ಮಂಗಳವಾರ, ಮೇ 24, 2022
30 °C

ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ತಾರಾ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗವೂ ಭಾಗಿಯಾಗಿತ್ತು. ಚಿತ್ರರಂಗದ ಹಿರಿಕಿರಿಯರೆಲ್ಲ ಮೆರವಣಿಗೆಯಲ್ಲಿ ಸಾಗುವ ಮೂಲಕ ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ತಾರಾ ಮೆರಗು ನೀಡಿದರು.ಚಿತ್ರರಂಗದ ಕಲಾವಿದರ ಮೆರವಣಿಗೆ ನಗರದ ಸ್ವಾತಂತ್ರ್ಯ ಉದ್ಯಾನವನದಿಂದ ಆರಂಭಗೊಂಡಿತು. ನಟ, ಕಲಾವಿದ ಅರುಣ್ ಸಾಗರ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಹಂಪಿ ಕಲ್ಲಿನ ರಥದ ಸ್ತಬ್ಧಚಿತ್ರವನ್ನು ಹಿಂಬಾಲಿಸಿ ಹೊರಟ ಕನ್ನಡ ಚಿತ್ರರಂಗದ ನಟ- ನಟಿಯರ, ತಂತ್ರಜ್ಞರ ಮೆರವಣಿಗೆ ನಗರದ ಕೆ.ಆರ್. ವೃತ್ತ, ಕೇಂದ್ರ ಗ್ರಂಥಾಲಯದ ಮೂಲಕ ಹಡ್ಸನ್ ವೃತ್ತಕ್ಕೆ ಬಂದಿತು.ಅಲ್ಲಿಂದ ಪುರಭವನದ ಮೂಲಕ ಜೆ.ಸಿ. ರಸ್ತೆ ಮಾರ್ಗವಾಗಿ ಸಾಗಿದ ಮೆರವಣಿಗೆ ಅದಾಗಲೇ ಹೊರಟಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಹಿಂಬಾಲಿಸಿತು. ಚಿತ್ರರಂಗದ ಉಪೇಂದ್ರ, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶ್ರೀನಾಥ್, ಜೈಜಗದೀಶ್, ರಮೇಶ್ ಭಟ್, ಸಾ.ರಾ. ಗೋವಿಂದು, ದೊಡ್ಡಣ್ಣ, ವಿಜಯ್, ಅನು ಪ್ರಭಾಕರ್, ಜಯಂತಿ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡರು.ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರನ್ನು ನೋಡಿ, ಅವರಿಗೆ ಶುಭ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಮೆರವಣಿಗೆ ಪುರಭವನದಿಂದ ಮುಂದೆ ಜೆ.ಸಿ. ರಸ್ತೆಯಲ್ಲಿ ಸಾಗಿದಾಗ ಅಭಿಮಾನಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.‘ಕನ್ನಡ ಕನ್ನಡ, ಬನ್ನಿ ನಮ್ಮ ಸಂಗಡ’ ಎಂಬ ಘೋಷಣೆ ಕೇಳಿರುತ್ತಿತ್ತು.‘ಭಾಷೆ ಜೊತೆ ಚಿತ್ರರಂಗ’: ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ನಟ ಪುನೀತ್ ರಾಜ್‌ಕುಮಾರ್ ಅವರು, ‘ಚಿತ್ರರಂಗ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಜೊತೆಗೆ ಯಾವತ್ತೂ ಇರುತ್ತದೆ, ಚಿತ್ರರಂಗದ ಇಷ್ಟು ಮಂದಿ ಇವತ್ತು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವುದನ್ನು ನೋಡಿದರೆ ಖುಷಿಯಾಗುತ್ತದೆ’ ಎಂದರು.‘ಇದು ಕನ್ನಡಿಗರ ಹಬ್ಬ ಇದರಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದು ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿದರು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.