ಸಾಹಿತ್ಯ ಪರಿಚಾರಿಕೆ - ಮನೋಹರ ಗ್ರಂಥಮಾಲಾ

7

ಸಾಹಿತ್ಯ ಪರಿಚಾರಿಕೆ - ಮನೋಹರ ಗ್ರಂಥಮಾಲಾ

Published:
Updated:
ಸಾಹಿತ್ಯ ಪರಿಚಾರಿಕೆ - ಮನೋಹರ ಗ್ರಂಥಮಾಲಾ

ವರಕವಿ ದ.ರಾ.ಬೇಂದ್ರೆ ನೇತೃತ್ವದ `ಗೆಳೆಯರ ಗುಂಪು~ ಕನ್ನಡ ಸಾಂಸ್ಕೃತಿಕ ಲೋಕದಲ್ಲಿನ ಮಧುರ ನೆನಪುಗಳಲ್ಲೊಂದು. ಈ ಗುಂಪಿನ ಗೆಳೆಯರು ರಚಿಸಿದ ಸಾಹಿತ್ಯ, ನಡೆಸಿದ ವಾಗ್ವಾದಗಳು ಇತಿಹಾಸಪ್ರಸಿದ್ಧ. ಇದೇ ಬಳಗ `ಸ್ವಧರ್ಮ~ ಮತ್ತು `ಜಯ ಕರ್ನಾಟಕ~ ಎನ್ನುವ ನಿಯತಕಾಲಿಕಗಳನ್ನು ಪ್ರಕಟಿಸುತ್ತಿತ್ತು. ಮುಂದೆ `ಗೆಳೆಯರ ಗುಂಪು~ ಚೂರಾಯಿತು. `ಜಯ ಕರ್ನಾಟಕ~  ಪತ್ರಿಕೆಯನ್ನು ಹೊರತರುತ್ತಿದ್ದ ಪ್ರಕಾಶನ ಸಂಸ್ಥೆ ಒಡೆದ ದೋಣಿಯಂತಾಯಿತು. ಆದರೆ, ಆ ಸಂಸ್ಥೆಯ ಕೆಲವು ಯುವಮಿತ್ರರು ಜಿ.ಬಿ. ಜೋಶಿ ಅವರ ನೇತತ್ವದಲ್ಲಿ ಪ್ರಕಾಶನದ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದರು. ಪ್ರಹ್ಲಾದ ನರೇಗಲ್ಲ, ಗೋವಿಂದ ಚುಳಕಿ ಹಾಗೂ ಬೆಟಗೇರಿ ಕಷ್ಣಶರ್ಮ ಅವರಲ್ಲಿ ಪ್ರಮುಖರು. ಈ ಪುನರುಜ್ಜೀವಿತ ಪ್ರಕಾಶನ ಸಂಸ್ಥೆಗೆ `ಮನೋಹರ ಗ್ರಂಥಮಾಲಾ~ ಎನ್ನುವ ಹೆಸರು ಸೂಚಿಸಿದ್ದು ಬೆಟಗೇರಿ ಕಷ್ಣಶರ್ಮ. ನಾಮಕರಣ ಮಾಡಿದ್ದು ಮಾತ್ರವಲ್ಲ, `ಸುದರ್ಶನ~ ಎನ್ನುವ ಕಾದಂಬರಿಯನ್ನೂ ಕೃಷ್ಣಶರ್ಮರು ಬರೆದರು. ಈ ಕಾದಂಬರಿ ಪ್ರಕಟಣೆ ಮೂಲಕ 1933ರಲ್ಲಿ ಗ್ರಂಥಮಾಲಾ ಅಧಿಕೃತವಾಗಿ ಪುಸ್ತಕಲೋಕಕ್ಕೆ ಕಾಲಿಟ್ಟಿತು.`ಜಡಭರತ~ ಎನ್ನುವ ಕಾವ್ಯನಾಮದಿಂದ ಬರವಣಿಗೆ ನಡೆಸುತ್ತಿದ್ದ ಜಿ.ಬಿ. ಜೋಶಿ ಗ್ರಂಥಮಾಲಾದ ಚಟುವಟಿಕೆಗಳಿಗೆ ಜೀವಜಲವಾದರು. ಬೇಂದ್ರೆ, ಗೋಕಾಕ್, ರಂ.ಶ್ರೀ. ಮುಗಳಿ ಅವರಂಥ ಹಿರಿಯರಿಂದ ಪುಸ್ತಕಗಳನ್ನು ಬರೆಸಿ ಪ್ರಕಟಿಸಿದರು.ಸಾಹಿತ್ಯ ಸಲಹೆಗಾರರಾಗಿ ಕೀರ್ತಿನಾಥ ಕುರ್ತಕೋಟಿ ಅವರ ಸೇರ್ಪಡೆಯೊಂದಿಗೆ ಗ್ರಂಥಮಾಲೆ ಹಲವು ಪ್ರಯೋಗಗಳಿಗೆ ತನ್ನನ್ನೊಡ್ಡಿಕೊಂಡಿತು. ಪ್ರಸ್ತುತ ಗಿರೀಶ ಕಾರ್ನಾಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.ಕಥೆ, ಕವಿತೆ, ಕಾದಂಬರಿ, ನಾಟಕ, ಜೀವನಚರಿತ್ರೆ, ವಿಚಾರ, ವಿಮರ್ಶೆ ಸೇರಿದಂತೆ ಗ್ರಂಥಮಾಲೆ ಪ್ರಕಟಿಸದ ಸಾಹಿತ್ಯಪ್ರಕಾರಗಳೇ ಇಲ್ಲ. `ಮರಳಿ ಮಣ್ಣಿಗೆ~ (ಶಿವರಾಮ ಕಾರಂತ), `ಸಮರಸವೇ ಜೀವನ~ (ವಿ.ಕೃ. ಗೋಕಾಕ್), `ಗಂಗವ್ವ ಗಂಗಾಮಾಯಿ~ (ಶಂಕರಮೊಕಾಶಿ ಪುಣೇಕರ), `ನಿಸರ್ಗ~ (ಮಿರ್ಜಿ ಅಣ್ಣಾರಾಯ), `ಗ್ರಾಮಾಯಣ~ (ರಾವ್ ಬಹದ್ದೂರ್), `ಸಂಸ್ಕಾರ~ (ಯು.ಆರ್. ಅನಂತಮೂರ್ತಿ),  `ಕಾಡು~ (ಶ್ರೀಕೃಷ್ಣ ಆಲನಹಳ್ಳಿ), `ತುಘಲಕ್~ (ಗಿರೀಶ ಕಾರ್ನಾಡ), `ಋಷ್ಯಶೃಂಗ~ (ಚಂದ್ರಶೇಖರ ಕಂಬಾರ) ಸೇರಿದಂತೆ ಕನ್ನಡದ ಹಲವು ಮೇರುಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ಗ್ರಂಥಮಾಲೆಯದು. ಇಷ್ಟು ಮಾತ್ರವಲ್ಲ -- ಹನ್ನೊಂದು ಜನ ಲೇಖಕರು ಪಾಲ್ಗೊಂಡ ಬರವಣಿಗೆಯ ಆಟ `ಖೋ~ ಎನ್ನುವ ಕಾದಂಬರಿ, `ನಡೆದುಬಂದ ದಾರಿ~ ಹಾಗೂ `ಪುಟ ಬಂಗಾರ~ ಸಂಪುಟಗಳು -- ಇವು, ಗ್ರಂಥಮಾಲೆಯ ಕೆಲವು ಸಾಹಿತ್ಯ ಪ್ರಯೋಗಗಳು.ಪುಸ್ತಕ ಪ್ರಕಟಣೆ ಮಾತ್ರವಲ್ಲ, ಸಾಂಸ್ಕೃತಿಕ ವಾಗ್ವಾದಕ್ಕೆ ವೇದಿಕೆಯಾದುದು ಹಾಗೂ ಓದುವ ಅಭಿರುಚಿಯನ್ನು ಬೆಳೆಸಿದ್ದು ಕೂಡ ಗ್ರಂಥಮಾಲಾದ ಪ್ರಮುಖ ಸಾಧನೆ. ಗ್ರಂಥಮಾಲಾದ `ಅಟ್ಟ~ ಕನ್ನಡದ ಅನೇಕ ಸಾಂಸ್ಕೃತಿಕ ಚೇತನಗಳನ್ನು ಪ್ರಭಾವಿಸಿದೆ. ಈ ಬಳಗದ `ಶರದೋತ್ಸವ~ ಹಾಗೂ `ವಸಂತ ಸಾಹಿತ್ಯೋತ್ಸವ~ಗಳು ಸಾಹಿತ್ಯ ಸಮ್ಮೇಳನಗಳ ರೂಪದಲ್ಲಿ ಕಾರ್ಯನಿರ್ವಹಿಸಿವೆ.1993ರಲ್ಲಿ ಜಿ.ಬಿ. ಜೋಶಿ ಅವರ ನಿಧನದ ನಂತರ `ಮನೋಹರ ಗ್ರಂಥಮಾಲಾ~ದ ಜವಾಬ್ದಾರಿಯನ್ನು ರಮಾಕಾಂತ ಜೋಶಿ ನಿರ್ವಹಿಸುತ್ತಿದ್ದಾರೆ. ಅವರ ಮಗ ಸಮೀರ ಜೋಶಿ ಮುದ್ರಣ ತಂತ್ರಜ್ಞಾನದಲ್ಲಿ ಪದವೀಧರರಾಗಿದ್ದು, ಗ್ರಂಥಮಾಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೋಶಿಯವರ ಸ್ಮರಣಾರ್ಥ `ಜಡಭರತ ಪ್ರಕಾಶನ~ ಎನ್ನುವ ಮಕ್ಕಳ ಸಾಹಿತ್ಯಕ್ಕಾಗಿಯೇ ಮೀಸಲಾದ ಪ್ರತ್ಯೇಕ ಪ್ರಕಾಶನ ಬಳಗವೊಂದನ್ನು ಸಮೀರರು ರೂಪಿಸಿದ್ದಾರೆ.ಕನ್ನಡದ ಅತ್ಯಂತ ಹಳೆಯ ಪ್ರಕಾಶನ ಸಂಸ್ಥೆಗಳಲ್ಲೊಂದಾದ `ಮನೋಹರ ಗ್ರಂಥಮಾಲಾ~ ಈಗ ಪುಸ್ತಕ ಪ್ರಕಟಣೆ ಸಂಸ್ಥೆಯಾಗಿಯಷ್ಟೇ ಉಳಿದಿಲ್ಲ. ಕನ್ನಡ ಪುಸ್ತಕ ಸಂಸ್ಕೃತಿ ಬೆಳೆದು ಬಂದ ದಾರಿಗೆ ಸಾಕ್ಷಿಯಾಗಿ, ಕನ್ನಡ ಓದುಗರ ಪ್ರಜ್ಞಾವಂತಿಕೆಯ ಪ್ರತೀಕವಾಗಿ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ. ಚಂದಾದಾರರ ಮೂಲಕ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವುದು ಗ್ರಂಥಮಾಲಾದ ಇನ್ನೊಂದು ವಿಶೇಷ.

 

ವಿಳಾಸ: ಮನೋಹರ ಗ್ರಂಥಮಾಲಾ, ಲಕ್ಷ್ಮೀ ಭವನ, ಸುಭಾಷ ರಸ್ತೆ, ಧಾರವಾಡ - 1

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry