ಸಿಂಗಟಾಲೂರು ಬ್ಯಾರೇಜ್ ಭರ್ತಿ

ಶನಿವಾರ, ಜೂಲೈ 20, 2019
27 °C

ಸಿಂಗಟಾಲೂರು ಬ್ಯಾರೇಜ್ ಭರ್ತಿ

Published:
Updated:

ಹೂವಿನಹಡಗಲಿ: ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಳವಾಗಿದ್ದು, ಇಲ್ಲಿನ  ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಂಗ್ರಹಣಾ ಸಾಮರ್ಥ್ಯ ಭರ್ತಿಯಾಗಿದೆ.ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಸುರಿಯದಿದ್ದರೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಸಿಂಗಟಾಲೂರು ಬ್ಯಾರೇಜ್‌ನ ಗೇಟುಗಳ ಮೂಲಕ ತುಂಗಭದ್ರೆ ಭೋರ್ಗರೆದು ಹರಿಯುವ ರುದ್ರರಮಣೀಯ ದೃಶ್ಯ ನೋಡಲು ಜನ ಸಮೂಹ ತಂಡೋಪತಂಡವಾಗಿ ಬರುತ್ತಿದೆ.ಸತತ ಬರಗಾಲಕ್ಕೆ ತುತ್ತಾಗುವ ಬಳ್ಳಾರಿ, ಗದಗ ಮತ್ತು ಕೊಪ್ಪಳ ಜಿಲ್ಲೆಯ ರೈತರ ಜೀವನಾಡಿ ಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಗ್ಗೆ ಈ ಭಾಗದ ರೈತರು ಸಾಕಷ್ಟು ಕನಸು ಕಟ್ಟಿಕೊಂಡ್ದ್ದಿದಾರೆ. ಬಲದಂಡೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಎಡದಂಡೆ ಕಾಮಗಾರಿಯೂ ಭರದಿಂದ ಸಾಗಿದೆ.ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಂಗ್ರಹಣಾ ಸಾಮರ್ಥ್ಯ 3 ಟಿಎಂಸಿ ಇದ್ದು, 509 ಎಫ್‌ಆರ್‌ಎಲ್ (ಫುಲ್ ರಿಸರ್ವಾಯರ್ ಲೆವೆಲ್) ವರೆಗೆ ನೀರು ನಿಲ್ಲಿಸಬಹುದಾಗಿದೆ. ಆದರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯ ಇನ್ನೂ ಪ್ರಗತಿಯಲ್ಲಿ ರುವುದರಿಂದ ಸದ್ಯ  504 ಎಫ್‌ಆರ್‌ಎಲ್‌ಗೆ ನೀರು ನಿಲ್ಲಿಸಲಾಗಿದೆ. ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಳವಾಗಿರುವುದರಿಂದ ಕಳೆದ 10 ದಿನಗಳಿಂದ ಬ್ಯಾರೇಜ್‌ನ ಗೇಟುಗಳನ್ನು ತೆರೆದು ನದಿಗೆ ನೀರು ಹರಿಬಿಡಲಾಗುತ್ತದೆ.ಜುಲೈ 5-6ರಂದು 75ರಿಂದ 80 ಕ್ಯೂಸೆಕ್‌ವರೆಗೆ ಹೆಚ್ಚಳವಾಗಿದ್ದ ಒಳಹರಿವು ಭಾನುವಾರ ಮತ್ತೆ 30ರಿಂದ 35 ಸಾವಿರಕ್ಕೆ ತಗ್ಗಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಓದೋ ಗಂಗಪ್ಪ ತಿಳಿಸಿದರು.ಬಲದಂಡೆ ಭಾಗದಲ್ಲಿ ಮೊದಲನೇ ನೀರೆತ್ತುವ ಘಟಕದಿಂದ ಕೆ.ಅಯ್ಯನಹಳ್ಳಿ ಮತ್ತು ರಾಜವಾಳ ಗ್ರಾಮಗಳ ವಿತರಣಾ ಕಾಲುವೆ ಮೂಲಕ 8 ಸಾವಿರ ಎಕರೆಗೆ ಕೊಡಲಾಗುತ್ತದೆ. ಮುಂದಿನ ವಾರ ಮಾಗಳ ವಿತರಣಾ ಕಾಲುವೆಗೆ ನೀರು ಹರಿಸಿ ಗ್ರಾಮದ 4 ಸಾವಿರ ಎಕರೆ ಜಮೀನಿಗೆ ನೀರುಣಿಸಲಾಗುತ್ತಿದೆ. ಸದ್ಯ ದೇವಗೊಂಡನಹಳ್ಳಿ ಮತ್ತು ಮುದೇನೂರು ಕೆರೆಗಳಿಗೆ 140 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.ಬಲದಂಡೆಯ 2ನೇ ನೀರೆತ್ತುವ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ವಿತರಣಾ ಕಾಲುವೆ ಕೆಲಸ ನಡೆದಿದೆ. ಇದು ಪೂರ್ಣಗೊಂಡಲ್ಲಿ ಹೂವಿನಹಡಗಲಿ ತಾಲ್ಲೂಕಿನಲ್ಲಿ ಇನ್ನೂ 24 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry