ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

7

ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

Published:
Updated:

ಸಿಂದಗಿ: ಪಟ್ಟಣದಲ್ಲಿ ಫೆಬ್ರುವರಿ 15 ಮತ್ತು 16ರಂದು ನಡೆಯಲಿರುವ ವಿಜಾಪುರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ನಡೆದಿದೆ. ಅಂತಿಮ ಹಂತದ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಬಿರುಸಿನ ಚಟುವಟಿಕೆಯಲ್ಲಿ ಪರಿಷತ್‌ನ ಪದಾಧಿಕಾರಿಗಳು ತೊಡಗಿದ್ದಾರೆ.ಸಮ್ಮೇಳನದ ಮಹಾವೇದಿಕೆಗೆ ಹಂದಿಗನೂರ ಸಿದ್ರಾಮಪ್ಪನವರು, ಮಹಾಮಂಟಪಕ್ಕೆ ಸ್ವಾಮಿ ರಾಮಾನಂದತೀರ್ಥರು, ಮಹಾದ್ವಾರ-1ಕ್ಕೆ ಚನ್ನವೀರಸ್ವಾಮಿಗಳವರು, ಮಹಾದ್ವಾರ-2ಕ್ಕೆ ಶಾಂತವೀರ ಪಟ್ಟಾಧ್ಯಕ್ಷರು ಹಾಗೂ ದಾಸೋಹ ಮನೆಗೆ ಪದ್ಮರಾಜ ಒಡೆಯರು, ಪುಸ್ತಕ ಮಳಿಗೆಗೆ ಮೊಹರೆ ಹಣಮಂತರಾಯ ಅವರ ಹೆಸರುಗಳನ್ನು ಇಡಲಾಗಿದೆ.ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತ್ಯ ಕ್ಷೇತ್ರದ ಹಿರಿಯ ಜೀವ ವಿಜಾಪುರದ ಮಹಾಂತ ಗುಲಗಂಜಿ ಅವರನ್ನು ಆಯ್ಕೆ ಮಾಡಲಾಗಿದೆ. ನಾಡದೇವಿ ಉತ್ಸವದ ಉದ್ಘಾಟನೆಯನ್ನು ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೆರವೇರಿಸುವರು. ವಿಜಾಪುರ ಜ್ಞಾನಯೋಗಾಶ್ರದ ಸಿದ್ದೇಶ್ವರ ಸ್ವಾಮೀಜಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವರು.ಸಚಿವ ಗೋವಿಂದ ಕಾರಜೋಳ ಪುಸ್ತಕ ಮಳಿಗೆ ಉದ್ಘಾಟಿಸುವರು. ‘ಸಿಂದಗಿ ಪನ್ನೆರಡು’ ಸ್ಮರಣ ಸಂಚಿಕೆಯನ್ನು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಲ್ಲೂರಪ್ರಸಾದ ಬಿಡುಗಡೆಗೊಳಿಸುವರು. ಜಿಲ್ಲೆಯ ಶಾಸಕರಿಂದ ನಾಲ್ಕು ಗ್ರಂಥಗಳ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ನಡೆಯಲಿದೆ.ಜಿಲ್ಲೆಯ ದಶಕದ ಸಾಹಿತ್ಯ, ಪ್ರಸ್ತುತ, ಕನ್ನಡ ನಾಡು-ನುಡಿ, ಜಿಲ್ಲೆಯ ನೆಲ-ಜಲ ವಿಷಯವಾಗಿ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಕವಯತ್ರಿ ಶಶಿಕಲಾ ವೀರಯ್ಯಸ್ವಾಮಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ ನಡೆಯಲಿದ್ದು, ಜಿಲ್ಲೆಯ 30 ಕವಿಗಳು ಕವನ ವಾಚಿಸಲಿದ್ದಾರೆ. ಕನ್ನಡ ಜಗದ್ಗುರು ಎಂದೇ ಖ್ಯಾತರಾಗಿರುವ ಗದಗ-ಡಂಬಳ ಸಂಸ್ಥಾನಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.ಅಶೋಕ ಮನಗೂಳಿ, ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ಖಾದ್ರಿ ಇನಾಮದಾರ ಅವರು ನಿರ್ಣಯ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ 30 ಜನ ಗಣ್ಯರಿಗೆ ಸನ್ಮಾನಿಸಲಾಗುವುದು.  ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಬಿ. ದಿಲ್‌ಷಾದ ನೆರವೇರಿಸುವರು ಎಂದು ಕಾರ್ಯಕ್ರಮದ ಸಂಚಾಲಕರು ತಿಳಿಸಿದ್ದಾರೆ.ಭರ್ಜರಿ ಭೋಜನ:  ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಬೇರೆ ಬೇರೆ ಓಣಿಯವರು ಒಂದೊಂದು ತರಹದ ಊಟದ ಪದಾರ್ಥ ಸಿದ್ದಗೊಳಿಸಲು ಸ್ಥಳೀಯ ಸಾರಂಗಮಠ ಸಾರ್ವಜನಿಕರಿಗೆ ಸೂಚನೆ ನೀಡಿದೆ.ಶೇಂಗಾದ ಹೋಳಿಗಿ- ತುಪ್ಪ, ಸಜ್ಜಿ- ಬಿಳಿ ಜೋಳದ ರೊಟ್ಟಿ, ಮಾದಲಿ, ಬಜ್ಜಿ ಪಲ್ಲೆ, ಶೇಂಗಾದ ಹಿಂಡಿ, ಅಗಸಿ ಹಿಂಡಿ ಇತ್ಯಾದಿ ಊಟದ ಸವಿಯನ್ನು ಸವಿಯಲು ಸಮ್ಮೇಳನ ಅಣಿಯಾಗುತ್ತಿದೆ ಎಂಬುದು ಸಂಘಟಕರ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry