ಸೋಮವಾರ, ಮಾರ್ಚ್ 1, 2021
31 °C
ಧಾರವಾಡ ಸಾಹಿತ್ಯ ಸಂಭ್ರಮ 2016

ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯ ಲೋಕದಲ್ಲೂ ರಾಜಕೀಯ ಒತ್ತಡ

ಧಾರವಾಡ: ‘ದ್ವಿದಳ ಸೈದ್ಧಾಂತಿಕ ವಿಭಜನೆಯ ರಾಜಕೀಯ ಒತ್ತಡ ಹೆಚ್ಚಾಗಿದ್ದರಿಂದ ಅವುಗಳ ನಡುವಿನ ವಿಶಾಲ ಅವಕಾಶವನ್ನು ಗ್ರಹಿಸುವ ಹಾಗೂ ಅನುಭವಿಸುವ ಹಕ್ಕನ್ನು ಜನಸಾಮಾನ್ಯರಿಗೆ ನಿರಾಕರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ’ ಎಂದು ವಿಮರ್ಶಕ ಟಿ.ಪಿ.ಅಶೋಕ ಹೇಳಿದರು.‘ಇಂಥ ಕಾಣದ ಒತ್ತಡ ಸೃಜನಶೀಲ ಲೇಖಕರನ್ನೂ ಬಿಟ್ಟಿಲ್ಲ ಎಂಬುದು ಬೇಸರದ ಸಂಗತಿ. ಅನಂತಮೂರ್ತಿ ಹಾಗೂ ಗಿರೀಶ್‌ ಕಾರ್ನಾಡರ ಇತ್ತೀಚಿನ ಬರವಣಿಗೆಗಳನ್ನು ಗಮನಿಸಿದರೆ ಒಂದೇ ಸಿದ್ಧಾಂತಕ್ಕೆ ಬದ್ಧವಾದ ವಿಚಾರಗಳನ್ನು ತೆಗೆದುಕೊಳ್ಳುವ ಒತ್ತಡಕ್ಕೆ ಮಣಿದಿರುವುದು ಗೋಚರವಾಗುತ್ತದೆ.ಸಂಕೀರ್ಣ ನಡಿಗೆಯ, ಶೋಧನಾತ್ಮಕ ಶೈಲಿಯ ಬರವಣಿಗೆಯಿಂದ ಅನಂತಮೂರ್ತಿ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಏಕಮುಖವಾಗಿ ಸಮರ್ಥಿಸುವ ಅಥವಾ ಟೀಕಿಸುವ ಶೈಲಿಗೆ ತಲುಪಿದ್ದು ನೋವಿನ ಸಂಗತಿ. ಅವರ ಮರಣೋತ್ತರ ಪ್ರಕಟಣೆ ‘ಹಿಂದುತ್ವ ಅಥವಾ ಹಿಂದ್‌ಸ್ವರಾಜ್‌’ ಕೃತಿ ಗಮನಿಸಿದರೆ ಅವರ ಪ್ರತಿಭೆಯ ಮೇಲೆ ಸಮಕಾಲೀನ ಒತ್ತಡ ಹೇಗೆ ಕೆಲಸ ಮಾಡಿದೆ ಎಂಬುದು ಅರ್ಥವಾಗುತ್ತದೆ. ಅನಂತಮೂರ್ತಿ ಅವರನ್ನು ಮೋದಿ ಆವರಿಸಿದ್ದರ ಪರಿಣಾಮ ನಮ್ಮ ಕಾಲದ ಬಹುಮುಖಿ ಸತ್ಯಗಳು ಅವರಿಗೆ ಗೋಚರಿಸಲೇ ಇಲ್ಲ’ ಎಂದರು.‘ಅವರಂತೆಯೇ ತುಘಲಕ್‌ ನಾಟಕ ಬರೆದ ಕಾರ್ನಾಡರು ಟಿಪ್ಪುಸುಲ್ತಾನ್‌ನನ್ನು ಸಂಕೀರ್ಣವಾಗಿ ಹಾಗೂ ಬಹುಮುಖಿಯಾಗಿ ಗ್ರಹಿಸುವ ಸಾಮರ್ಥ್ಯ ಕಳೆದುಕೊಂಡಿರುವುದು ಸ್ಪಷ್ಟ. ಅದು ಅವರ ನಾಟಕಗಳಿಗೆ ಎಷ್ಟರಮಟ್ಟಿಗೆ ಅನ್ವಯಿಸುತ್ತದೋ ಅವರ ಸಾರ್ವಜನಿಕ ಮಾತುಗಳಿಗೂ ಅನ್ವಯಿಸುತ್ತದೆ’ ಎಂದು ಟೀಕಿಸಿದರು.ಇವರಿಬ್ಬರಂತೆ ಜೀವನಾನುಭವವುಳ್ಳ ಸಮೃದ್ಧ ವಿವರಗಳಿಂದ ಕೂಡಿದ ಕಾದಂಬರಿಗಳನ್ನು ಬರೆಯುತ್ತಿದ್ದ ಎಸ್‌.ಎಲ್‌.ಭೈರಪ್ಪ ಅವರು ಇಂದು ವಿಚಾರಗಳನ್ನು ಮುಂದೆ ಮಾಡಿಕೊಂಡು ‘ಆವರಣ’ದಂತಹ ಪಾಂಪ್ಲೆಟ್‌ ರೂಪದ ಬರವಣಿಗೆಗೆ ಕಾದಂಬರಿಯ ಹೆಸರು ನೀಡುತ್ತಿರುವುದು ಕಾಲ ಸಂಕೀರ್ಣವಾಗುತ್ತಿರುವುದಕ್ಕೆ ಉದಾಹರಣೆ’ ಎಂದು ಜರಿದರು.ಸಾಹಿತಿಗಳ ನಂತರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಶೋಕ, ‘ಆಳುವ ಸರ್ಕಾರವೇ ಜನಸಾಮಾನ್ಯರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಿದೆ. ಅದಕ್ಕೆ ವಿರುದ್ಧವಾಗಿ ಮತ್ತೊಂದು ಸರ್ಕಾರ ಜನರ ನಂಬಿಕೆಗಳಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದೆ’ ಎಂದು ಪರೋಕ್ಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕಿಸಿದರು.ಕರ್ನಾಟಕದಲ್ಲಿ ಸಮಾನ ಶಿಕ್ಷಣ, ಕನ್ನಡ ಭಾಷೆ ಅನುಷ್ಠಾನ, ರೈತರ ಆತ್ಮಹತ್ಯೆ, ಲೋಕಾಯುಕ್ತದಂತಹ ಸಂಸ್ಥೆಗಳನ್ನು ಬಲಪಡಿಸುವಂಥ ಪ್ರಮುಖ ಕೆಲಸಗಳಿದ್ದರೂ ಮೌಢ್ಯ ನಿವಾರಣಾ ಕಾನೂನು ಜಾರಿಗೆ ತರುತ್ತೇವೆ ಎಂಬ ಇವರ ನಿಲುವೇ ಅರ್ಥವಾಗದು. ದೇಶದ ಸಂವಿಧಾನ ಹಾಗೂ ಕಾನೂನನ್ನೇ ಬಳಸಿಕೊಂಡು ಎಲ್ಲಾ ಬಗೆಯ ಸಂದಿಗ್ಧತೆಯನ್ನು ಎದುರಿಸಲು ಸಾಧ್ಯವಿರುವಾಗ ಈ ರೀತಿಯ ಮಸೂದೆಯನ್ನು ತರುತ್ತೇವೆ ಎಂಬ ಮೂಲಕ ತಾನು ಪ್ರಗತಿಪರ ಎಂದು ಸಾಬೀತುಪಡಿಸಿಕೊಳ್ಳಬೇಕಾದ ದುರವಸ್ಥೆಗೆ ಸರ್ಕಾರ ತಲುಪಿರುವುದು ನಮ್ಮ ಸಂವಾದ ಸಂಸ್ಕೃತಿ ತಲುಪಿರುವ ಹಂತವನ್ನು ಹೇಳುತ್ತದೆ’ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.‘ಈ ವಿಷಯದಲ್ಲಿ ಸಾಹಿತಿಗಳಿಂದಲೇ ಕೂಡಿರುವ ಸಾಹಿತ್ಯ ಅಕಾಡೆಮಿಯ ಪಾತ್ರ ಪ್ರಶ್ನಾರ್ಹವಾಗಿದೆ. ದೇಶದ ಗಣ್ಯ ಲೇಖಕರ ಹತ್ಯೆಯಾದರೂ ಅಕಾಡೆಮಿಗಳ ಮೌನ ಹಾಗೂ ನಿರ್ಲಕ್ಷ ದಿಗ್ಭ್ರಾಂತಿ ಮೂಡಿಸಿದೆ. ತನ್ನ ಮೌನದ ಮೂಲಕ ಅಕಾಡೆಮಿ ಅಸಹನೆ ಹಾಗೂ ಅಸಹಿಷ್ಣುತೆ ಸಂಸ್ಕೃತಿಯನ್ನು ಸಮರ್ಥಿಸುತ್ತಿದ್ದರೆ, ಕನ್ನಡ ಸಾಹಿತ್ಯ ಅಕಾಡೆಮಿಯ ವರ್ತನೆಯೂ ಸಂದೇಹ ಮೂಡಿಸುವಂತಿದೆ’ ಎಂದರು.‘ಹೊಡಿ, ಬಡಿ, ಸುಡು ಎಂಬ ನುಡಿಗಟ್ಟಿನ ಮೂಲಕವೇ ನಾಡಿನಾದ್ಯಂತ ಭಾಷಣ ಮಾಡುತ್ತ ಅಸಹನೆಯ ಸಂಸ್ಕೃತಿಯನ್ನು ಬಹಿರಂಗವಾಗಿ ಪ್ರಕಟಿಸುತ್ತಿರುವ ಲೇಖಕರೊಬ್ಬರಿಗೆ ಅಧಿಕೃತವಾಗಿ ಗೌರವ ಪ್ರಶಸ್ತಿ ನೀಡಿ ಅಕಾಡೆಮಿ ಇಂಥ ನಡವಳಿಕೆಗಳಿಗೆ ತನ್ನ ಅಂಗೀಕಾರದ ಮುದ್ರೆಯೊತ್ತಿದೆ’ ಎಂದು ಹೇಳುವ ಮೂಲಕ ಮುಂದೆ ನಡೆಯಬೇಕಾದ ಅಸಹಿಷ್ಣುತೆ ಗೋಷ್ಠಿಯ ಚರ್ಚೆಗೆ ನಾಂದಿ ಹಾಡಿದರು.ಅಶೋಕ್‌ ಅವರ ಮಾತು ಮುಗಿಯುತ್ತಿದ್ದಂತೆ ಮೈಕ್‌ನತ್ತ ಧಾವಿಸಿದ ಡಾ. ಚಂದ್ರಶೇಖರ ಕಂಬಾರ, ‘ಸಾವಿರಾರು ರೈತರು ಸತ್ತರೂ ನಾವು ಅದನ್ನು ವಿರೋಧಿಸಿ ಒಂದು ಅಕ್ಷರವನ್ನು ಬರೆಯಲಿಲ್ಲ. ಹಾಗೆಯೇ ಲೇಖಕರ ಹತ್ಯೆ ನಡೆದಾಗ ಅಕಾಡೆಮಿ ಅದಕ್ಕೆ ಪ್ರತಿಕ್ರಿಯಿಸಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸಕಾಲದಲ್ಲಿ ಹತ್ಯೆಯನ್ನು ಖಂಡಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ತಡವಾಗಿರಬಹುದು. ಆದರೆ ಅಕಾಡೆಮಿಗೂ ಘಟನೆ ತೀರಾ ನೋವನ್ನುಂಟು ಮಾಡಿದೆ’ ಎಂದು ಹೇಳುವ ಮೂಲಕ ಸಂಭ್ರಮದ ಆರೋಗ್ಯಕರ ಸಂವಾದಕ್ಕೆ ಚಾಲನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.