ಸಿಂಡಿಕೇಟ್‌ ಬ್ಯಾಂಕ್‌: ಶೇ 25ರಷ್ಟು ಮಧ್ಯಂತರ ಲಾಭಾಂಶ

7

ಸಿಂಡಿಕೇಟ್‌ ಬ್ಯಾಂಕ್‌: ಶೇ 25ರಷ್ಟು ಮಧ್ಯಂತರ ಲಾಭಾಂಶ

Published:
Updated:

ಉಡುಪಿ: ‘ಸಿಂಡಿಕೇಟ್‌ ಬ್ಯಾಂಕ್‌ನ ಷೇರು­ದಾರರಿಗೆ ಮಧ್ಯಂತರ ಶೇ 25ರಷ್ಟು ಲಾಭಾಂಶ ನೀಡಲು (ಡಿವಿಡೆಂಡ್‌) ಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಕುಮಾರ್‌ ಜೈನ್‌ ಹೇಳಿದರು.ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲದಲ್ಲಿ ಆರಂಭಿಸಿ­ರುವ ಫೀಲ್ಡ್‌ ಜನರಲ್‌ ಮ್ಯಾನೇಜರ್‌ ಕಚೇರಿಯನ್ನು (ಎಫ್‌ಜಿಎಂಓ) ಶುಕ್ರವಾರ ಉದ್ಘಾಟಿಸಿ ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬ್ಯಾಂಕ್‌ನ ದುಡಿಯದ ಬಂಡವಾಳದ ಪ್ರಮಾಣ (ಎನ್‌ ಪಿಎ)  ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ರಾಷ್ಟ್ರೀಯ ಸರಾಸರಿ 4.5ರಷ್ಟಿದ್ದರೆ ಸಿಂಡಿಕೇಟ್‌ ಬ್ಯಾಂಕ್‌ನ ಎನ್‌ಪಿಎ 2.8ರಷ್ಟಿದೆ. ನಿವ್ವಳ ಕೇವಲ 1.60­ರಷ್ಟಿದೆ. ಇದನ್ನು ಇನ್ನೂ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಇನ್ನೂ ಎರಡು ಕಡೆ ಹೊಸದಾಗಿ ಪ್ರಾದೇಶಿಕ ಕಚೇರಿ ಆರಂಭಿಸ­ಲಾಗುತ್ತದೆ. ನೂರು ಶಾಖೆಗಳಿಗೆ ಒಂದು ಪ್ರಾದೇಶಿಕ ಕಚೇರಿ ಇರಬೇಕು ಎಂಬುದು ಉದ್ದೇಶವಾಗಿದೆ ಎಂದರು.ಹಾಂಗ್‌ಕಾಂಗ್‌, ಯುಎಇ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶಾಖೆಯನ್ನು ತೆರೆಯಲು ನಿರ್ಧರಿಸಲಾಗಿದೆ. ಆರ್‌ಬಿಐಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.2014ರಲ್ಲಿ 2500 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇವರಲ್ಲಿ ಸುಮಾರು 750 ಮಂದಿ ವಿಶೇಷ ಅಧಿಕಾರಿಗಳೂ ಇರಲಿದ್ದಾರೆ. ಈಗಿರುವ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಶಾಖೆಗಳನ್ನು 3500ಕ್ಕೆ ಹೆಚ್ಚಿಸಲಾಗುತ್ತದೆ. ಅದಾಲತ್‌ ಮೂಲಕ ಸಾಲ ವಸೂಲಾತಿ ಮಾಡಲಾಗುತ್ತಿದೆ. ಸುಮಾರು ರೂ.100 ಕೋಟಿ ಅದಾಲತ್‌ ಮೂಲಕ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಗ್ರಾಹಕರಿಗೆ ಅಧಿಕಾರಿಗಳು ಸುಲಭವಾಗಿ ಲಭ್ಯವಿರಬೇಕು ಮತ್ತು ಕೆಲಸಗಳು ತ್ವರಿತಗತಿ­ಯಲ್ಲಿ ಆಗಬೇಕು ಎಂಬ ಕಾರಣಕ್ಕೆ ಎಫ್‌ಜಿಎಂಓ ಕಚೇರಿ ಆರಂಭಿಸಲಾಗಿದೆ. ಉತ್ತರ ಭಾರತದಲ್ಲಿ ನಾಲ್ಕು ಹಾಗೂ ದಕ್ಷಿಣ ಭಾರತದ ನಾಲ್ಕು ಕಡೆ ಎಫ್‌ಜಿಎಂಓ ಕಚೇರಿ ಆರಂಭಿಸಲಾಗಿದ್ದು, ರಾಜ್ಯದ  ಮಣಿಪಾಲ ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಕಚೇರಿ ಇದೆ ಎಂದರು.‘ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ. ಒಂದು ಮಿಸ್‌ಕಾಲ್‌ ನೀಡಿದರೆ ಆ ಮೊಬೈಲ್‌ ಸಂಖ್ಯೆಗೆ ಖಾತೆದಾರರ ಬಾಕಿ ವಿವರಗಳನ್ನು ನೀಡುವ ನೂತನ ಸೇವೆಯನ್ನು ಎರಡು ತಿಂಗಳ ಹಿಂದೆ ಜಾರಿಗೆ ತರಲಾಗಿದೆ’ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಕೆ. ಶ್ರೀವಾಸ್ತವ ಹೇಳಿದರು.ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್‌, ಕಚೇರಿಯ ಮಹಾ ಪ್ರಬಂಧ­ಕ ಕೆ.ಟಿ. ರೈ, ಸಹಾಯಕ ಮಹಾ ಪ್ರಬಂಧ­ಕ ಪಿ..ಪಳನಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry