನಮನದಿಂದ ದೂರ ಆದಾಗ ಭಾಷೆಯೂ ದೂರ ಆಗುತ್ತದೆ. ಸಾಹಿತಿಯ ಬಗ್ಗೆ ಜನರ ನಿರೀಕ್ಷೆಯೂ ಹೆಚ್ಚಿದ್ದು, ಸಮಾಜಮುಖಿಯಾಗಿ ಇರದಿದ್ದಲ್ಲಿ ಅಪರಾಧಿ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮ್ಮೇಳನ ಭಾಷೆಯನ್ನು ಎಲ್ಲರ ಮನದಲ್ಲಿ ತುಂಬುವ ಕೆಲಸ ಮಾಡಬೇಕು. ಕನ್ನಡದಿಂದ ಸ್ಥಾನಮಾನ ಪಡೆದವರು ಅದಕ್ಕೆ ತಕ್ಕ ಗೌರವ ನೀಡಬೇಕು ಎಂದು ಆಶಿಸಿದರು.

ಇದೇ ವೇಳೆ ಅವರು `ಜೋಗದ ಸಿರಿ~ ಸಿ.ಡಿ. ಬಿಡುಗಡೆಗೊಳಿಸಿದರು.ಸಮ್ಮೇಳನಾಧ್ಯಕ್ಷ ಹೊಸಬಾಳೆ ಸೀತಾರಾಮರಾವ್ ಮಾತನಾಡಿ, ಸಾಹಿತ್ಯದ ಬೆಳವಣಿಗೆ ಇಂದಿನ ಅಗತ್ಯವಾಗಿದೆ. ಕನ್ನಡ ಅಂಕಿಗಳನ್ನು ಬಳಸಿಕೊಳ್ಳುವ ಮೂಲಕ ಉಳಿಸಿಕೊಳ್ಳಬೇಕಿದೆ. ಶ್ರೀಗಂಧ ಹಾಗೂ ಅರಣ್ಯ ಸಂಪತ್ತಿನಿಂದ ಸಮೃದ್ಧವಾಗಿದ್ದ ತಾಲ್ಲೂಕು ಈಗ ಬರಡಾಗುತ್ತಿದ್ದು, ಅವುಗಳ ಸಂರಕ್ಷಣೆಗೆ ನಾವೆಲ್ಲಾ ಪಣ ತೊಡಬೇಕು ಎಂದು ಕರೆ ನೀಡಿದರು.ಅಶ್ಲೀಲ, ಅಸಭ್ಯ ಹಾಗೂ ಯುವಜನತೆ, ಮಕ್ಕಳನ್ನು ದಾರಿ ತಪ್ಪಿಸುವ ದೂರದರ್ಶನ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು. ಸಂಸ್ಕೃತಿ, ಸಾಹಿತ್ಯ ಬಿಂಬಿಸುವ ಮಾಧ್ಯಮಗಳು ಬರಬೇಕು ಎಂದು ನುಡಿದರು.

ತಾಲ್ಲೂಕಿನ ಉದಯೋನ್ಮುಖ ಬರಹಗಾರರಾದ ಬಿದರಗೆರೆ ರೇವಣಪ್ಪ ಅವರ `ಜೀವನ ಜೋಕಾಲಿ~ ಶ್ರೀಪಾದ ಬಿಚ್ಚುಗತ್ತಿಯವರ `ಸಂಶೋಧನೆಗಳು~, ಮುಕ್ತಾಭಾಯಿ ಭಟ್‌ರ `ಭಾವ ಕುಸುಮ~, ಪರಶುರಾಮ ಕೋತಿನ ವಿರಚಿತ `ಬೆಳಗು ಬಾ ಬೆಳಕೆ~, ಧವನ ಹೋಮೇಶ್‌ರ `ಕಾಲು ದಾರಿ~, ಬಿ.ಪಿ. ಸಾವಿತ್ರಮ್ಮ ರಚಿತ `ಮುತ್ತಿನ ಆರತಿ~ ಪುಸ್ತಕಗಳನ್ನು ಜನಪ್ರತಿನಿಧಿಗಳಾದ ಎಚ್.ಬಿ. ಗಂಗಾಧರಪ್ಪ, ಮೀನಾಕ್ಷಮ್ಮ, ವಿಜಯಾ ಮಹಾಲಿಂಗಪ್ಪ, ಆರ್.ಕೆ. ಹೇಮಾವತಿ, ಗೀತಾ ಮಲ್ಲಿಕಾರ್ಜುನ, ಗಜಾನನ ರಾವ್ ಬಿಡುಗಡೆಗೊಳಿಸಿದರು.ಶಾಸಕ ಎಚ್. ಹಾಲಪ್ಪ, ಕಿರುತೆರೆ ಬಾಲನಟಿ ಅನುಜ್ಞಾ, ಜಿ.ಪಂ. ಸದಸ್ಯರಾದ ಗುರುಕುಮಾರ್ ಪಾಟೀಲ್, ಕೋಮಲಾ ನಿರಂಜನ, ಮಲ್ಲಮ್ಮ ಮಲ್ಲಿಕಾರ್ಜುನ, ನೌಕರರ ಸಂಘದ ಅಧ್ಯಕ್ಷ ನೀಲಪ್ಪ ಉಪಸ್ಥಿತರಿದ್ದರು.ಕುಮಾರಸ್ವಾಮಿ ಆಶಯ ಭಾಷಣ ಮಾಡಿದರು. ಕೃಷ್ಣಾನಂದ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು.

ಪ್ರವೀಣ್, ಸಂಗಡಿಗರು ನಾಡಗೀತೆ ಹಾಡಿದರು. ಶಿವಾನಂದ ಪಾಣಿ ವಂದಿಸಿದರು. ದೀಪಕ್, ಹರೀಶ್, ಮೋಹನ್, ಜಯಪ್ಪ ಕಾರ್ಯಕ್ರಮ  ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry