ಶನಿವಾರ, ಡಿಸೆಂಬರ್ 7, 2019
21 °C
ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ

ಸಿಂಗ್-ಷರೀಫ್ ಮಾತುಕತೆ: ಬಾನ್ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗ್-ಷರೀಫ್ ಮಾತುಕತೆ: ಬಾನ್  ವಿಶ್ವಾಸ

ವಿಶ್ವಸಂಸ್ಥೆ (ಪಿಟಿಐ): ಮುಂದಿನ ವಾರ ಇಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಡುವಣ ಸಂಭಾವ್ಯ ಮಾತುಕತೆಯಲ್ಲಿ, ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಪರಿಹರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ  ಬಾನ್-ಕಿ-ಮೂನ್ ಬುಧವಾರ ಭರವಸೆ ವ್ಯಕ್ತಪಡಿಸಿದರು.

ಉಭಯ ರಾಷ್ಟ್ರಗಳ ನಡುವೆ ಗಡಿಯಲ್ಲಿ  ಇತ್ತೀಚೆಗೆ ನಡೆದ ಗುಂಡಿನ ದಾಳಿ ಘಟನೆಗಳ ಬಗ್ಗೆ ಚರ್ಚಿಸಲು ವಿಶ್ವ ಸಂಸ್ಥೆಯ ಸಾಮಾನ್ಯಸಭೆ ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಾನ್, ಉಭಯ ನಾಯಕರ ನಡುವಣ ಮಾತುಕತೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು.

`ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ಉಭಯ ನಾಯಕರ ಮಧ್ಯೆ ನಡೆಯುವ ಮಾತುಕತೆಯನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುವೆ' ಎಂದು ಭಾರತ-ಪಾಕ್ ನಾಯಕರ ನಡುವಣ ಸಂಭಾವ್ಯ ಮಾತುಕತೆ ಬಗೆಗಿನ ಪ್ರಶ್ನೆಗೆ ಬಾನ್ ಉತ್ತರಿಸಿದರು.

`ಗಡಿ ರೇಖೆಯುದ್ದಕ್ಕೂ ನಡೆಯುವ ಗುಂಡಿನ ದಾಳಿ ಹಾಗೂ ಕಾದಾಟದ ಬಗ್ಗೆ ನಾನು ತುಂಬಾ ಕಳವಳಗೊಂಡಿದ್ದೆ. ವಿಶ್ವಸಂಸ್ಥೆಯ 68ನೇ ಸಾಮಾನ್ಯ ಸಭೆಯ ಅಂಗವಾಗಿ ಭೇಟಿಯಾದಾಗ ಉಭಯ ನಾಯಕರು ಈ ಸಮಸ್ಯೆ ಕೈಗೆತ್ತಿಕೊಂಡು ಚರ್ಚಿಸಬೇಕು ಹಾಗೂ ಚರ್ಚಿಸಲಿರುವರು' ಎಂದೂ ಬಾನ್ ಹಾರೈಸಿದರು.

`ಎರಡು ಪ್ರಮುಖ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಸುಧಾರಿಸುವುದೇ ಕಳೆದ ತಿಂಗಳು ನಾನು ಪಾಕಿಸ್ತಾನ ಭೇಟಿಯಲಿದ್ದಾಗ ಇದ್ದ ಪ್ರಮುಖ ಕಾರ್ಯಸೂಚಿಯಾಗಿತ್ತು' ಎಂದೂ ವಿಶ್ವಸಂಸ್ಥೆಯ ಮುಖ್ಯಸ್ಥ ಹೇಳಿದರು.

ಅಲ್ಲದೇ `ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಎಲ್ಲಾ ನಾಯಕರು ಪಾಲ್ಗೊಳ್ಳಲಿರುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಲಾಭ ಪಡೆಯುವಂತೆ ಪಾಕ್ ಪ್ರಧಾನಿ ಷರೀಫ್ ಅವರಿಗೆ ನಾನು ಶಿಫಾರಸು ಮಾಡಿರುವೆ. ಇಂತಹ ಒಂದು ಮಾತುಕತೆಯನ್ನು ಸ್ವಾಗತಿಸುವ ಜೊತೆಗೆ ಈ ನಿಟ್ಟಿಯಲ್ಲಿ ಪ್ರಯತ್ನ ಹಾಗೂ ಬೆಂಬಲ ಒದಗಿಸುವೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)