ಸಾಹಿತ್ಯ ಪರಿಚಾರಿಕೆ ಲೋಹಿಯಾ ಪ್ರಕಾಶನ

7

ಸಾಹಿತ್ಯ ಪರಿಚಾರಿಕೆ ಲೋಹಿಯಾ ಪ್ರಕಾಶನ

Published:
Updated:
ಸಾಹಿತ್ಯ ಪರಿಚಾರಿಕೆ ಲೋಹಿಯಾ ಪ್ರಕಾಶನ

ನವ್ಯ ಪರಂಪರೆಯ ಬರಹಗಾರರ ಮೇಲೆ ರಾಮಮನೋಹರ ಲೋಹಿಯಾ ಪ್ರಭಾವ ಬೀರಿದರೆ, ಲೋಹಿಯಾ ಹೆಸರಿನ ಪ್ರಕಾಶನ ಸಂಸ್ಥೆ ಕನ್ನಡ ಪುಸ್ತಕೋದ್ಯಮದಲ್ಲಿ ತನ್ನ ಛಾಪು ಮೂಡಿಸಿದೆ. ಈ ಪ್ರಕಾಶನದ ಅನನ್ಯತೆ ಇರುವುದು ಹೊಸ ಬರಹಗಾರರ ಕೃತಿಗಳ ಪ್ರಕಟಣೆಯಲ್ಲಿ, ಅದರಲ್ಲೂ ಕವನ ಸಂಕಲನಗಳನ್ನು ಹೊರತಂದಿರುವುದರಲ್ಲಿ.

ಎಲೆಮರೆ ಕಾಯಿಯಂತಿದ್ದ ಅನೇಕ ಯುವ ಬರಹಗಾರರನ್ನು ಬೆನ್ನುತಟ್ಟಿ ಸಾಹಿತ್ಯದ ಆಖಾಡಕ್ಕಿಳಿಸಿದ ಅಗ್ಗಳಿಕೆ ಪ್ರಕಾಶನದ್ದು. ಗೀತಾ ನಾಗಭೂಷಣ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ `ಬದುಕು~, ಎಚ್. ನಾಗವೇಣಿ ಅವರ `ಗಾಂಧಿ ಬಂದ~, ಕೆ.ವಿ. ನಾರಾಯಣರ `ನಮ್ಮಡನೆ ನಮ್ಮ ನುಡಿ~ಯಂಥ ಅಪರೂಪದ ಕೃತಿಗಳೂ `ಲೋಹಿಯಾ ಪ್ರಕಾಶನ~ದಿಂದ ಹೊರಬಂದಿವೆ.ಪ್ರತಿ ವರ್ಷ, ಲೋಹಿಯಾ ಜನ್ಮದಿನದಂದು (ಮಾ. 23) ಪ್ರಕಾಶನದಿಂದ ಪುಸ್ತಕಹಬ್ಬ ನಡೆಯುತ್ತದೆ. ಅಂದು, ಸಂಸ್ಥೆಯ ಪ್ರಕಟಣೆಗಳು ನಾಡಿನ ವಿವಿಧ ಭಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತವೆ. ಇದು ಲೋಹಿಯಾ ಸ್ಮರಣೆಯೊಂದಿಗೆ, ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪಲು ಪ್ರಕಾಶನ ಸಂಸ್ಥೆ ಕಂಡುಕೊಂಡಿರುವ ಉಪಾಯವಾಗಿದೆ.ಬಳ್ಳಾರಿಯನ್ನು ವಿಳಾಸವಾಗುಳ್ಳ `ಲೋಹಿಯಾ ಪ್ರಕಾಶನ~ ಹೈದ್ರಾಬಾದ್ ಕರ್ನಾಟಕ ಭಾಗಕ್ಕಷ್ಟೇ ಸೀಮಿತಗೊಳ್ಳದೆ ನಾಡಿನ ಹೆಮ್ಮೆಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿರುವುದರ ಹಿಂದೆ ಚನ್ನಬಸವಣ್ಣನವರ ಶ್ರಮವಿದೆ. ಮೊದಲಿಗೆ ಗೆಳೆಯರೊಂದಿಗೆ ಕೂಡಿಕೊಂಡು ಆರಂಭಿಸಿದ ಈ ಪುಸ್ತಕ ಪರಿಚಾರಿಕೆ, ಈಗ ಅವರೊಬ್ಬರನ್ನೇ ಅವಲಂಬಿಸಿದೆ. ಈ ಪ್ರಕಾಶನ ಪರಿಚಾರಿಕೆಯ ಹಿಂದೆ ಚನ್ನಬಸವಣ್ಣನವರ ಸಾಹಿತ್ಯಾಸಕ್ತಿ ಹಾಗೂ ಚಳವಳಿಯ ದಿನಗಳ ಬದ್ಧತೆ-ಗ್ರಹಿಕೆಯಿದೆ. ಬ್ಯಾಂಕ್ ಅಧಿಕಾರಿಯಾಗಿ ದುಡಿದು ನಿವೃತ್ತರಾಗಿರುವ ಅವರೀಗ ಪೂರ್ಣಾವಧಿ ಪ್ರಕಾಶಕರು. ಆ ಕಾರಣದಿಂದಲೇ ಅನಿಯಮಿತವಾಗಿದ್ದ ಪುಸ್ತಕ ಪ್ರಕಟಣೆ ಚಟುವಟಿಕೆಗಳು ಈಗ ಗರಿಗೆದರಿವೆ.ಬಳ್ಳಾರಿ ಪರಿಸರದಲ್ಲಿ ಇಂದು ಎರಡು ಮೂರು ಹೊಸ ಪ್ರಕಾಶನ ಸಂಸ್ಥೆಗಳು ಹುಮ್ಮಸ್ಸಿನಿಂದ ಪುಸ್ತಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ, ಅವುಗಳ ಹಿಂದೆ `ಲೋಹಿಯಾ ಪ್ರಕಾಶನ~ದ ಪ್ರಭಾವ-ಪ್ರೇರಣೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry