ಸಾಹಿತ್ಯ ಭಂಡಾರ, ಗದಗ ಸಂಸ್ಥೆಗೆ ಪ್ರಶಸ್ತಿ

7

ಸಾಹಿತ್ಯ ಭಂಡಾರ, ಗದಗ ಸಂಸ್ಥೆಗೆ ಪ್ರಶಸ್ತಿ

Published:
Updated:

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಅತ್ಯುತ್ತಮ ಪುಸ್ತಕ ಪ್ರಕಾಶನ ಪ್ರಶಸ್ತಿ’ 2009ನೇ ಸಾಲಿನಲ್ಲಿ ಬೆಂಗಳೂರಿನ ಸಾಹಿತ್ಯ ಭಂಡಾರಕ್ಕೆ ಮತ್ತು 2010ನೇ ಸಾಲಿನಲ್ಲಿ ಗದುಗಿನ ತೋಂಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಗೆ ಲಭಿಸಿದೆ. ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರು, ‘ಪ್ರಶಸ್ತಿಯ ಮೊತ್ತವಾಗಿ ಈ ಪ್ರಕಾಶನ ಸಂಸ್ಥೆಗಳಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಇದೇ ಮಾರ್ಚ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.ಪ್ರಾಧಿಕಾರವು ಹೊಸದಾಗಿ ಆರಂಭಿಸಿರುವ ‘ಡಾ. ಅನುಪಮಾ ನಿರಂಜನ ವೈದ್ಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ 2010ನೇ ಸಾಲಿನಲ್ಲಿ ಡಾ. ವಸಂತ ಕುಲಕರ್ಣಿ ಅವರಿಗೆ ಲಭಿಸಿದೆ, ಈ ಪ್ರಶಸ್ತಿಯ ಮೊತ್ತ 25 ಸಾವಿರ ರೂಪಾಯಿಗಳು ಎಂದು ಹೇಳಿದರು. ಉತ್ತಮ ಮಕ್ಕಳ ಪುಸ್ತಕ ಬಹುಮಾನ ‘ಪಪ್ಪಿ ಕೊಟ್ರು ಬಾಪು’ (ಅಭಿನವ ಪ್ರಕಾಶನ) ಕೃತಿಗೆ ಲಭಿಸಿದೆ, ಇದಕ್ಕೆ ಎಂಟು ಸಾವಿರ ರೂಪಾಯಿ ನೀಡಲಾಗುವುದು ಎಂದರು.ಪುಸ್ತಕ ಸೊಗಸು: ಉತ್ತಮ ವಿನ್ಯಾಸ ಹೊಂದಿರುವ ಪುಸ್ತಕಗಳಿಗೆ ಪ್ರಾಧಿಕಾರ ನೀಡುವ ‘ಪುಸ್ತಕ ಸೊಗಸು’ ಪ್ರಶಸ್ತಿಯಲ್ಲಿ 2009ನೇ ಸಾಲಿನಲ್ಲಿ ಸಿನಿಮಾ ಯಾನ (ಹಸಿರು ಪ್ರಕಾಶನ) ಕೃತಿಗೆ ಮೊದಲ ಬಹುಮಾನ; ಚೌಕಟ್ಟಿನಾಚೆ (ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಪ್ರಕಾಶನ) ಪುಸ್ತಕಕ್ಕೆ ಎರಡನೆಯ ಬಹುಮಾನ; ಎಂಟಿಆರ್ ಯಜ್ಞಪ್ಪ (ಪಾರಂಪಳ್ಳಿ ಪ್ರಕಾಶನ) ಕೃತಿಗೆ ಮೂರನೆಯ ಬಹುಮಾನ; ದೇವರು ಮನುಷ್ಯರಾದ ದಿನ (ಪಲ್ಲವ ಪ್ರಕಾಶನ, ಹೂವಿನ ಹಡಗಲಿ) ಕೃತಿಗೆ ನಾಲ್ಕನೆಯ ಬಹುಮಾನ; ಕೆರೆ ಕರಗುವ ಸಮಯ (ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್) ಪುಸ್ತಕ್ಕೆ ಐದನೆಯ ಬಹುಮಾನ ಲಭಿಸಿದೆ ಎಂದು ಸಿದ್ದಲಿಂಗಯ್ಯ ಅವರು ಹೇಳಿದರು.2010ನೇ ಸಾಲಿನಲ್ಲಿ ‘ಪುಸ್ತಕ ಸೊಗಸು’ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳು: ಮಂಗಳೂರಿನ ‘ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ’ ಪ್ರಕಟಿಸಿರುವ ತಿಬಾರ (ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳು) ಕೃತಿಗೆ ಮೊದಲ ಬಹುಮಾನ; ದೃಶ್ಯ (ಥಿನ್‌ಲೈನ್ ಪ್ರಕಾಶನ, ಬೆಂಗಳೂರು) ಕೃತಿಗೆ ಎರಡನೆಯ ಬಹುಮಾನ; ಹಾಡುವ ರೇಖೆ (ಸಿ.ಎಂ.ಎನ್. ಪ್ರಕಾಶನ) ಕೃತಿಗೆ ಮೂರನೆಯ ಬಹುಮಾನ, ಶ್ರೀ ಲಕ್ಷ್ಮೀಶ ಮಹಾಕವಿಯ ಜೈಮಿನಿ ಭಾರತ (ಕಾಮಧೇನು ಪುಸ್ತಕ ಭವನ) ಕೃತಿಗೆ ನಾಲ್ಕನೆಯ ಬಹುಮಾನ; ಜಾಹೀರಾತುಗಳಲ್ಲಿ ಮಹಿಳಾ ಪ್ರಾತಿನಿಧೀಕರಣ (ಪ್ರಗತಿ ಗ್ರಾಫಿಕ್ಸ್, ಬೆಂಗಳೂರು) ಕೃತಿಗೆ ಐದನೆಯ ಬಹುಮಾನ ಲಭಿಸಿದೆ ಎಂದು ಅವರು ತಿಳಿಸಿದರು.ಪುಸ್ತಕ ಸೊಗಸು ಪ್ರಶಸ್ತಿಯಡಿ ಮೊದಲ ಬಹುಮಾನಕ್ಕೆ ರೂ 25 ಸಾವಿರ, ಎರಡನೆಯ ಬಹುಮಾನಕ್ಕೆ ರೂ 20 ಸಾವಿರ, ಮೂರನೆಯ ಬಹುಮಾನ ರೂ 15 ಸಾವಿರ, ನಾಲ್ಕನೆಯ ಬಹುಮಾನ ರೂ 10 ಸಾವಿರ, ಐದನೆಯ ಬಹುಮಾನ ರೂ ಎಂಟು ಸಾವಿರ ನೀಡಲಾಗುವುದು ಎಂದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವೈದ್ಯಕೀಯ ವಿಜ್ಞಾನ ಮಾಲೆಯ ಮುಂದುವರಿದ ಭಾಗವಾಗಿ ಇನ್ನೂ 25 ಪುಸ್ತಕಗಳು ಸಿದ್ಧವಾಗುತ್ತಿವೆ, ಕನ್ನಡ ಕಟ್ಟಿದವರು ಮಾಲೆಯ 30 ಪುಸ್ತಕಗಳು ಅಚ್ಚಿನಲ್ಲಿವೆ, ಬ್ರೈಲ್ ಲಿಪಿಯಲ್ಲಿ ಕೆಲವು ಕನ್ನಡ ಪುಸ್ತಕಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ಎಂದರು.‘ಕಾಸರಗೋಡು, ಸೊಲ್ಲಾಪುರ, ತಾಳವಾಡಿಯಂತಹ ಹೊರರಾಜ್ಯಗಳ ಕನ್ನಡ ಶಾಲೆಗಳಲ್ಲಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕನ್ನಡ ಪುಸ್ತಕಗಳನ್ನು ಹಂಚಿದ್ದೇವೆ. ನಾಡಿನ ಹಿರಿಯ ವಿದ್ವಾಂಸರ ಮೂಲಕ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ‘ನನ್ನ ಮೆಚ್ಚಿನ ಪುಸ್ತಕ’ ಎಂಬ ಉಪನ್ಯಾಸ ಮಾಲೆಯನ್ನು ಕಳೆದ ಒಂದು ವರ್ಷದಿಂದ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry