ಸಾಹಿತ್ಯ ವೇದಿಕೆ ಅಗತ್ಯ

7

ಸಾಹಿತ್ಯ ವೇದಿಕೆ ಅಗತ್ಯ

Published:
Updated:

ಚಳ್ಳಕೆರೆ: ಆಂಧ್ರಪ್ರದೇಶದ ಗಡಿಭಾಗಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯಾಸಕ್ತರಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಹಿತ್ಯ ವೇದಿಕೆಗಳು ಅತ್ಯಗತ್ಯವಾಗಿವೆ ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಕೊರ‌್ಲಕುಂಟೆಯ ಕನ್ನಡ ರಕ್ಷಣಾ ವೇದಿಕೆ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ `ನಮ್ಮವರು ನಮಗೆಷ್ಟು ಗೊತ್ತು?' ಸಾಹಿತ್ಯ ಮಾಲಿಕೆಯಲ್ಲಿ ಕತೆಗಾರ ಬಿ. ತಿಪ್ಪಣ್ಣ ಮರಿಕುಂಟೆ ಬದುಕು-ಬರಹ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಗೋಷ್ಠಿ-ಒಂದು: `ಬಿ. ತಿಪ್ಪಣ್ಣ ಮರಿಕುಂಟೆ ಕತೆಗಳಲ್ಲಿ ಮಾನವೀಯ ಮೌಲ್ಯಗಳು' ಕುರಿತು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಮಾತನಾಡಿ, ಗ್ರಾಮ ಸಮಾಜದ ಜೀವನ ಮೌಲ್ಯಗಳನ್ನು ತನ್ನ ಕತೆಗಳಲ್ಲಿ ಬಿಂಬಿಸುವ ಮೂಲಕ ಹಳ್ಳಿ ಮೂಲದ ಸಾಮಾನ್ಯ ವ್ಯಕ್ತಿಯೂ ಓದುವಂತೆ ಮಾಡುವ ಮತ್ತು ತನ್ನ ಚಿಂತನೆ ಹಾಗೂ ಆಲೋಚನೆಗಳಲ್ಲಿ ಪರಿವರ್ತನೆಗಳನ್ನು ತಂದುಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವಂತೆ ಪ್ರೇರೇಪಿಸುವ ಕತೆಗಳನ್ನು ರಚಿಸಿರುವ ತಿಪ್ಪಣ್ಣ ಮರಿಕುಂಟೆ ಜೀವಪರ ಸಂದೇಶಗಳನ್ನು ನೀಡಿದ್ದಾರೆ ಎಂದರು.ಕವಿ ಡಾ.ಲೋಕೇಶ್ ಅಗಸನ ಕಟ್ಟೆ ಮಾತನಾಡಿ, ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರ ವೈಚಾರಿಕ ದೃಷ್ಟಿಕೋನದಿಂದ ಪುರಾಣ, ಇತಿಹಾಸ ಹಾಗೂ ವರ್ತಮಾನಗಳನ್ನು ಓದುಗರಿಗೆ ಅರ್ಥವಾಗುವಂತೆ ಮತ್ತು ಅವರ ಆಲೋಚನೆಗಳಲ್ಲಿ ಬದಲಾವಣೆ ಆಗುವಂತೆ ಬರೆಯಬೇಕು ಎಂದು ಹೇಳಿದರು.ಅರ್ಥಕಳೆದುಕೊಂಡ ಜಗತ್ತಿನಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ವಿಕೃತಿಯಿಂದ ಕೂಡಿರುವ ಸಮಾಜವನ್ನು ಸಂಸ್ಕೃತಿಯತ್ತ ಕರೆದೊಯ್ಯುವ ಬರಹಗಳು ಬರಬೇಕು. ಇಂದಿನ ಬರಹಗಾರ ಹಳೆಯದನ್ನು ಹೊಡೆಯುವ ಮತ್ತು ಹೊಸತನ್ನು ಕಟ್ಟುವ ಪ್ರಕ್ರಿಯೆಯಲ್ಲಿ ನಿರತನಾದಾಗ ಮಾತ್ರ ಬರಹಗಾರನಿಗೆ ಚಲನಶೀಲತೆ ಬರುತ್ತದೆ. ಇಂತಹ ನಿರಚನ ಸಿದ್ಧಾಂತ ಬುದ್ಧ ಮತ್ತು ಅಲ್ಲಮನ ಕಾಲದಿಂದಲೂ ನಡೆಯುತ್ತಲೇ ಬಂದಿದೆ.ನೈತಿಕ ಮೌಲ್ಯಗಳನ್ನು ಹೇಳುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿನ ಕೆಲವು ಘಟನೆಗಳನ್ನು ಪ್ರಶ್ನಿಸುವ ಮತ್ತು ಓದುಗರನ್ನು ವಿಶ್ಲೇಷಣೆಗೆ ಒಳಪಡಿಸುವ ಬಹು ಸೂಕ್ಷ್ಮತೆಗಳನ್ನು ಇವರ ಕತೆಗಳಲ್ಲಿ ಗುರುತಿಸಬಹುದು.

18, 19ನೇ ಶತಮಾನದಿಂದಲೂ ಇಂತಹ ವೈಚಾರಿಕೆ ಸಂಶೋಧನೆಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಗುತ್ತಲೇ ಬಂದಿವೆ. ಮರಿಕುಂಟೆ ಅವರ ಕತೆಗಳಲ್ಲಿ ನಾಸ್ತಿಕತೆ ಹೆಚ್ಚು ಎದ್ದುಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಅಲ್ಲಿನ ಎಲ್ಲಾ ಮಜಲುಗಳನ್ನು ತನ್ನ ಕತೆಗಳಲ್ಲಿ ದಾಖಲು ಮಾಡಿರುವ ನೆಲಮೂಲ ಸಂಸ್ಕೃತಿಯ ಅನನ್ಯ ಕತೆಗಾರನಾಗಿ ಗೋಚರಿಸುತ್ತಿದ್ದಾರೆ ಎಂದು ಬಣ್ಣಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry