ಸಾಹಿತ್ಯ ಸಮ್ಮೇಳನಕ್ಕೆ ತಾರಾ ಮೆರಗು

7

ಸಾಹಿತ್ಯ ಸಮ್ಮೇಳನಕ್ಕೆ ತಾರಾ ಮೆರಗು

Published:
Updated:

ಬೆಂಗಳೂರು: ಈ ಸಲ ಸಾಹಿತ್ಯ ಸಮ್ಮೇಳನಕ್ಕೆ ತಾರಾ ಮೆರಗು. ಫೆ.4ರಿಂದ ಆರಂಭವಾಗುವ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಕನ್ನಡ ಚಲನಚಿತ್ರರಂಗವೂ ಪಾಲ್ಗೊಳ್ಳಲಿದೆ. ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ಉದೇಶಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ‘ಚಿತ್ರರಂಗ ಹಾಗೂ ಸಾಹಿತ್ಯ ರಂಗ ಒಟ್ಟಿಗೆ ಸೇರಿದರೆ ಬೃಹತ್ ಶಕ್ತಿ ಒದಗಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದೇವೆ. ಸಾಹಿತ್ಯ ಸಮ್ಮೇಳನ ಕನ್ನಡದ ಜಾತ್ರೆಯಾಗಬೇಕು ಎಂಬುದು ಚಿತ್ರರಂಗದ ಆಶಯವಾಗಿದೆ’ ಎಂದು ನುಡಿದರು.‘ಮೆರವಣಿಗೆಯ ಪ್ರಾರಂಭದಿಂದ ಅಂತ್ಯದವರೆಗೆ ಎಲ್ಲಾ ಕಲಾವಿದರೂ ಪಾಲ್ಗೊಳ್ಳಲಿದ್ದಾರೆ. ಹಂಪಿ ರಥ ಹಾಗೂ ಕೆಂಪೇಗೌಡರ ಗೋಪುರವಿರುವ ಸ್ತಬ್ಧಚಿತ್ರ ಚಲನಚಿತ್ರ ತಂಡದ ಮೆರವಣಿಗೆ ಮುಂಚೂಣಿಯಲ್ಲಿರಲಿದೆ. ಮೂರು ತೆರೆದ ವಾಹನಗಳಲ್ಲಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು ಹೆಚ್ಚಿರುವುದರಿಂದ ಹಾಗೂ ಸುರಕ್ಷತೆ ದೃಷ್ಟಿಯಿಂದ ನಟರು ವಾಹನದಲ್ಲಿ ತೆರಳಲಿದ್ದು ಉಳಿದಂತೆ ಚಿತ್ರರಂಗದ ಅನೇಕ ಗಣ್ಯರು ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು. ‘ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ. ಆದರೆ ಚಿತ್ರಗಳ ಬಿಡುಗಡೆ ಹಾಗೂ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಎಂದಿನಂತೆ ನಡೆಯಲಿದೆ’ ಎಂದು ಅವರು ತಿಳಿಸಿದರು.ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ ‘ಮೊದಲಿಗೆ ಸ್ವಾತಂತ್ರ್ಯ ಉದ್ಯಾನದಿಂದ ಹೊರಡುವ ಸಮ್ಮೇಳನ ಚಿತ್ರರಂಗದ ಮೆರವಣಿಗೆ ಬಿಬಿಎಂಪಿ ಕಚೇರಿ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಹಿಂಬಾಲಿಸಲಿದೆ.ಚಿತ್ರರಂಗ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಚಿತ್ರರಂಗಕ್ಕೆ ಒಂದು ದಿನ ರಜೆ ಘೋಷಿಸಲಾಗಿದೆ. ಮೆರವಣಿಗೆ ವೇಳೆ ಅಭಿಮಾನಿಗಳು ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದರು. ಮಂಡಳಿಯ ಉಪಾಧ್ಯಕ್ಷ ಕೆ. ಮಂಜು, ಮಂಡಳಿಯ ಗೌರವ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry