ಮಂಗಳವಾರ, ಆಗಸ್ಟ್ 20, 2019
25 °C
ಸ್ವಾತಂತ್ರ್ಯದ ತೊರೆಗಳು 3

ಸಾಹಿತ್ಯ ಪರಿಷತ್ತು: ಸ್ವಾತಂತ್ರ್ಯ ಆಂದೋಲನ

Published:
Updated:

ಸುಮಾರು ನೂರು ವರ್ಷಗಳಿಂದ ಕನ್ನಡ ನಾಡಿನ ಭಾಷೆ, ಸಂಸ್ಕೃತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಭಾರತದ ಸ್ವಾತಂತ್ರ್ಯ ಆಂದೋಲನಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಬಿಡಿಸಲಾಗದ ಸಂಬಂಧಗಳಿರುವುದೊಂದು ವಿಶೇಷ. 1914ರ ಕೊನೆಗೆ ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿಗಾಗಿ ಸಂಸ್ಥೆಯೊಂದನ್ನು ಆರಂಭಿಸುವ ನಿರ್ಧಾರಕ್ಕೆ ಬರಲಾಗಿತ್ತು. ಮೈಸೂರು ಸಂಪದಭ್ಯುದಯ ಸಮಾಜದ ಅಡಿಯಲ್ಲಿ ರೂಪುಗೊಂಡ ವಿದ್ಯಾ ವಿಷಯದ ಮಂಡಲಿಯ ಮೂಲಕ ಎಚ್.ವಿ.ನಂಜುಂಡಯ್ಯ ಅವರು ಅಭಿಪ್ರಾಯ ಸಂಗ್ರಹಿಸುವ ಕೆಲಸದಲ್ಲಿ ತೊಡಗಿರುವ ಕಾಲಕ್ಕೆ ಈ ಕುರಿತ ಸಮ್ಮೇಳನವೊಂದನ್ನು ಏರ್ಪಡಿಸುವುದಕ್ಕೆ ಅಭಿಮತ ಬಂತು. ಹೀಗಾಗಿ ಸಮ್ಮೇಳನ 1915ರ ಮೇ 3ಕ್ಕೆ ವ್ಯವಸ್ಥೆಯಾಗಿ ನಾಲ್ಕು ದಿನಗಳ ಕಾಲ ನಡೆಯಿತು. ಬೆಂಗಳೂರು ಸರ್ಕಾರಿ ಹೈಸ್ಕೂಲ್ (ಪ್ರಸ್ತುತ ಇದು ಕೋಟೆ ಪ್ರೌಢಶಾಲೆ)ನಲ್ಲಿ ನಡೆದ ಸಮ್ಮೇಳನದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ಕನ್ನಡ ಸಾಹಿತ್ಯ ಪರಿಷತ್ತು .ಕರ್ನಾಟಕದ ಎಲ್ಲಾ ಭಾಗಗಳಿಂದ ಮಾತ್ರವಲ್ಲದೆ ಮುಂಬೈ-ಮದ್ರಾಸ್ ನಗರಗಳಿಂದಲೂ ಕನ್ನಡದ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ಚಿಂತಕರು, ಅಧ್ಯಾಪಕರು ಸಕ್ರಿಯವಾಗಿ ಪಾಲ್ಗೊಂಡು ಪರಿಷತ್ತಿನ ಪ್ರಾರಂಭಕ್ಕೆ ನಾಂದಿ ಹಾಡಿದರು. ಆ ವೇಳೆಗಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರ ಹೆಸರು ಕೇಳಿಬರುತ್ತಿತ್ತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀ ಸಂಘಟಿಸಿದ್ದ ಚಳವಳಿ ಭಾರತವೂ ಸೇರಿದಂತೆ ವಿಶ್ವದ ಗಮನ ಸೆಳೆಯಿತು.ತಾಯ್ನೊಡಿನಲ್ಲಿ ಚಳವಳಿಯ ಮುಖಂಡತ್ವ ವಹಿಸುವುದಕ್ಕೆ ಮುನ್ನ ಭಾರತವನ್ನೆಲ್ಲಾ ಸುತ್ತುತ್ತಿದ್ದ ಬಾಪೂಜಿ ಬೆಂಗಳೂರಿಗೂ ಬಂದರು. ಮೈಸೂರು ದೇಶ ಸೇವಾ ಸಂಘದ ಉದ್ಘಾಟನೆ ಹಾಗೂ ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರ ಅನಾವರಣಗೊಳಿಸುವ ಕಾರ್ಯಕ್ರಮ 1915ರ ಮೇ 8ರಂದು ನಿಗದಿಯಾಗಿತ್ತು. ಇದು ಏರ್ಪಾಡಾಗಿದ್ದು ಸರ್ಕಾರಿ ಆರ್ಟ್ಸ್ ಕಾಲೇಜು ಸಭಾಂಗಣದಲ್ಲಿ (ಸೆಂಟ್ರಲ್ ಕಾಲೇಜು ಮುಂಭಾಗ).ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಮಹನೀಯರಲ್ಲಿ ಬಹುತೇಕ ಮಂದಿ ಮಹಾತ್ಮಾ ಗಾಂಧಿ ಅವರು ಬೆಂಗಳೂರಿನಲ್ಲಿ ಭಾಗವಹಿಸಿದ್ದ ಸಭೆಗೆ ಸಾಕ್ಷಿಯಾದರು. ಬಾಪು ಅಂದು ಭೇಟಿ ನೀಡಿದ ಕಲಾ ಕಾಲೇಜಿನ ಸಭಾಂಗಣಕ್ಕೆ ಬಾಪೂಜಿ ಸಭಾಂಗಣವೆಂದು ಹೆಸರಿಡಲಾಗಿದೆ. ಗಾಂಧಿ ಆ ದಿನ ಅನಾವರಣಗೊಳಿಸಿದ ಗೋಖಲೆಯವರ ಭಾವಚಿತ್ರ ಈಗಲೂ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನೋಡಲು ಲಭ್ಯ. ಬಾಪೂ ಅವರ ಬೆಂಗಳೂರಿನ ಮೊದಲ ಭೇಟಿಯ ಆಸುಪಾಸಿನಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯ ನಾನಾರಾಯರ ಮನೆಯ ಕೊಠಡಿಯಲ್ಲಿ ಕಾರ್ಯಾರಂಭ ಮಾಡಿತು. 1923ರ ಸುಮಾರಿಗೆ ಶಂಕರಪುರದ ಮನೆಯೊಂದನ್ನು 30 ರೂಪಾಯಿ ಮಾಸಿಕ ಬಾಡಿಗೆಗೆ ಹಿಡಿದು ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಲಾಯಿತು. ಆಗ ಪರಿಷತ್ತಿನ ನೇತೃತ್ವ ವಹಿಸಿದ್ದ ಕರ್ಪೂರ ಶ್ರೀನಿವಾಸ ರಾಯರಿಗೆ ಇದೇ ಸ್ಥಳದ ಅಕ್ಕಪಕ್ಕ ನಿವೇಶನವೊಂದನ್ನು ಪಡೆದು ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಯತ್ನಿಸಬಹುದೆಂಬ ಯೋಚನೆ ಹೊಳೆಯಿತು.  ನಿವೇಶನಕ್ಕಾಗಿ ತಲಾಶು ನಡೆದು ಕೊನೆಗೆ ಶಂಕರ ಮಠದ ರಸ್ತೆಯಲ್ಲಿದ್ದ ಸರ್ಕಾರಿ ಶಾಲೆಯೊಂದರ ಸ್ವಲ್ಪ ಭಾಗವನ್ನು ಪರಿಷತ್ತಿಗೆ ದೊರಕಿಸಿಕೊಂಡರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಮೂಡಿಬಂತು.ಆಗ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ಬೆಳ್ಳಾವೆ ವೆಂಕಟ ನಾರಾಯಣಪ್ಪನವರ ವಿದ್ಯಾರ್ಥಿಗಳಾಗಿದ್ದ ಮಿರ್ಜಾ ಇಸ್ಮಾಯಿಲ್ ಮೈಸೂರಿನ ದಿವಾನರು.ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗಿ ಶಾಲೆಯ ಒಂದು ಭಾಗವನ್ನು ಪರಿಷತ್ತಿಗೆ ನೀಡಬಹುದೆಂದು ಅಧಿಕಾರಿಗಳು ಸಮ್ಮತಿ ಸೂಚಿಸಿದ್ದರು. ಆದರೆ, ಮಿರ್ಜಾ ಅವರ ಯೋಚನೆ ರಾಷ್ಟ್ರೀಯ ಚಳವಳಿ ಬಿರುಸಿನಿಂದ ಸಾಗಿದ್ದ ಸಮಯ ಅದು. ಬೆಂಗಳೂರು ಸ್ವಾತಂತ್ರ್ಯ ಹೋರಾಟದ ಚಕ್ರದಲ್ಲಿ ಓಡುತ್ತಿತ್ತು. ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಾಗ ಆಗಮಿಸಿ ಸ್ಥಳೀಯ ಜನತೆಗೆ ಉತ್ಸಾಹ ತುಂಬುತ್ತಿದ್ದರು. ಬೆಂಗಳೂರು ಕೋಟೆ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದ್ದ ರಸ್ತೆಯನ್ನು ಹಾರ್ಡಿಂಜ್ ರಸ್ತೆಯೆಂದು ಕರೆಯಲಾಗುತ್ತಿತ್ತು. ಈ ರಸ್ತೆಯ ಬದಿಯಲ್ಲೊಂದು ಮೈದಾನವಿತ್ತು. ಒಂದಿಷ್ಟು ಹೊಂಗೆಮರಗಳನ್ನು ಹೊರತುಪಡಿಸಿದರೆ ಅದೊಂದು ಬಟಾಬಯಲು ಪ್ರದೇಶ. ಇದೇ ಸ್ಥಳದಲ್ಲಿ ಸ್ವಾತಂತ್ರ್ಯ ಪ್ರೇಮಿಗಳ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಆ ಬಯಲು ಪ್ರದೇಶದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟದ ಮುಖಂಡರು ಭಾಷಣ ಮಾಡಲು ಬರುತ್ತಿದ್ದರು. ಅಕ್ಕಪಕ್ಕದ ಪೇಟೆ ಮತ್ತು ಬಡಾವಣೆಗಳಿಂದ ಜನರ ಸಂಖ್ಯೆಯೂ ಅಲ್ಲಿರುತ್ತಿತ್ತು. ಕಾಲಕ್ರಮೇಣ ಗಾಂಧೀ ಮೈದಾನ ಎಂಬ ಹೆಸರು ಕೂಡ ಆ ಖಾಲಿ ಜಾಗಕ್ಕೆ ಬಂದಿತು. ಈ ಖಾಲಿ ಜಮೀನು ಆಡಳಿತದಲ್ಲಿದ್ದ ಜನರಿಗೆ ತಲೆನೋವಾಗಿತ್ತು. ಸದಾ ಚಟುವಟಿಕೆಗಳ ಬುಗ್ಗೆಯಾಗಿದ್ದ ಈ ಬಯಲು ಪ್ರದೇಶದಿಂದ ಸ್ವಾತಂತ್ರ್ಯ ಚಳವಳಿಯನ್ನು ದೂರ ತಳ್ಳುವ ಪ್ರಯತ್ನಕ್ಕಾಗಿ ಸರ್ಕಾರ ಕಾದು ಕುಳಿತಿತ್ತು.ದಿವಾನರಾದ ಮಿರ್ಜಾ ಇಸ್ಮಾಯಿಲ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಕೆಡವಿದರು. ಆ ಬಯಲು ಪ್ರದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತವಾಗಿ ನೀಡುವ ಔದಾರ್ಯ ತೋರಿದರು. ಹೀಗಾಗಿ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ಅನಾಯಾಸವಾಗಿ ದೊಡ್ಡದೊಂದು ಜಾಗ ಸಿಕ್ಕಿತು. ಆದರೆ, ಸ್ವಾತಂತ್ರ್ಯ ಹೋರಾಟದ ಅನೇಕ ಕಾರ್ಯಕ್ರಮಗಳಿಗೆ ಸ್ಥಳವಾಗಿದ್ದ ಆ ಪ್ರದೇಶದಲ್ಲಿ ಸಾಹಿತ್ಯ ಪರಿಷತ್ತಿನ ಕಟ್ಟಡ ಎದ್ದಿತು. ಸಾಹಿತ್ಯ ಪರಿಷತ್ತಿನ ನಿವೇಶನ ಬೇಡಿಕೆಯನ್ನೂ ಈಡೇರಿಸಿದ್ದರ ಜೊತೆಗೆ ಆ ಸ್ಥಳದಲ್ಲಿ ಆವರೆಗೆ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಸಭೆಗಳನ್ನು ನಡೆಯದಂತೆ ಮಿರ್ಜಾ ಇಸ್ಮಾಯಿಲ್ ಬಹಳ ಜಾಣತನ ತೋರಿದರು. ಆ ರಸ್ತೆಗೆ ಈಗ ಕನ್ನಡದ ಆದಿ ಕವಿ ಪಂಪನ ಹೆಸರಿಡಲಾಗಿದೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿ, ಸಭಾಂಗಣ, ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ.

 

Post Comments (+)