ಶುಕ್ರವಾರ, ಜೂನ್ 18, 2021
28 °C

ಸಿಂಗ್ ಹತ್ಯೆ: ನ್ಯಾಯಾಂಗ ತನಿಖೆಗೆ ಸಿಎಂ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ವಾಲಿಯರ್‌ (ಮಧ್ಯಪ್ರದೇಶ), (ಪಿಟಿಐ): ~ ಕಲ್ಲು ಗಣಿ ಮಾಫಿಯಾ ತಡೆಯುವಲ್ಲಿ ನನ್ನ ಮಗನಿಗೆ ಸ್ಥಳೀಯ ಅಧಿಕಾರಿಗಳು  ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳೂ ಸಹಕಾರ ನೀಡಲಿಲ್ಲ. ಅವನ ಕೊಲೆ ಒಂದು ವ್ಯವಸ್ಥಿತವಾದ ಪಿತೂರಿ ~ ಎಂದು ಮೊರೇನ ಜಿಲ್ಲೆಯಲ್ಲಿ ಗುರುವಾರ ಕೊಲೆಗೀಡಾದ ಐಪಿಎಸ್ ಅಧಿಕಾರಿ 30 ವರ್ಷದ ನರೇಂದ್ರ ಕುಮಾರ್ ಸಿಂಗ್ ಅವರ ತಂದೆ ಕೇಶವ ದೇವ್ ಅವರು ಶುಕ್ರವಾರ ಬೆಳಿಗ್ಗೆ ಆರೋಪಿಸಿದ್ದರೆ, ಮಧ್ಯಾಹ್ನದ ಹೊತ್ತಿಗೆ ಮುಖ್ಯಮಂತ್ರಿ ಚೌಹಾಣ್ ಅವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.ಐಎಎಸ್ ಅಧಿಕಾರಿಯಾಗಿರುವ ಕೊಲೆಗೀಡಾದ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಅವರ ಪತ್ನಿ ಮತ್ತು ಅವರ ಕುಟುಂಬದ ಸದಸ್ಯರು ಈ ದುರ್ಘಟನೆಯಿಂದಾಗಿ ದಿಗ್ಬ್ರಾಂತರಾಗಿದ್ದಾರೆ.

ಮಥುರಾದಿಂದ 50 ಕಿ.ಮೀ ದೂರದ ಹಳ್ಳಿಯೊಂದರಲ್ಲಿರುವ  ಕುಟುಂಬದ ಸದಸ್ಯರಿಗೆ, ಹೋಳಿ ಹಬ್ಬದ ಆಚರಣೆಯ ದಿನದಂದು ನಡೆದ ಈ ದಾರುಣ ಘಟನೆಯು ಸಿಡಿಲಿನಂತೆ ಬಂದೆರಗಿ, ಅವರನ್ನು ದುಃಖದ ಮಡುವಿಗೆ ದೂಡಿದೆ. ನ್ಯಾಯಾಂಗ ತನಿಖೆಗೆ ಆದೇಶ: 
ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರ ಮಧ್ಯಾಹ್ನ ಆದೇಶಿಸಿದ್ದಾರೆ.~ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಕೊಲೆ ಘಟನೆಯು ಒಂದು ದುರಂತವಾಗಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ತಂಡವು ಪ್ರಕರಣದ ಹಿಂದಿನ ಸತ್ಯಾಂಶಗಳನ್ನು ಬಯಲಿಗೆ ಎಳೆಯಲಿದೆ~ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ಕೊಲೆಗೀಡಾದ ಅಧಿಕಾರಿಯ ಕುಟುಂಬದವರು ಯಾವುದೇ ಬಗೆಯ ಸಹಾಯವನ್ನು ಕೇಳಿದರೂ ಅದನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಕಾಂಗ್ರೇಸ್ ಪಕ್ಷದ ನಾಯಕ ಮನಕ್ ಅಗರ್ ವಾಲ್ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.