ಭಾನುವಾರ, ಜೂನ್ 20, 2021
26 °C

ಸಿಂಗೇನಹಳ್ಳಿ-ತಾಳಿಕಟ್ಟೆ ಕಾವಲ್ ರಸ್ತೆಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಸರ್ಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಬೇಕು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಸಿಂಗೇನಹಳ್ಳಿಯಲ್ಲಿ ಶನಿವಾರ ರೂ. 1.65 ಕೋಟಿ ವೆಚ್ಚದ ಸಿಂಗೇನಹಳ್ಳಿ-ತಾಳಿಕಟ್ಟೆ ಕಾವಲ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ಕಷ್ಟಪಟ್ಟು ತೆರಿಗೆ ಕಟ್ಟಿದ ಹಣ ಮತ್ತೆ ಅವರಿಗೆ ತಲುಪಬೇಕು. ಈ ತತ್ವದ ಆಧಾರದಲ್ಲಿ ನಾನು ಕೆಲಸ ಮಾಡುತ್ತಿದ್ದು, ಕಾಮಗಾರಿಗಳ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಮುದ್ರಿಸಿ ಆಡಂಬರದಿಂದ ಸಮಾರಂಭ ನಡೆಸುವುದನ್ನು ಇಷ್ಟಪಡುವುದಿಲ್ಲ. ಹಳ್ಳ ಕೊಳ್ಳಗಳಲ್ಲಿ ನೀರು ಹರಿದರೆ ಅದು ಮಳೆ ಬಂದಿದ್ದಕ್ಕೆ ಸಾಕ್ಷಿ. ಅದು ಬಿಟ್ಟು ಕರಪತ್ರ ಮಾಡಿಸುತ್ತಾ ಕೂತರೆ ಕೆಲಸಗಳಾಗುವುದಿಲ್ಲ. ಅಷ್ಟಕ್ಕೂ ನನಗೆ ದಿನಕ್ಕೆ ಎರಡು ಮೂರು ಕಾಮಗಾರಿಗಳ ಭೂಮಿಪೂಜೆಯಾದರೂ ಇರುತ್ತವೆ. ಕೆಲಸ ಮುಖ್ಯವೇ ಹೊರತು, ಗುರುತಿಸಿಕೊಳ್ಳುವುದಲ್ಲ. ಮಳೆಗಾಲದ ಆರಂಭಕ್ಕೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಅಷ್ಟರೊಳಗೆ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು ಎಂದರು.

ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಇದ್ದಾಗ ಮಹತ್ವದ ಕೆಲಸಗಳನ್ನು ಮಾಡುವ ಮನಸ್ಸು ಇರಬೇಕು. ಕ್ಷೇತ್ರಕ್ಕೆ ರೂ. 500 ಕೋಟಿ ಅನುದಾನ ತಂದಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಿಂದಲೂ ಹಣ ಪಡೆದು ಕೆಲಸ ಮಾಡಿದ್ದೇನೆ. ಈಗ ನಿರ್ಮಿಸುತ್ತಿರುವ ರಸ್ತೆ ಭಾರೀ ನೀರಾವರಿ ಇಲಾಖೆಗೆ ಸೇರಿದ್ದು, ರಸ್ತೆಗೂ ನೀರಾವರಿ ಇಲಾಖೆಗೂ ಸಂಬಂಧ ಏನು ಎಂದು ಕೇಳಬಹುದು. ಪ್ರತೀ ಇಲಾಖೆಯಲ್ಲೂ ಒಂದಿಲ್ಲೊಂದು ಯೋಜನೆಗಳಿದ್ದು, ಅವುಗಳನ್ನು ಗುರುತಿಸಿ ಹಣ ತರುವ ಚಾಕಚಕ್ಯತೆ ಇರಬೇಕು. ಸುಮ್ಮನೆ ಕೂತರೆ ಯಾರೂ ಹಣ ಕೊಡುವುದಿಲ್ಲ. ಮತದಾರರ ಋಣ ತೀರಿಸುವುದು ನನ್ನ ಮೊದಲ ಕರ್ತವ್ಯ ಎಂದರು.

ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷ ಶಂಕರಮೂರ್ತಿ, ಮರುಳಸಿದ್ದಪ್ಪ, ಡಿ.ಬಿ. ಕುಮಾರ್, ಗಂಗಾಧರ್, ಮಹೇಶ್, ರಮೇಶಪ್ಪ, ನಟರಾಜ್, ಹೇಮಂತ್, ರಾಜಪ್ಪ, ಎಂಜಿನಿಯರ್ ಕುಮಾರ್, ರವಿಶಂಕರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.