ಸಾಹಿತ್ಯ ಪ್ರೇಮಿಗಳಿಗೆ ಅಕ್ಷರದ ಔತಣ..

7

ಸಾಹಿತ್ಯ ಪ್ರೇಮಿಗಳಿಗೆ ಅಕ್ಷರದ ಔತಣ..

Published:
Updated:

ಬೆಂಗಳೂರು: ವಾರಾಂತ್ಯದಲ್ಲಿ ಜನಜಂಗುಳಿಯನ್ನು ಕಂಡಿದ್ದ ನಗರದ ಅರಮನೆ ಮೈದಾನದ ಪುಸ್ತಕೋತ್ಸವಕ್ಕೆ ಮಂಗಳವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾಲಂಕೃತ ದೀಪಗಳ ನಡುವೆಯೇ ಸುಮಾರು 300ಕ್ಕೂ ಅಧಿಕ ಪುಸ್ತಕ ಮಳಿಗೆಗಳಲ್ಲಿ ಪೇರಿಸಿಟ್ಟ ಪುಸ್ತಕಗಳು ಜನರನ್ನು ಆಕರ್ಷಿಸಿದವಾದರೂ, ಕೊಂಡುಕೊಂಡವರ ಸಂಖ್ಯೆ ಕಡಿಮೆಯಿತ್ತು.ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಬಂಗಾಳಿ, ಮರಾಠಿ, ಉರ್ದು ಸೇರಿದಂತೆ ವಿವಿಧ ಭಾಷೆಯ ಸಾಹಿತ್ಯ ಪ್ರೇಮಿಗಳಿಗೆ ಅಕ್ಷರದ ಔತಣ ನೀಡಲು ಲಕ್ಷಾಂತರ ಪುಸ್ತಕಗಳಿದ್ದವು. ಕೇವಲ ಕತೆ ಕಾದಂಬರಿಯಲ್ಲದೇ ವಿಜ್ಞಾನ, ಅಧ್ಯಾತ್ಮ, ಕಲೆ, ಸಂಸ್ಕೃತಿ, ವಿಶ್ವಕೋಶ, ಬಗೆ ಬಗೆಯ ನಿಘಂಟುಗಳು ಸೇರಿದಂತೆ ವಿವಿಧ ಅಭಿರುಚಿಯ ಪುಸ್ತಕಗಳಿದ್ದವು.ಚಿಲ್ಡ್ರನ್ ಬುಕ್ ಪ್ರಕಾಶನದ ಮಳಿಗೆಯಲ್ಲಿ ಚಿಣ್ಣರಿಗಾಗಿಯೇ ಪದಬಂಧ, ಅಟ್ಲಾಸ್, ಚಿತ್ರಕಲೆ, ವ್ಯಂಗ್ಯಚಿತ್ರ, ವಿಜ್ಞಾನ, ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಪುಸ್ತಕಗಳಿಗೆ ಶೇ 20 ರಷ್ಟು ರಿಯಾಯಿತಿ ನೀಡಲಾಗಿತ್ತು. ಪೆಂಗ್ವಿನ್ ಪ್ರಕಾಶನವು `ಮಾಲ್ಗುಡಿ ಡೇಸ್', ಪ್ರೇಮಚಂದ್ರರ ಸಣ್ಣಕತೆಗಳನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಿತು. ಪುಸ್ತಕೋತ್ಸವದಲ್ಲಿ ಭಾಗಿಯಾಗಿದ್ದವರಲ್ಲಿ ಕೆಲವು ಆನ್‌ಲೈನ್‌ನಲ್ಲಿಯೇ ಪುಸ್ತಕಗಳನ್ನು ಓದಲು ಇಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ತಾಂತ್ರಿಕತೆಯಿಂದ ಅನುಕೂಲಗಳಿದ್ದಷ್ಟೇ ಅನಾನುಕೂಲಗಳೂ ಇವೆ ಎಂದು ಅಭಿಪ್ರಾಯಪಟ್ಟರು.ಆಗಷ್ಟೆ ಅಕ್ಷರ ಲೋಕಕ್ಕೆ ಕಾಲಿಟ್ಟ ಹೊಸ ಪುಸ್ತಕಗಳಿಗಾಗಿ ಮಳಿಗೆಯಿಂದ ಮಳಿಗೆಗೆ ಸಾಹಿತ್ಯಾಸಕ್ತರು ತಡಕಾಡಿದರೆ, ಪಠ್ಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ಉತ್ಸವದಲ್ಲಿ ದೊರೆಯಬಹುದೆಂಬ ನಿರೀಕ್ಷೆಯಲ್ಲಿಯೇ ವಿದ್ಯಾರ್ಥಿಗಳಿಂದ ಮಳಿಗೆಗಳಿಗೆ ಪ್ರದಕ್ಷಿಣೆ ನಡೆದಿತ್ತು. ಇಂಗ್ಲಿಷ್-ಕನ್ನಡ ಭಾಷೆಯ ಪುಟ್ಟ ನಿಘಂಟುಗಳು ಸಹ 10 ರೂಪಾಯಿಗೆ ಮಾರಾಟವಾಯಿತು.  ಈ ಮಳಿಗೆಗಳ ಮಧ್ಯೆ ಇದ್ದ ಬೊಂಡ, ಬಜ್ಜಿ ತರಹೇವಾರಿ ತಿಂಡಿ ತಿನಿಸುಗಳ ಮಳಿಗೆಗಳು ಜಾತ್ರೆಯನ್ನು ನೆನೆಪಿಸುವಂತಿತ್ತು. ಪುಸ್ತಕ ಮಾರಾಟದ ಲಾಭ ನಷ್ಟಗಳ ಕುರಿತು ಪ್ರಕಾಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಭಾಗ್ಯಲಕ್ಷಿ ಪ್ರಕಾಶನ ಮಳಿಗೆಯ ಸುರೇಶ್, `ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪುಸ್ತಕ ಕೊಂಡುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಿದೆ. ಈವರೆಗೆ ಮಳಿಗೆಗೆ ಬಾಡಿಗೆ ತೆರುವಷ್ಟು ಲಾಭ ಗಳಿಸಲು ಸಾಧ್ಯವಾಗಿಲ್ಲ' ಎಂದು ಅಳಲು ತೊಡಿಕೊಂಡರು.`ಈ ಉತ್ಸವದಲ್ಲಿ ಮಳಿಗೆ ತೆರೆಯಲು  ಪ್ರಕಾಶಕರು ಹದಿಮೂರು ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ಆ ಹಣವನ್ನು ಈ ಮೂರು ದಿನದೊಳಗೆ ಗಳಿಸಲು ಸಾಧ್ಯವಾಗಿಲ್ಲ. ಜನ ಬರುತ್ತಾರೆ, ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಾರಷ್ಟೆ, ಕೊಂಡುಕೊಳ್ಳುವುದಿಲ್ಲ. ಆಯೋಜಕರು ಸಾಹಿತ್ಯೋತ್ಸವಕ್ಕೆ ನೀಡಿದ ಪ್ರಚಾರವನ್ನು ಪುಸ್ತಕೋತ್ಸವಕ್ಕೆ ನೀಡಿಲ್ಲ' ಎಂದು ದೂರಿದರು.ಟ್ಯಾಗೋರ್ ತೆಲಗು ಪಬ್ಲಿಷಿಂಗ್ ಹೌಸ್‌ನ ಸಂಪತ್, ` ತೆಲುಗು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಎಲ್ಲ ರೀತಿಯ ಪುಸ್ತಕಗಳನ್ನು ಮಳಿಗೆಯಲ್ಲಿ ಇಡಲಾಗಿದೆ. ಉತ್ಸವ ಇನ್ನು ಒಂದು ವಾರ ನಡೆಯುವುದರಿಂದ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಂಬ ನಿರೀಕ್ಷೆಯಿದೆ' ಎಂದು ಹೇಳಿದರು.ಪೆಂಗ್ವಿನ್ ಮಳಿಗೆಯ ರಾಕೇಶ್, `ಈ ಬಾರಿ ರಿಯಾಯಿತಿ ದರದಲ್ಲಿ ಸಣ್ಣ ಕತೆಗಳು, ಬೃಹತ್ ಕಾದಂಬರಿಗಳನ್ನು ಮಾರಾಟ ಮಾಡಲಾಗಿದೆ. ವಾರಾಂತ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒತ್ತಡದ ಜೀವನವಿದ್ದರೂ ಪುಸ್ತಕದ ಪ್ರೀತಿ ಇಟ್ಟುಕೊಂಡುವವರ ಸಂಖ್ಯೆ ಇದ್ದೇ ಇದೆ' ಎಂದು ಹೇಳಿದರು.ಪುಸ್ತಕ ಪ್ರೇಮಿಗಳ ಮಾತು...

ಬೆಂಗಳೂರಿನಲ್ಲಿ ಇನ್ನು ಪುಸ್ತಕ ಪ್ರೀತಿ ಉಳಿದಿರುವುದು ಕಂಡು ಸಂತಸವಾಗುತ್ತಿದೆ. ಇಲ್ಲಿ ಇಷ್ಟು ಸಂಖ್ಯೆಯಲ್ಲಿ ಪುಸ್ತಕೋತ್ಸವಕ್ಕೆ ಜನರು ಆಗಮಿಸಿ ಪುಸ್ತಕವನ್ನು ಕೊಳ್ಳುವುದನ್ನು ನೋಡಿದರೆ, ಇನ್ನು ಪುಸ್ತಕ ಓದುವ ಹವ್ಯಾಸ ಅಥವಾ ಅಭ್ಯಾಸವನ್ನು ಉಳಿಸಿಕೊಂಡವರು ಇದ್ದಾರೆ ಎಂಬುದನ್ನು ನೋಡಿ ಸಮಾಧಾನವಾಗುತ್ತಿದೆ

- ಡಾ.ಸಿ. ನಾಗಣ್ಣ, ಕಂಪ್ಯಾರಿಟಿವ್ ಲಿಟರೇಚರ್‌ನ ಪ್ರಾಧ್ಯಾಪಕ ಮತ್ತು ಸಾಹಿತಿ

ಇಂತಹ ಕಂಪ್ಯೂಟರ್ ಮತ್ತು ಆನ್‌ಲೈನ್  ಕಾಲದಲ್ಲಿಯೂ ಕೂಡ ಪುಸ್ತಕ ಕೊಳ್ಳುವವರಿದ್ದಾರೆ ಎಂಬುದು ಸಮಾಧಾನದ ಸಂಗತಿಯಾಗಿದೆ. ಪ್ರಿಂಟ್ ಆಗಿರುವ ಪುಸ್ತಕಗಳು ಕೆಲವೊಮ್ಮೆ ಹುಟ್ಟಿದ ದಿನದ ಅಥವಾ ವಿಶೇಷ ದಿನಗಳಂದು ಉಡುಗೊರೆಗಳಾಗಿ ವಿನಿಮಯವಾಗುತ್ತವೆ. ಅಲ್ಲದೇ, ಪುಸ್ತಕಗಳು ಸಮಾಜವನ್ನು ತಿದ್ದುವ ಸಾಮರ್ಥ್ಯವನ್ನು ಹೊಂದಿವೆ

-ರಿಗ್ರೇಟ್ ಅಯ್ಯರ್, ಲೇಖಕ

ನನಗೆ ಆನ್‌ಲೈನ್‌ನಲ್ಲಿಯೇ ಪುಸ್ತಕವನ್ನು ಓದಲು ಹೆಚ್ಚು ಇಷ್ಟವಾಗುತ್ತದೆ. ಪುಸ್ತಕದ ಅಂಗಡಿಗೆ ಹೋಗಿ ಪುಸ್ತಕಗಳನ್ನು ಕೊಂಡು ಓದುವುದು ಸಾಧ್ಯವಾಗುವುದಿಲ್ಲ. ಆನ್‌ಲೈನ್‌ನಲ್ಲಿ ಓದಲು ಬೇಸರವಾದರೆ, ವಿಡಿಯೋಗಳನ್ನು ಸಹ ನೋಡುವ ಸಾಧ್ಯತೆಯಿದೆ

-ಸೌಮ್ಯ ಭಾತ್ರಿ, ಅಧ್ಯಾಪಕಿ

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕಗಳು ನೀಡುವ ಬೆಚ್ಚಿಗಿನ ಭಾವನೆಯನ್ನು ಆನ್‌ಲೈನ್ ಮಾಧ್ಯಮಗಳು ನೀಡುವುದಿಲ್ಲ. ಕೊನೆಗೆ ಜನರು ಪುಸ್ತಕದ ಪ್ರೀತಿಗೆ ಒಳಗಾಗುತ್ತಾರೆ

-ಪ್ರಕಾಶ್, ಪುಸ್ತಕದ ಮಾರಾಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry