ಶನಿವಾರ, ಮೇ 28, 2022
30 °C

ಸಾಹಿತ್ಯ ಸಮ್ಮೇಳನ: ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕನ್ನಡನೆಟ್.ಕಾಂ ಹಾಗೂ ಕವಿಸಮೂಹದ 41ನೇ ಕವಿಸಮಯ ಕಾರ್ಯಕ್ರಮ ಈಚೆಗೆ ನಗರದ ಎನ್‌ಜಿಓ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಗಂಗಾವತಿಯಲ್ಲಿ ನಡೆಸಲು ಪರಿಷತ್ತಿನ ಕೇಂದ್ರ ಸಮಿತಿ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ಹಾಗೂ ಇತರ ಪದಾಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. 20 ವರ್ಷಗಳ ನಂತರ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದಕ್ಕೆ ಕವಿಸಮೂಹದ ಸದಸ್ಯರು ಹರ್ಷ ವ್ಯಕ್ತ ಪಡಿಸಿದರು.ನಂತರ ನಡೆದ ಕವಿಗೋಷ್ಠಿಯಲ್ಲಿ ಜಡೆಯಪ್ಪ ಎನ್. ನಾಗೇಂದ್ರಪ್ರಸಾದ, ಶಿವಪ್ರಸಾದ ಹಾದಿಮನಿ, ಶಾಂತು ಬಡಿಗೇರ, ಸಿರಾಜ್ ಬಿಸರಳ್ಳಿ, ಎಸ್.ಎಂ.ಕಂಬಾಳಿಮಠ ಅವರು ಕವನ ವಾಚನ ಮಾಡಿದರು. ಹನುಮಯ್ಯ ಸಂಘಟಿ, ಫಕೀರಪ್ಪ ಮೇಗಳಮನಿ, ನವೀನ ರಾಠೋಡ, ವೀರಣ್ಣ ಹುರಕಡ್ಲಿ, ರಾಧಾಕೃಷ್ಣ, ಹೊಸಮನಿ ಹಾಗೂ ಇತರರು ಉಪಸ್ಥಿತರಿದ್ದರು.ಕುಷ್ಟಗಿ: ಮುಂದಿನ ವರ್ಷದ ಅಖಿಲ ಭಾರತ 78ನೇ ಕನ್ನಡ ಸಮ್ಮೇಳನವನ್ನು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆಸುವಂತೆ ತೆಗೆದುಕೊಂಡಿರುವ ನಿರ್ಣಯವನ್ನು ತಾಲ್ಲೂಕಿನ ತಾವರಗೇರಾ ಹೋಬಳಿ ಘಟಕದ ಅಧ್ಯಕ್ಷ ಡಾ.ಶಾಹಮೀದ ದೋಟಿಹಾಳ, ಪದಾಧಿಕಾರಿಗಳಾದ ಹನಮಂತಪ್ಪ ಶಿರವಾರ, ಪ್ರಕಾಶ್ ಮಾಳಗಿ ಮತ್ತಿತರರು ಸ್ವಾಗತಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ರಾಯಚೂರು ಜಿಲ್ಲೆಯಲ್ಲಿದ್ದಾಗ ಹಿಂದೆ ಕೊಪ್ಪಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು, ಆದರೆ ಈಗ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ನಂತರ ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮಬಾರಿಗೆ ಸಮ್ಮೇಳನ ನಡೆಯುವುದು ಈ ಭಾಗದ ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಹಾಗಾಗಿ ಈ ಕುರಿತು ನಿರ್ಣಯ ತೆಗೆದುಕೊಂಡಿರುವ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹಾಗೂ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಮತ್ತು ಕಾರ್ಯಕಾರಿ ಸಮಿತಿಯವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದ್ದಾರೆ.ಕಾರಟಗಿ: 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭತ್ತದ ಕಣಜವಾಗಿರುವ ಗಂಗಾವತಿಯಲ್ಲಿ ನಡೆಸಲು ನಿರ್ಧರಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಘಟಕವು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದೆ.ಕನಕಗಿರಿ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಅಮರೇಶ್ ಮೈಲಾಪೂರ, ಪ್ರಧಾನ ಕಾರ್ಯದರ್ಶಿ ಭೀಮಣ್ಣ ಕರಡಿ ಹೇಳಿಕೆ ನೀಡಿ, ಕಾರಟಗಿಯಲ್ಲಿ ನಡೆಸಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನದ ಯಶಸ್ವಿಯೆ ಈ ನಿರ್ಧಾರಕ್ಕೆ ಕಾರಣವಾಗಿದೆ. ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಸಾಹಿತ್ಯ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು. ಈ ಮಹಾಕಾರ್ಯಕ್ಕೆ ಸಾಹಿತ್ಯ ವಲಯವೂ ಸೇರಿದಂತೆ ಇತರರು ಸಹಾಯ, ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದ್ದಾರೆ.ಸಂತಾಪ: ಸಾಹಿತಿ, ರಾಜಕಾರಣಿ, ಸಾಂಸ್ಕೃತಿಕ ರಂಗಕ್ಕೆ ಬಹುದೊಡ್ಡ ಕಾಣಿಕೆ ನೀಡಿದ್ದ ಎಂ. ಪಿ. ಪ್ರಕಾಶ್, ಖ್ಯಾತ ನಾಟಕಕಾರ ಎನ್. ಬಸವರಾಜ್ ನಿಧನಕ್ಕೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.