ಸಾಹಿತ್ಯ ಸಮ್ಮೇಳನದಲ್ಲಿ ವಿವಾದಾತ್ಮಕ ಹೇಳಿಕೆ ಸಲ್ಲ- ಸಚಿವ ಗೋವಿಂದ ಕಾರಜೋಳ

7

ಸಾಹಿತ್ಯ ಸಮ್ಮೇಳನದಲ್ಲಿ ವಿವಾದಾತ್ಮಕ ಹೇಳಿಕೆ ಸಲ್ಲ- ಸಚಿವ ಗೋವಿಂದ ಕಾರಜೋಳ

Published:
Updated:ಬೆಂಗಳೂರು: ‘ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ ಎಂದು ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತ ಪ್ರಸ್ತಾಪಿಸಿದ್ದು ಸರಿಯಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಸಾಧುವಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.‘ಇಷ್ಟಕ್ಕೂ ವೆಂಕಟಸುಬ್ಬಯ್ಯ ಅವರು ಕರ್ನಾಟಕ ರಾಜ್ಯವನ್ನು ಮಾತ್ರ ಬೊಟ್ಟು ಮಾಡಿ ತೋರಿಸಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಹಗರಣಗಳು ಕಣ್ಣಿಗೆ ಬೀಳಲಿಲ್ಲವೇ’ ಎಂದು ಅವರು ಪ್ರಶ್ನಿಸಿದರು.ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ, ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ನೀಡಬಾರದು. ಒಮ್ಮೆ ಹೇಳಿದ ನಂತರ ಹಾಗೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡುವುದು ಕೂಡ ಸರಿಯಲ್ಲ ಎಂದು ಆಕ್ಷೇಪಿಸಿದರು.‘ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಅದರ ಮೂಲ ಯಾವುದು ಎನ್ನುವದನ್ನೂ ಹೇಳಬೇಕಾಗುತ್ತದೆ. ಇವತ್ತಿನ ಚುನಾವಣಾ ವ್ಯವಸ್ಥೆಯನ್ನು ನೋಡಿದರೆ ಹಣ ಇಲ್ಲದವರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಹಣ ಇಲ್ಲದೆ ಓಟ್ ಹಾಕುವ ಸ್ಥಿತಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗಾಜಿನ ಮನೆ: ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದ್ದು, ವಿದೇಶಗಳಲ್ಲಿನ ಎಲ್ಲ ಕನ್ನಡ ಸಂಘಗಳಿಗೂ ಆಹ್ವಾನ ನೀಡಲಾಗಿದೆ. 300ಕ್ಕೂ ಹೆಚ್ಚು ಜನ ಭಾಗವಹಿಸುವ ವಿಶ್ವಾಸ ಇದೆ ಎಂದು ಹೇಳಿದರು.ಈ ಸಮ್ಮೇಳನದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯ ಹಾಗೆ ಬೆಳಗಾವಿಯಲ್ಲೂ ಗಾಜಿನ ಮನೆ ನಿರ್ಮಿಸುವ ಉದ್ದೇಶ ಇದೆ. ಅಲ್ಲಿಯೂ 100 ಎಕರೆ  ಸರ್ಕಾರಿ ಭೂಮಿ ಇದ್ದು, ಅದನ್ನು ಲಾಲ್‌ಬಾಗ್ ಮಾದರಿಯಲ್ಲಿ  ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ವಿಶ್ವ ಕನ್ನಡ ಸಮ್ಮೇಳನದ ಕಚೇರಿ ಸ್ಥಾಪಿಸುತ್ತಿದ್ದು, ಅಲ್ಲಿ ವಿಶೇಷ ಜಿಲ್ಲಾಧಿಕಾರಿ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗುವುದು. ಬೆಳಗಾವಿಯ ರಸ್ತೆ ಇಕ್ಕೆಲಗಳ ಗೋಡೆಗಳ ಮೇಲೆ ಬಣ್ಣದ ಚಿತ್ರ ಬಿಡಿಸಲಾಗುವುದು. ಸಮ್ಮೇಳನ ವೆಚ್ಚವಾಗಿ ರೂ 30 ಕೋಟಿ ಮಂಜೂರು ಆಗಿದ್ದು, ಇದರಲ್ಲಿ 10 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣವೂ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದರು.ಪ್ರಧಾನಿಗೆ ಆಹ್ವಾನ: ಸಮ್ಮೇಳನ ಉದ್ಘಾಟನೆಗೆ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರನ್ನು ಆಹ್ವಾನಿಸಲು ಇದೇ 15, 16ರಂದು ದೆಹಲಿಗೆ ತೆರಳುವುದಾಗಿಯೂ ಕಾರಜೋಳ ತಿಳಿಸಿದರು.77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಸಾಧುವಾದ ಎಲ್ಲ ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದರು.

ರಿಯಾಯಿತಿ ದರದಲ್ಲಿ ಪುಸ್ತಕ: ಪ್ರಮುಖ ಸಾಹಿತಿಗಳ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸದ್ಯದಲ್ಲೇ ಪ್ರಕಟಣೆ ಹೊರಡಿಸಲಾಗುವುದು. ಸುಮಾರು 100 ಪುಸ್ತಕಗಳನ್ನು ಈ ರೀತಿ ಕಡಿಮೆ ಬೆಲೆಗೆ ಎಲ್ಲೆಡೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry