ಸಾಹಿತ್ಯ ವಿಮರ್ಶೆಯಲ್ಲೂ ರಾಜಕೀಯ

7

ಸಾಹಿತ್ಯ ವಿಮರ್ಶೆಯಲ್ಲೂ ರಾಜಕೀಯ

Published:
Updated:
ಸಾಹಿತ್ಯ ವಿಮರ್ಶೆಯಲ್ಲೂ ರಾಜಕೀಯ

ಬೆಂಗಳೂರು: `ಕನ್ನಡ ಭಾಷೆಯಲ್ಲಿ ಸಾಹಿತ್ಯ ವಿಮರ್ಶೆಯಲ್ಲೂ ರಾಜಕೀಯ ನಡೆಯುತ್ತಿದೆ~ ಎಂದು ಕಿಡಿಕಾರಿದ ಹಿರಿಯ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ, `ನೆಲದ ಧ್ವನಿಗೆ ಕಿವಿಗೊಟ್ಟು ವಿಮರ್ಶಾ ಪಡೆ ರೂಪುಗೊಳ್ಳಬೇಕಾದ ಅಗತ್ಯವಿದೆ. ವಿಮರ್ಶಕರು ಎಲ್ಲ ಬಗೆಯ ಸಾಹಿತ್ಯಗಳನ್ನು ಒಂದೇ ರೀತಿಯಲ್ಲಿ ನೋಡಬೇಕು~ ಎಂದು ಕಿವಿಮಾತು ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ನಡೆದ `ಆಧುನಿಕ ಕನ್ನಡ ಕಾವ್ಯ (1970ರ ನಂತರ)~ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕಾವ್ಯ ಘೋಷಣೆಯಾಯಿತು, ಗದ್ಯ ಭಾಷಣವಾಯಿತು ಎಂಬ ಆರೋಪ ಮಾಡಿ ಬಂಡಾಯ ಸಾಹಿತ್ಯವನ್ನು ವಿಮರ್ಶಾ ರಾಜಕಾರಣ ಕಡೆಗಣಿಸಿತು. ಹಾಗಾಗಿ ಬಂಡಾಯ ಸಾಹಿತ್ಯದ ಬಗ್ಗೆ ಇವತ್ತಿಗೂ ಸರಿಯಾದ ರೀತಿಯಲ್ಲಿ ವ್ಯವಹರಿಸುವಲ್ಲಿ ಸಾಧ್ಯವಾಗಿಲ್ಲ. ಅಲ್ಲದೆ ವಚನ ಸಾಹಿತ್ಯದ ನಿರ್ಲಕ್ಷ್ಯದಿಂದ ಸಾಹಿತ್ಯ ವಿಮರ್ಶೆ ತಪ್ಪು ದಾರಿಯಲ್ಲಿ ತುಳಿದಿದೆ. ಜಾತಿ ಮನಸ್ಸುಗಳ ವ್ಯವಸ್ಥೆ ನಮ್ಮ ನಡುವೆ ವಿಜ್ರಂಭಿಸುತ್ತಿವೆ~ ಎಂದು ಅವರು ಕಿಡಿ ಕಾರಿದರು.`ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನೂ ಒಂದು ಹಂತದಲ್ಲಿ ಟೀಕಿಸಲಾಯಿತು. ವಿಮರ್ಶಾ ರಾಜಕಾರಣವು ಬೇರೆ ಬೇರೆ ಮೂಲದ ಸಂವೇದನೆಗಳನ್ನು ಕಡೆಗಣಿಸಿತು. ಇವರು ಶ್ರೇಷ್ಠತೆಯ ವ್ಯಸನದೊಳಗೆ ನರಳುತ್ತಿದ್ದಾರೆ. ಇಂತಹ ರಾಜಕಾರಣದಿಂದಲೇ 12ನೇ ಶತಮಾನದ ವಚನಗಳ ಬಗ್ಗೆ ಈಗಲೂ ನಿರ್ಲಕ್ಷ್ಯಿಸಲಾಗುತ್ತಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.`ರಾಜ್ಯದಲ್ಲಿ 1970-80ರ ದಶಕ ಚಳವಳಿಗಳ ದಶಕ. 70ನೇ ದಶಕದಲ್ಲಿ ದಲಿತ ಚಳವಳಿ ಆರಂಭವಾಯಿತು. ಅದರ ಬೆನ್ನಲ್ಲೇ ಭಾಷಾ, ಬಂಡಾಯ ಚಳವಳಿಗಳು ಬೆಳೆದು ಬಂದವು. ಈ ಕಾಲ ಜನರ ಅರಿವು ಎಚ್ಚರಿಸಿದ ಯುಗ. 70ರ ದಶಕದ ಚಲನೆಗೆ ಹಿಮ್ಮುಖವಾದ ಚಲನೆಯನ್ನು ಇವತ್ತು ಕಾಣುತ್ತಿದ್ದೇವೆ. ಸಂಘಟನೆಗಳು ಇವತ್ತು ವಿಘಟನೆಯಾಗುತ್ತಿವೆ.

 

ಒಳ ಮೀಸಲಾತಿಯ ಹೆಸರಿನಲ್ಲಿ ಸಮುದಾಯವನ್ನು ಒಡೆದು ಹಾಕಲಾಗುತ್ತಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಡಾ.ಎಚ್.ಎಲ್. ಪುಷ್ಪಾ ಮಾತನಾಡಿ, `ಯುವ ಕವಿಗಳು ದಲಿತರು, ಬಂಡಾಯ ಹಾಗೂ ಮಹಿಳೆಯರ ಬಗ್ಗೆ ಹೆಚ್ಚು ಬರೆಯುತ್ತಿಲ್ಲ. ಅವರು ಇತ್ತೀಚಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಬರೆಯುತ್ತಿದ್ದಾರೆ~ ಎಂದರು.ಬಂಡಾಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಡಾ. ಅಗ್ರಹಾರ ಕೃಷ್ಣಮೂರ್ತಿ, ಡಾ. ಮಹೇಶ್ ಉಪಸ್ಥಿತರಿದ್ದರು.ಹಿಂದೆ ಈಗಿನಷ್ಟು ಜಾತಿ, ಉಪ ಜಾತಿ ಪ್ರಜ್ಞೆಇರಲಿಲ್ಲ...

`ಬ್ರಾಹ್ಮಣ್ಯ, ಬ್ರಾಹ್ಮಣರನ್ನು ಸಿಕ್ಕಾಪಟ್ಟೆ ಬೈದು ಶಹಬ್ಬಾಸ್‌ಗಿರಿ ಪಡೆದ ನಾವು ನೀವು ಈಗ ಎಲ್ಲಿದ್ದೇವೆ. ಜಾತಿ ಪ್ರಜ್ಞೆ ಹಾಗೂ ಉಪ ಜಾತಿ ಪ್ರಜ್ಞೆ ಈಗಿನಷ್ಟು ಈ ಹಿಂದೆ ಇರಲಿಲ್ಲ. ಈ ಹಿಂದೆ ದಲಿತ ಸಂಘರ್ಷ ಸಮಿತಿ ಒಂದೇ ಇತ್ತು. ಈಗ ದಲಿತ ಸಂಘರ್ಷ ಸಮಿತಿಗಳು ಸಂಖ್ಯೆ ಹೆಚ್ಚಾಗಿದೆ. ಬ್ರಾಹ್ಮಣೀಕರಣವನ್ನು ಬೇಡ ಎಂದವರು ಬ್ರಾಹ್ಮಣಿಕೆಯ ಮಂಗಳಸೂತ್ರವನ್ನು ಧರಿಸುವ ಸ್ಥಿತಿ ಏಕೆ ಬಂತು ಎಂಬ ಬಗ್ಗೆ ವಿಚಾರ ಮಾಡಬೇಕಿದೆ~ ಎಂದು ಡಾ. ಚಂದ್ರಶೇಖರ ಪಾಟೀಲ್ ವಿಶ್ಲೇಷಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `80-90ರ ದಶಕ ಜಾಗತೀಕರಣದ ಅನೇಕ ಪಲ್ಲಟಗಳನ್ನು ಕಂಡ ಸಂಧಿ ಕಾಲ. ನೆಹರು ಅವರ ಕಾಲದಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಶುರುವಾಗಿತ್ತು. ಆಗ ಗುಪ್ತಗಾಮಿನಿಯಂತೆ ಹರಿಯಿತು. ನೆಹರು ಅಜೆಂಡಾ ಮುಖ್ಯವಾಹಿನಿಗೆ ಬಂದುದು 90ರ ದಶಕದಲ್ಲಿ. ಈಗ ಅದು ಹೆಚ್ಚು ಹೆಚ್ಚು ವಿಸ್ತಾರ ಆಗುತ್ತಿದೆ~ ಎಂದು ಕಳವಳ ವ್ಯಕ್ತಪಡಿಸಿದರು.  `ಬಹಳ ಜನ ಸಾಹಿತಿಗಳು ತಮ್ಮ ಸುವರ್ಣಯುಗ ಮುಗಿದ ಬಳಿಕ ಬೇರೆಯವರ ಕಾವ್ಯಗಳನ್ನು ಓದಲು ಹೋಗುವುದಿಲ್ಲ. ಹೊಸಬರಿಗೆ ಮಾರ್ಗದರ್ಶನ ಮಾಡುತ್ತಿಲ್ಲ~ ಎಂದು ಕಿಡಿ ಕಾರಿದ ಅವರು, `ಈಗ ಅಂತರಂಗ ವಿಶ್ಲೇಷಣೆ ಮಾಡುವ, ನವಿರಾದ ಭಾಷೆ ಬಳಸುವ ಕವಿಗಳ ಸಂಖ್ಯೆ ಜಾಸ್ತಿ ಆಗಿದೆ. ಆರ್ಥಿಕ ತಲ್ಲಣ, ಜಾಗತೀಕರಣದ ತಲ್ಲಣ, ಅಭದ್ರತೆಯ ಭಾವನೆಗಳ ಬಗ್ಗೆ ಅವರು ಹೆಚ್ಚು ಹೆಚ್ಚು ಬರೆಯುತ್ತಿದ್ದಾರೆ. ಒಳ್ಳೆಯ ಕವಿಗಳು ನಮ್ಮ ಮುಂದೆ ಇದ್ದಾರೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry